Site icon Vistara News

ಉತ್ತರ ಕರ್ನಾಟಕದಲ್ಲಿ ಶೆಟ್ಟರ್‌ ಪ್ರಚಾರ; ನಾಯಕರಿಲ್ಲ ಎಂಬುದನ್ನು ಕಾಂಗ್ರೆಸ್‌ ಒಪ್ಪಿದ ಹಾಗೆ ಎಂದು ಅಣ್ಣಾಮಲೈ ಟೀಕೆ

Annamalai Attack On Congress.

Annamalai Attack On Rahul Gandhi Over Jagadish Shetter's Campaign In Uttar Karnataka.

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಸೇರಿ ಹಲವೆಡೆ ಬಿಜೆಪಿ ನಾಯಕ, ರಾಜ್ಯ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ. “ಉತ್ತರ ಕರ್ನಾಟಕದಲ್ಲಿ ಜಗದೀಶ್‌ ಶೆಟ್ಟರ್‌ ಅವರು ಪ್ರಚಾರ ಕೈಗೊಳ್ಳಲು ರಾಹುಲ್‌ ಗಾಂಧಿ ಸೂಚಿಸಿದ್ದಾರೆ. ಹಾಗಾದರೆ, ಕಾಂಗ್ರೆಸ್‌ನಲ್ಲಿ ನಾಯಕರು ಇಲ್ಲ ಎಂದು ರಾಹುಲ್‌ ಗಾಂಧಿ ಒಪ್ಪಿಕೊಂಡ ಹಾಗೆ” ಎಂದು ವ್ಯಂಗ್ಯವಾಡಿದ್ದಾರೆ.

‌”ಕಾಂಗ್ರೆಸ್‌ನಲ್ಲಿ ಯಾರೂ ನಾಯಕರಿಲ್ಲ. ಇದೇ ಕಾರಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ಪ್ರಚಾರ ಕೈಗೊಳ್ಳಲು ಜಗದೀಶ್‌ ಶೆಟ್ಟರ್‌ ಅವರಿಗೆ ಸೂಚಿಸಲಾಗಿದೆ. ಹಾಗಾದರೆ, ಉತ್ತರ ಕರ್ನಾಟಕದಲ್ಲಿ ಇದುವರೆಗೆ ಕಾಂಗ್ರೆಸ್‌ ನಾಯಕರು ಇರಲಿಲ್ಲವೇ? ಇಲ್ಲ ಎಂಬುದನ್ನು ರಾಹುಲ್‌ ಗಾಂಧಿ ಒಪ್ಪಿಕೊಂಡಿದ್ದಾರೆ” ಎಂದು ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ. “ಅಷ್ಟಕ್ಕೂ, ಕಾಂಗ್ರೆಸ್‌ನಲ್ಲಿ ರಾಹುಲ್‌ ಗಾಂಧಿಯೇ ಹೀರೋ, ಆದರೆ, ಬಿಜೆಪಿಯಲ್ಲಿ ಕಾರ್ಯಕರ್ತನೇ ಹೀರೋ” ಎಂದರು.

ಸಿದ್ದರಾಮಯ್ಯ ಹೇಳಿಕೆಗೆ ವಿರೋಧ

ಶಿಡ್ಲಘಟ್ಟದಲ್ಲಿ ಪ್ರಚಾರಕ್ಕೆ ಆಗಮಿಸಿದ ಅಣ್ಣಾಮಲೈ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಇನ್ನು ಶಿಡ್ಲಘಟ್ಟದಲ್ಲಿ ಪ್ರಚಾರ ಮಾಡುವ ವೇಳೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಲಿಂಗಾಯತ ಸಿಎಂಗಳು ರಾಜ್ಯವನ್ನು ಹಾಳುಮಾಡಿಬಿಟ್ಟರು ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. “ಕರ್ನಾಟಕದಲ್ಲಿ ಕನ್ನಡಿಗರು ಇದ್ದಾರೆ. ತಮಿಳುನಾಡಿನಲ್ಲಿ ತಮಿಳಿಗರಿದ್ದಾರೆ. ಎಲ್ಲ ಜಾತಿಯವರು ನಮ್ಮ ಪಕ್ಷದಲ್ಲಿದ್ದಾರೆ. ಕನ್ನಡಿಗರು ಎಷ್ಟು ಒಳ್ಳೆಯವರು ಎಂದು ತಮಿಳುನಾಡಿನವನಾದ ನನಗೇ ಗೊತ್ತು. ಆದರೆ, ಸಿದ್ದರಾಮಯ್ಯ ಅವರು ಒಂದು ಸಮುದಾಯಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಮುದಾಯದವರು ಸೇರಿ ಇದನ್ನು ವಿರೋಧ ಮಾಡಬೇಕು” ಎಂದು ಹೇಳಿದರು.

“ಕಾಂಗ್ರೆಸ್‌ ಪಕ್ಷದವರು ಜಾತಿಯನ್ನು ಇಟ್ಟುಕೊಂಡೇ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ತೊರೆದು ಯಾರಾದರೂ ಕಾಂಗ್ರೆಸ್‌ ಸೇರಿದರೆ ಜಾತಿ ಜಾತಿ ಎನ್ನುತ್ತಾರೆ. ಆದರೆ, ಕಾಂಗ್ರೆಸ್‌ನವರು ಬಿಜೆಪಿ ಸೇರಿದರೆ ಏನೂ ಮಾತನಾಡುವುದಿಲ್ಲ. ಕಾಂಗ್ರಸ್‌ ಏನೇ ತಂತ್ರ ಮಾಡಿದರೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ಮೇ 13ರ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದರ ದಿಸೆಯಲ್ಲಿ ಜನ ಶಿಡ್ಲಘಟ್ಟದಲ್ಲೂ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು” ಎಂದು ತಿಳಿಸಿದರು. ಪಿಎಂ ಕಿಸಾನ್ ಬಗ್ಗೆ ಭಿಕ್ಷೆ ಹಾಕುತ್ತಿದ್ದಾರೆಂದು ರಾಹುಲ್ ಗಾಂದಿ ಹೇಳುತ್ತಾರೆ.

ರಾಹುಲ್‌ ಗಾಂಧಿಗೆ ಬುದ್ಧಿ ಇಲ್ಲ

ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ ರೈತರಿಗೆ ಭಿಕ್ಷೆ ಹಾಕಲಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ರಾಹುಲ್‌ ಗಾಂಧಿ ಅವರಿಗೆ ಬುದ್ಧಿ ಇಲ್ಲ. ರೈತರಿಗೆ ಅನುಕೂಲವಾಗಲಿ ಎಂದು ಪಿಎಂ ಕಿಸಾನ್‌ ಯೋಜನೆ ಜಾರಿಗೆ ತರಲಾಗಿದೆ. ಬಿಜೆಪಿ ರೈತರ ಪರವಾಗಿದೆ” ಎಂದರು.

ಇದನ್ನೂ ಓದಿ: Nanjangud Clash: ಸಿದ್ದರಾಮಯ್ಯ ಪ್ರಚಾರದ ವೇಳೆ ದಲಿತರು-ಸವರ್ಣೀಯರ ನಡುವೆ ಗಲಾಟೆ

Exit mobile version