ಬೆಂಗಳೂರು: ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಪಡಿತರ ಚೀಟಿದಾರರಲ್ಲಿ (Anna Bhagya Scheme) ಪ್ರತಿ ಸದಸ್ಯರಿಗೆ ಐದು ಕೆಜಿಯ ಬದಲು ಮೂರು ಕೇಜಿ ಅಕ್ಕಿ ಮಾತ್ರ ನೀಡಲಾಗುತ್ತಿದೆ, ಉಳಿದ ಎರಡು ಕೆಜಿ ಧಾನ್ಯವನ್ನು ನೀಡಲಾಗುತ್ತಿದೆ. ಇದನ್ನು ಪ್ರಶ್ನಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು, ಕೇಂದ್ರ ಸರ್ಕಾರ ನೀಡಿದ ಅಕ್ಕಿಯಲ್ಲೇ ಕಡಿತ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದರು. ಇದು ಸುಳ್ಳು ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah).
ವಿಧಾನಸಭೆಯಲ್ಲಿ ಜೆಪಿ ನಾಯಕರ ಆರೋಪಕ್ಕೆ ದಾಖಲೆಗಳ ಮೂಲಕ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಕೇಂದ್ರ ಸರ್ಕಾರವೇ ಮೂರು ಕೆಜಿ ಅಕ್ಕಿ ಕೊಟ್ಟಿದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿ ಈ ಬಾರಿ ಕೇವಲ ಮೂರು ಕೆಜಿಗಾಗುವಷ್ಟೇ ಅಕ್ಕಿ ಕೊಟ್ಟಿದ್ದಾರೆ. ನಾವು ಮೂರು ಕೆಜಿ ಕೊಟ್ಟಿದ್ದಲ್ಲ. ಕೇಂದ್ರ ಇಲಾಖೆಯೇ ಇನ್ನೆರಡು ಕೆಜಿ ಬೇರೆ ಧಾನ್ಯ ಕೊಟ್ಟಿದೆ ಎಂದು ವಿವರಿಸಿದರು.
ಅಕ್ಕಿ ಕಡಿತ ಮಾಡುವಲ್ಲಿ ರಾಜ್ಯದ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ನಮ್ಮ ಪಾಲಿನ ಐದು ಕೆಜಿ ಅಕ್ಕಿ ಗೆ ಹಣ ಕೊಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಬಸವರಾಜ ಬೊಮ್ಮಾಯಿ ಆರೋಪಿಸಿದ್ದೇನು?
ರಾಜ್ಯದ ಕಾಂಗ್ರೆಸ್ ಸರ್ಕಾರ (Congress Government) ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲರಿಗೂ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ (Anna Bhagya Scheme) ನೀಡಿ ಈಗ ಮೋಸ ಮಾಡುತ್ತಿದೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಉಚಿತವಾಗಿ ಕೊಡುತ್ತಿರುವ ಐದು ಕೆಜಿಯಲ್ಲೂ ಕಡಿತ ಮಾಡಿ ಕೇವಲ ಮೂರು ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದರು.
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೊಡುವ ಉಚಿತ ಅಕ್ಕಿಯನ್ನೂ ಈ ತಿಂಗಳು ರಾಜ್ಯ ಸರ್ಕಾರ ಎರಡು ಕೆಜಿ ಕಡಿಮೆ ಮಾಡಿದೆ ಎಂದರು. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅಡಿ ಪಡಿತರ ಮೂಲಕ ಉಚಿತವಾಗಿ ನೀಡುತ್ತಿರುವ 5 ಕೆಜಿ ಅಕ್ಕಿಯಲ್ಲಿ ರಾಜ್ಯ ಸರ್ಕಾರ ಎರಡು ಕೆಜಿ ಕಡಿತ ಮಾಡಿ ಅನ್ಯಾಯ ಮಾಡುತ್ತಿದೆ ಎಂದು ಅವರು ನೇರ ಆರೋಪ ಮಾಡಿದರು.
ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದವರು ಈಗ ಮೂರು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದರು. ಈ ಮಾತಿಗೆ ಈ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಅಕ್ಕಿಯನ್ನೇ ನೀಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಸಕಾಲಿಕ: ಅನ್ನ ಭಾಗ್ಯ, ಹಣ ಭಾಗ್ಯ ಯೋಜನೆಗಳಿಂದ ಅಭಿವೃದ್ಧಿ ಸಾಧ್ಯವೇ?