ಧಾರವಾಡ: ಅಂಜಲಿ ಹತ್ಯೆ ಪ್ರಕರಣದ (Anjali Murder Case) ಆರೋಪಿ ಗಿರೀಶ್‌ನನ್ನು ಎನ್‌ಕೌಂಟರ್ ಮಾಡಬೇಕು. ಯಾವುದೇ ಕಾರಣಕ್ಕೂ ಆರೋಪಿಗೆ ಚಿಕಿತ್ಸೆ ಕೊಡಬಾರದು, ಅವನನ್ನು ಆದಷ್ಟು ಬೇಗ ಎನ್ ಕೌಂಟರ್ ಮಾಡಬೇಕು. ನಮ್ಮ ಅಕ್ಕ ಹೇಗೆ ರಕ್ತ ಸುರಿದು ಪ್ರಾಣ ಬಿಟ್ಟಳೋ ಅದೇ ರೀತಿ ಅವನು ಸಾಯಬೇಕು ಎಂದು ಅಂಜಲಿ ಸಹೋದರಿ ಪೂಜಾ ಆಗ್ರಹಿಸಿದ್ದಾರೆ.
ವಿಸ್ತಾರ ನ್ಯೂಸ್ ಜತೆ ಶುಕ್ರವಾರ ಮಾತನಾಡಿರುವ ಅಂಜಲಿ ಸಹೋದರಿ ಪೂಜಾ, ನಮ್ಮ ಅಕ್ಕನಿಗೂ ಅವನಿಗೂ ಯಾವುದೇ ಸಂಬಂಧ ಇಲ್ಲ. ಏನೇನೋ ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಪೊಲೀಸರು ಹೇಗೆ ಬೇಕೋ ಹಾಗೆ ಮಾಡುವ ವಿಚಾರದಲ್ಲಿದ್ದಾರೆ. ಇದನ್ನು ಆದಷ್ಟು ಬೇಗ ತನಿಖೆ ಮಾಡಬೇಕು. ಬೆಳಗ್ಗೆ ಮಾತನಾಡಲು ಬಂದವನು ಚಾಕು ಹಾಕಿದ. ನಾವು ನಮ್ಮ ಅಕ್ಕನ ಜತೆ ಮಾತನಾಡಲು ಸಹ ಆಗಲಿಲ್ಲ. ಕೊನೆ ಗಳಿಗೆಯಲ್ಲಿ ಪೊಲೀಸರು ಬಂದು ಡಾಕ್ಟರ್ ಸಹ ಕರೆಯಲಿಲ್ಲ. ಕೇವಲ ಪೋಟೋ ತೆಗೆದುಕೊಂಡು ಹೋದರು. ಅವನಿಗೆ ಅದೇ ರೀತಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ನಮ್ಮ ಅಕ್ಕನ ಜತೆಗೆ ಏನೇನೋ ಸಂಬಂಧ ಕಲ್ಪಿಸುತ್ತಿದ್ದಾರೆ. ಹಾಗಾದರೆ ನೆನ್ನೆಯೂ ಸಹ ಅವನು ಯಾರದೋ ಜೊತೆ ಜಗಳ ಮಾಡಿದ್ದ. ಅವರಿಗೂ ಸಂಬಂಧ ಇದೆಯಾ ಎಂದು ಸಹೋದರಿ ಪ್ರಶ್ನೆ ಮಾಡಿದ್ದಾರೆ.
ಹಲ್ಲೇ ಮಾಡಿ ಓಡಿ ಹೋದ
ದಾವಣಗೆರೆ: ಮಹಿಳೆಗೆ ಅಂಜಲಿ ಹಂತಕನಿಂದ ಚಾಕು ಇರಿತ ಪ್ರಕರಣದ ಬಗ್ಗೆ ಗಾಯಾಳು ಮಹಿಳೆಯ ಪತಿ ಪ್ರತಿಕ್ರಿಯಿಸಿದ್ದಾರೆ. ನಾವು ಟ್ರೈನ್‌ನಲ್ಲಿ ಇರುವಾಗ ಅರೋಪಿ ಗಿರೀಶ್ ಹಿಂದೆ ಹಿಂದೆಯೇ ಬರುತ್ತಿದ್ದ. ರೆಸ್ಟ್ ರೂಂನ ಡೋರ್ ಓಪನ್ ಮಾಡಿ ಒಳ ನುಗ್ಗಲು ಯತ್ನಿಸಿದ. ಹೊಟ್ಟೆಗೆ ಚಾಕು ಚುಚ್ಚಲು ಮುಂದಾದಾಗ ನಾನು ಕೈ ಅಡ್ಡ ಹಿಡಿದೆ. ಕೈಗೆ ಗಾಯವಾಗುತ್ತಿದ್ದಂತೆ ಕೂಗಿಕೊಂಡೆ, ಆತ ಓಡಿಹೋದ ಎಂದು ಗದಗ ಮೂಲದ ಲಕ್ಷ್ಮೀ ಪತಿ ಮಹಾಂತೇಶ್ ತಿಳಿಸಿದ್ದಾರೆ. ಸದ್ಯ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.
