ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ (Congress Government) ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲರಿಗೂ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ (Anna Bhagya Scheme) ನೀಡಿ ಈಗ ಮೋಸ ಮಾಡುತ್ತಿದೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಉಚಿತವಾಗಿ ಕೊಡುತ್ತಿರುವ ಐದು ಕೆಜಿಯಲ್ಲೂ ಕಡಿತ ಮಾಡಿ ಕೇವಲ ಮೂರು ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೊಡುವ ಉಚಿತ ಅಕ್ಕಿಯನ್ನೂ ಈ ತಿಂಗಳು ರಾಜ್ಯ ಸರ್ಕಾರ ಎರಡು ಕೆಜಿ ಕಡಿಮೆ ಮಾಡಿದೆ ಎಂದರು. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅಡಿ ಪಡಿತರ ಮೂಲಕ ಉಚಿತವಾಗಿ ನೀಡುತ್ತಿರುವ 5 ಕೆಜಿ ಅಕ್ಕಿಯಲ್ಲಿ ರಾಜ್ಯ ಸರ್ಕಾರ ಎರಡು ಕೆಜಿ ಕಡಿತ ಮಾಡಿ ಅನ್ಯಾಯ ಮಾಡುತ್ತಿದೆ ಎಂದು ಅವರು ನೇರ ಆರೋಪ ಮಾಡಿದರು.
ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದವರು ಈಗ ಮೂರು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ನಾನು ಈಗಾಗಲೇ ಮಾತನಾಡಿದ್ದೆ, ಕುಮಾರಸ್ವಾಮಿಯವರು ವರ್ಗಾವಣೆಗೆ ಒಂದು ಇಲಾಖೆಯ ದರ ಪಟ್ಡಿ ಬಿಡಿಗಡೆ ಮಾಡಿದ್ದಾರೆ. ಅವರು ಬಿಡುಗಡೆ ಮಾಡಿರುವುದು ಸರಿ ಇದಿಯಾ ಅಥವಾ ಇನ್ನೂ ಜಾಸ್ತಿ ಇದಿಯಾ ? ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದೂ ಬೊಮ್ಮಾಯಿ ಆಗ್ರಹಿಸಿದರು.
ಏನು ಈ ಅಕ್ಕಿ ಕಡಿತದ ವಿವಾದ?
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಪ್ರಕಟಿಸಿತ್ತು. ಇದನ್ನು ಗ್ಯಾರಂಟಿ ಕಾರ್ಡ್ ರೂಪದಲ್ಲಿ ಮನೆ ಮನೆಗೂ ತಲುಪಿಸಲಾಗಿತ್ತು. ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಪಕ್ಷ ಸರ್ಕಾರ ರಚನೆಯ ಬೆನ್ನಿಗೇ ಅನ್ನ ಭಾಗ್ಯ ಯೋಜನೆಯ ಅನುಷ್ಠಾನವನ್ನು ಘೋಷಣೆ ಮಾಡಿತು.
