ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ಒಂದಾದ ಅನ್ನಭಾಗ್ಯ ಯೋಜನೆಯ (Anna Bhagya Scheme) ಸಹಸ್ರಾರು ಫಲಾನುಭವಿಗಳಿಗೆ ಇದುವರೆಗೂ ಖಾತೆಗೆ ಹಣ ಜಮೆಯಾಗದಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ಕಾರಣದಿಂದಾಗಿ ಅನ್ನಭಾಗ್ಯ ಯೋಜನೆಯ ಯಜಮಾನಿ ಫಲಾನುಭವಿ ಖಾತೆಗೆ ಇದುವರೆಗೂ ಹಣ ಹೋಗದೇ ಇದ್ದಲ್ಲಿ ಇನ್ನು ಮುಂದೆ ಎರಡನೇ ಯಜಮಾನ/ನಿ ಖಾತೆಗೆ (ಅಂದರೆ ಸೀನಿಯರ್ ಖಾತೆಗೆ) ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯದ ಹಣವನ್ನು ಇದುವರೆಗೂ ಪಡೆಯದೇ ಇದ್ದವರಿಗೆ ಈ ಡಿಸೆಂಬರ್ ತಿಂಗಳಿಂದ ಕೆಜಿ ಅಕ್ಕಿಗೆ ತಲಾ 30 ರೂಪಾಯಿಯಂತೆ ಒಬ್ಬರಿಗೆ 170 ರೂಪಾಯಿಯನ್ನು ರಾಜ್ಯ ಸರ್ಕಾರ ಜಮೆ ಮಾಡಲಿದೆ.
ಇದುವರೆಗೆ ಪಡಿತರವನ್ನು ಸಮರ್ಪಕವಾಗಿ ಪಡೆದರೂ ಅನ್ನಭಾಗ್ಯ ಯೋಜನೆಯಡಿ ಬಾಕಿ 5 ಕೆಜಿ ಅಕ್ಕಿ ಸಿಗದೇ ಇದ್ದ ಕುಟುಂಬಕ್ಕೆ ಈ ಡಿಸೆಂಬರ್ ತಿಂಗಳಿಂದ ಹಣ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮನೆ ಯಜಮಾನಿ ಖಾತೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ಹಣ ಹಾಕಲು ಆಗಿರುವುದಿಲ್ಲ. ಹೀಗಾಗಿ ಅವರ ತರುವಾಯ ಸೀನಿಯರ್ ಇರುವವರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ಈಚೆಗೆ ತೀರ್ಮಾನವನ್ನು ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ ಬಾಕಿ ಇರುವವರಿಗೂ ಹಣ ಜಮೆ ಆಗಲಿದೆ.
ಇದನ್ನೂ ಓದಿ: Yuva Nidhi Scheme: ಜನವರಿಯಲ್ಲೇ ಯುವನಿಧಿ ಜಾರಿ; ಅರ್ಹತೆ ಯಾರಿಗಿದೆ? ಈ ದಾಖಲೆ ನಿಮ್ಮಲ್ಲಿರಲಿ!
ರಾಜ್ಯದಲ್ಲಿ ಒಟ್ಟು 12774648 ಬಿಪಿಎಲ್ ಕಾರ್ಡ್‌ಗಳು (BPL Card) ಇವೆ. ಏಳು ಲಕ್ಷಕಿಂತಲೂ (7.67 ಲಕ್ಷ) ಅಧಿಕ ಅಂತ್ಯೋದಯ ಕಾರ್ಡ್ ಇವೆ. ಯಜಮಾನಿ ಇಲ್ಲದ ಮನೆಗೆ ಕುಟುಂಬದ ಸೀನಿಯರ್‌ಗೆ ಕೊಡಲಾಗುವುದು ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದರು.