5 ಸಾವಿರ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ಬಂದಿಲ್ಲ
ಅಂಜಲಿ ಹತ್ಯೆ ಕೊಲೆ ಪ್ರಕರಣದ ಆರೋಪಿ ಗಿರೀಶ್ ಕಳೆದ ನಾಲ್ಕು ತಿಂಗಳಿನಿಂದ ಮೈಸೂರಿನ ಮಹಾರಾಜ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುವುದು ತಿಳಿದುಬಂದಿದೆ. ಈ ಬಗ್ಗೆ ಮಹಾರಾಜ ಹೋಟೆಲ್ ಮಾಲೀಕ ಗೋವರ್ಧನ್ ಪ್ರತಿಕ್ರಿಯಿಸಿ, ವಿನಾಯಕ ನರ್ಸಿಂಗ್ ಕೇರ್ ಏಜೆನ್ಸಿ ಮೂಲಕ ನಮ್ಮ ತಂದೆ ನೋಡಿಕೊಳ್ಳಲು ಆರೋಪಿ ಗಿರೀಶ್ ಬಂದಿದ್ದ. ರೂಂ ಬಾಯ್, ಸಪ್ಲೈಯರ್ ಆಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Bhatkal News: ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು
ಗಿರೀಶ್ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಒಮ್ಮೆ 10 ದಿನ, 5 ದಿನ ಹೀಗೆ ರಜಾ ತೆಗೆದುಕೊಳ್ಳುತ್ತಿದ್ದ. ಏಜೆನ್ಸಿ ಮೂಲಕ ಬಂದ ಕಾರಣ ಹೆಚ್ಚು ರಜಾ ತೆಗೆದುಕೊಂಡರೂ ನಾನು ಅವನ ಬಗ್ಗೆ ಕೇಳುತ್ತಿರಲಿಲ್ಲ. ಮಂಗಳವಾರ ಸಂಜೆ 5 ಸಾವಿರ ರೂ. ಹಣ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ವಾಪಸ್ ಬಂದಿಲ್ಲ ಎಂದು ಹೇಳಿದ್ದಾರೆ.
ಮರುದಿನ ಪೊಲೀಸರು ನನಗೆ ಕರೆ ಮಾಡಿದಾಗಲೇ ಗಿರೀಶ್ ಕೊಲೆ ಮಾಡಿದ್ದಾನೆ ಎಂಬುದು ತಿಳಿಯಿತು. ನಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಎಂದು ಅವನ ಬಗ್ಗೆ ಹೇಳಿದ್ದರು. ಜತೆಗೆ ಕಂಪನಿಯ ಫೋನ್‌ನಿಂದ ಹೆಚ್ಚು ದಿನ ಮಾತನಾಡಿದ್ದಾನೆ. ಘಟನೆ ನಡೆಯುವ ಹಿಂದಿನ ದಿನ ಜೋರಾಗಿ ಕೂಗಾಡಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನಂತೆ. ನಮ್ಮ ಹೋಟೆಲ್‌ಗೆ ಏಳು ಪೊಲೀಸರು ಬಂದಿದ್ದರು. ನೆನ್ನೆ ರಾತ್ರಿಯವರೆಗೂ ಪೊಲೀಸರಿ ನಮ್ಮ ಹೋಟೆಲ್‌ನಲ್ಲಿ ಇದ್ದರು. ಆತ ದಾವಣಗೆರೆಯಲ್ಲಿ ಸಿಕ್ಕ ಬಳಿಕ ಮಧ್ಯರಾತ್ರಿ ಪೊಲೀಸರು ಇಲ್ಲಿಂದ ತೆರಳಿದರು ಎಂದು ತಿಳಿಸಿದ್ದಾರೆ.