ಆದರೆ, ಕೇಂದ್ರದಿಂದ ಸಿಗುವ ಐದು ಕೆಜಿ ಉಚಿತ ಅಕ್ಕಿಯ ಜತೆ ಹೆಚ್ಚುವರಿ ಅಕ್ಕಿಯನ್ನು ಹೊಂದಾಣಿಕೆ ಮಾಡುವುದು ಅದಕ್ಕೆ ಸಾಧ್ಯವಾಗಲಿಲ್ಲ. ಕೇಂದ್ರದ ಎಫ್‌ಸಿಐ ಗೋದಾಮಿನಿಂದ ಕೆಜಿಗೆ 34 ರೂ. ಕೊಟ್ಟು ಖರೀದಿಸಿ ಜನರಿಗೆ ನೀಡುವ ಅದರ ಪ್ಲ್ಯಾನ್‌ಗೆ ಕೇಂದ್ರ ತಣ್ಣೀರು ಎರಚಿತ್ತು. ಆಹಾರ ನಿಗಮ ಹೀಗೆ ಅಕ್ಕಿಯನ್ನು ರಾಜ್ಯಗಳಿಗೆ ಪೂರೈಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಈ ನಡುವೆ ಕೇಂದ್ರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಿ ಜನರಿಗೆ ಒದಗಿಸುವ ಯೋಚನೆ ಮಾಡಿತಾದರೂ ವರ್ಷ ಪೂರ್ತಿ ಒದಗಿಸುವುದು ಕಷ್ಟ ಎಂಬ ವಾಸ್ತವವನ್ನು ಅರಿತುಕೊಂಡಿತು. ಇದಾದ ಬಳಿಕ ಅಕ್ಕಿಯ ಬದಲಿಗೆ ಪ್ರತಿ ಕೆಜಿಗೆ 34 ರೂ.ನಂತೆ ಖಾತೆಗೆ ಹಣ ಹಾಕುವ ನಿರ್ಧಾರಕ್ಕೆ ಬಂದು ಆ ಪ್ರಕ್ರಿಯೆ ನಡೆಯುತ್ತಿದೆ.
ಈ ನಡುವೆ, ರಾಜ್ಯದ ಜಿಲ್ಲೆಗಳಲ್ಲಿ ಈ ಬಾರಿ ನಿಗದಿತ ಪ್ರಮಾಣದ ಅಕ್ಕಿ ಬಿಡುಗಡೆ ಮಾಡಲಾಗಿಲ್ಲ. ಹೀಗಾಗಿ ಒಬ್ಬರಿಗೆ ಕೇವಲ ಮೂರು ಕೆಜಿ ಅಕ್ಕಿ ಮಾತ್ರ ವಿತರಿಸುವ ಪರಿಸ್ಥಿತಿ ಇದೆ. ಅಂದರೆ ನಿಗದಿತ ಐದು ಕೆಜಿಯಲ್ಲಿ ಮೂರು ಕೆಜಿ ಅಕ್ಕಿ ಮತ್ತು ಎರಡು ಕೆಜಿ ಧಾನ್ಯ ನೀಡುವಂತೆ ಅದೇಶಿಸಲಾಗಿದೆ.
ಇದನ್ನೂ ಓದಿ: ಸಕಾಲಿಕ: ಅನ್ನ ಭಾಗ್ಯ, ಹಣ ಭಾಗ್ಯ ಯೋಜನೆಗಳಿಂದ ಅಭಿವೃದ್ಧಿ ಸಾಧ್ಯವೇ?
ಉದಾಹರಣೆಗೆ ಚಿತ್ರದುರ್ಗ ಜಿಲ್ಲೆಗೆ 7 ಮೆಟ್ರಿಕ್ ಟನ್ ಅಕ್ಕಿ ವಿತರಣೆಯಾಗಿದೆ. ಬಿಪಿಎಲ್ ಕಾರ್ಡುದಾರರಿಗೆ 3 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿ ವಿತರಣೆ ಮಾಡಲು ಸೂಚಿಸಲಾಗಿದೆ. ಅಂತ್ಯೋದಯ ಕಾರ್ಡುದಾರರಿಗೆ 21 ಕೆಜಿ ಅಕ್ಕಿ, 14 ಕೆಜಿ ರಾಗಿ ವಿತರಣೆ ಮಾಡಲು ಸೂಚಿಸಲಾಗಿದೆ.
ಈ ಬಾರಿ ನಿಗದಿತ ಐದು ಕೆಜಿಯ ಬದಲು ಮೂರು ಕೆಜಿ ಅಕ್ಕಿಯನ್ನು ನೀಡಲಾಗಿದೆ. ಕೇಂದ್ರದಿಂದ ಐದು ಕೆಜಿ ಕೊಟ್ಟರೂ ರಾಜ್ಯ ಸರ್ಕಾರ ಮೂರು ಕೆಜಿ ಕೊಟ್ಟು ಮೋಸ ಮಾಡುತ್ತಿರುವುದೇಕೆ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.