ಗೃಹಲಕ್ಷ್ಮಿ – ಅನ್ನಭಾಗ್ಯ ಕಾಸು ಜಮೆಗೆ ಡೆಡ್‌ಲೈನ್
ಗೃಹಲಕ್ಷ್ಮಿ (Gruha Lakshmi Scheme) ಹಾಗೂ ಅನ್ನಭಾಗ್ಯ ಯೋಜನೆಯ (Anna Bhagya Scheme) ಹಣವು ಫಲಾನುಭವಿಗಳ ಖಾತೆಗೆ ಜಮೆ ಆಗಲು ಗಡುವು ವಿಧಿಸಿ ರಾಜ್ಯ ಸರ್ಕಾರ ನವೆಂಬರ್‌ನಲ್ಲಿ ಆದೇಶಿಸಿತ್ತು. ಅನ್ನಭಾಗ್ಯದ ದುಡ್ಡನ್ನು ಪ್ರತಿ ತಿಂಗಳ 15ರೊಳಗೆ ಹಾಗೂ ಗೃಹಲಕ್ಷ್ಮಿ ದುಡ್ಡನ್ನು ಪ್ರತಿ ತಿಂಗಳ 20ರೊಳಗೆ ಜಮಾ ಮಾಡುವಂತೆ ಆರ್ಥಿಕ ಇಲಾಖೆ ಸುತ್ತೋಲೆಯನ್ನು ಹೊರಡಿಸಿತ್ತು.
ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಈ ತೀರ್ಮಾನವನ್ನು ಕೈಗೊಂಡಿತ್ತು. ಜತೆಗೆ ಲೋಕಸಭಾ ಚುನಾವಣೆ ಒಳಗೆ ಈ ಬಗ್ಗೆ ಇರುವ ಗೊಂದಲಕ್ಕೆ ತೆರೆ ಎಳೆದು ಲಾಭ ಪಡೆದುಕೊಳ್ಳಲು ಮುಂದಾಗಲಾಗಿದೆ ಎಂದೂ ಸಹ ವಿಶ್ಲೇಷಿಸಲಾಗುತ್ತಿದೆ.
ಅನ್ನಭಾಗ್ಯ ಯೋಜನೆಯ ಹಣವನ್ನು ಪ್ರತಿ ತಿಂಗಳು 10ನೇ ತಾರೀಖಿನಿಂದ 15ನೇ ತಾರೀಖಿನೊಳಗೆ ಜಮೆ ಮಾಡಲು ಸೂಚನೆ ನೀಡಲಾಗಿದೆ. ಹಾಗೆಯೇ ಗೃಹಲಕ್ಷ್ಮಿ ಹಣವನ್ನು ತಿಂಗಳ 15- 20 ರೊಳಗೆ ಜಮೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Aadhaar update: ಆಧಾರ್ ಕಾರ್ಡ್ ಉಚಿತ ಅಪ್ಡೇಟ್‌ಗೆ 4 ದಿನ ಮಾತ್ರವೇ ಅವಕಾಶ! ಹೀಗೆ ಮಾಡಿ ನವೀಕರಿಸಿ
ವಿಸ್ತಾರ ನ್ಯೂಸ್ ನಡೆಸಿತ್ತು ಅಭಿಯಾನ
ಗ್ಯಾರಂಟಿ ಯೋಜನೆಗಳು ಎಲ್ಲ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ವಿಸ್ತಾರ ನ್ಯೂಸ್ ಅಭಿಯಾನ ನಡೆಸಿತ್ತು. ನಮ್ಮ ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರವು ಈಗ ಹಣ ಜಮೆಗೆ ಗಡುವನ್ನು ನಿಗದಿಪಡಿಸಿದೆ. ಇನ್ನು ಸಾಮಾಜಿಕ ಭದ್ರತೆ ಪಿಂಚಣಿಯನ್ನು ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಪಾವತಿಸಲು ಸೂಚನೆ ನೀಡಲಾಗಿದೆ. ಆರ್ಥಿಕ ಇಲಾಖೆಯಿಂದ ಈ ಆದೇಶವನ್ನು ನೀಡಲಾಗಿತ್ತು.