ಬೆಂಗಳೂರು: ಒಂದೆಡೆ ʼಅನ್ನಭಾಗ್ಯʼ ಕಾರ್ಯಕ್ರಮಕ್ಕಾಗಿ ಅನ್ಯ ರಾಜ್ಯಗಳಿಂದ ಅಕ್ಕಿ ಖರೀದಿಗೆ (Anna bhagya Rice) ರಾಜ್ಯ ಸರ್ಕಾರ ಒದ್ದಾಡುತ್ತಿರುವ ಸಂದರ್ಭದಲ್ಲೇ, ಅವೈಜ್ಞಾನಿಕ ಗೋದಾಮು ವ್ಯವಸ್ಥೆಯಿಂದಾಗಿಯೇ ರಾಜ್ಯಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಅಧ್ಯಯನವೊಂದು ಹೊರಗೆಡಹಿದೆ.
ರಾಜ್ಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಈ ಕುರಿತು ಅಧ್ಯಯನ ನಡೆಸಿದೆ. ಹಲವಾರು ಶೇಖರಣಾ ಗೋದಾಮುಗಳಲ್ಲಿ ಅವೈಜ್ಞಾನಿಕವಾಗಿ ಅಕ್ಕಿಯನ್ನು ಸಂಗ್ರಹಿಸಿ ಇಟ್ಟಿರುವುದರಿಂದ ಅದು ಹಾಳಾಗುತ್ತಿದ್ದು, ರಾಜ್ಯಕ್ಕೆ ನಷ್ಟವನ್ನುಂಟುಮಾಡುತ್ತಿದೆ ಎಂದು ಬಹಿರಂಗಪಡಿಸಿದೆ.
“ಮೌಲ್ಯಮಾಪನ ಪ್ರಾಧಿಕಾರದಿಂದ ಅಧ್ಯಯನ ನಡೆಸಲಾಗಿದ್ದು, 2013ರಿಂದ 2019ರವರೆಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಯನ್ನು ವಿಶ್ಲೇಷಿಸಲಾಗಿದೆ. ರಾಜ್ಯದಲ್ಲಿ 39.3% ಆಹಾರ ಧಾನ್ಯಗಳನ್ನು ಅವೈಜ್ಞಾನಿಕ ಮತ್ತು ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿ ಸಂಗ್ರಹಿಸಿಡಲಾಗಿದೆ. ಇದು ದೊಡ್ಡ ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ. ಇವುಗಳಲ್ಲಿ ಗೋಡೌನ್‌ಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಳಿಗೆಗಳು ಸೇರಿವೆ” ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವರದಿಯನ್ನು ಪರಿಶೀಲಿಸಿ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. “ಯಾವುದೇ ನಷ್ಟ ಸಂಭವಿಸದಂತೆ ಖಚಿತಪಡಿಸಿಕೊಳ್ಳಲು ಈ ವಿತರಣಾ ಏಜೆಂಟ್‌ಗಳ ಪರವಾನಗಿಗಳನ್ನು ಪರಿಶೀಲಿಸಲು ಅಥವಾ ರದ್ದುಗೊಳಿಸಲು ಪ್ರಾಧಿಕಾರವು ಶಿಫಾರಸು ಮಾಡಿದೆ. ಅವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.
ಅದೇ ರೀತಿ, ಬೆಂಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡದಂತಹ ಪ್ರದೇಶಗಳಲ್ಲಿ ಸಾರ್ವಜನಿಕ ವಿತರಣ ವ್ಯವಸ್ಥೆಯ ಜನಪ್ರಿಯತೆ ಕಡಿಮೆಯಾಗಿದೆ. ಹೀಗಾಗಿ ಅದನ್ನು ಬೇರೆ ಭಾಗಗಳಿಗೆ ಮರುನಿರ್ದೇಶಿಸಬಹುದು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದನ್ನು ಸರ್ಕಾರದೊಂದಿಗೆ ಪ್ರಾಧಿಕಾರ ಚರ್ಚಿಸಲಿದೆ.
ಕರ್ನಾಟಕ ಸರ್ಕಾರವು ಅಕ್ಕಿಯನ್ನು ಸಂಗ್ರಹಿಸಲು ಮುಕ್ತ ಮಾರುಕಟ್ಟೆಯಿಂದ ಟೆಂಡರ್ ಕರೆದಿದೆ ಎಂದು ಬುಧವಾರ ಪ್ರಕಟಿಸಿದೆ. ಭಾರತೀಯ ಆಹಾರ ನಿಗಮ (ಎಫ್‌ಸಿಐ) ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡಲು ನಿರಾಕರಿಸಿದ ನಂತರ ರಾಜ್ಯ ಸರ್ಕಾರ ಬೇರೆಡೆಗಳಿಂದ ಖರೀದಿಗೆ ಮುಂದಾಗಿದೆ. ಆಹಾರ ಧಾನ್ಯದ ಖರೀದಿ ಸಮಸ್ಯೆ ಪರಿಹಾರ ಆಗುವರೆಗೆ ಅಕ್ಕಿ ಬದಲಿಗೆ ಬಿಪಿಎಲ್ ಕುಟುಂಬಗಳಿಗೆ ನಗದು ನೀಡುವುದಾಗಿ ಸರ್ಕಾರ ಘೋಷಿಸಿದೆ. ಮೊದಲು ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು.
ಅಕ್ಕಿ ಖರೀದಿಯಲ್ಲಿನ ತೊಂದರೆಯಿಂದಾಗಿ ಸರ್ಕಾರವು ಪ್ರತಿ ಕೆಜಿ ಅಕ್ಕಿಗೆ ₹ 34 ನೀಡಲು ನಿರ್ಧರಿಸಿದೆ. ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರು ಐದು ಕೆಜಿ ಅಕ್ಕಿಯ ಹಣವನ್ನು ಪಡೆಯುತ್ತಾರೆ. ಉಳಿದ ಐದು ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ. ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ಅಕ್ಕಿಯನ್ನು ಖರೀದಿಸುವವರೆಗೆ ನಗದು ಪಾವತಿ ಮುಂದುವರಿಯಲಿದೆ.
ಅಕ್ಕಿ ನೀಡಲು FCI ನಿರಾಕರಿಸಿದ ನಂತರ ರಾಜ್ಯ ಸರ್ಕಾರ ಅನೇಕ ಅಕ್ಕಿ ಉತ್ಪಾದಿಸುವ ರಾಜ್ಯಗಳನ್ನು ಸಂಪರ್ಕಿಸಿದೆ. ಆದರೆ ರಾಜ್ಯದ ಅಕ್ಕಿ ಅವಶ್ಯಕತೆ ಪೂರೈಸುವ ಪ್ರಮಾಣದಲ್ಲಿ ಎಲ್ಲೂ ಲಭ್ಯವಿಲ್ಲ. ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ಮತ್ತು ಪಂಜಾಬ್‌ಗಳನ್ನು ಸಂಪರ್ಕಿಸಲಾಗಿದೆ. ಆದರೆ ರಾಜ್ಯಕ್ಕೆ ತಿಂಗಳಿಗೆ 29,000 ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದ್ದು, ಅಷ್ಟು ಒದಗಿಸಲು ಅವುಗಳಿಂದ ಸಾದ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಸದ್ಯ ಅಕ್ಕಿಗೆ ಮಾರುಕಟ್ಟೆಯಲ್ಲಿ ಕೆಜಿಗೆ ₹ 50- 60 ದರವಿದ್ದು, ಕೇವಲ ₹ 34 ನೀಡುತ್ತಿರುವ ಕ್ರಮವೂ ಟೀಕೆಗೆ ಒಳಗಾಗಿದೆ.
ಇದನ್ನೂ ಓದಿ: G Parameshwar : ಅಕ್ಕಿಯ ಬದಲು ಹಣ ಮೂರು ತಿಂಗಳು ಮಾತ್ರ ಎಂದ ಪರಮೇಶ್ವರ್