| ಮಂಜುನಾಥ ಹುಡೇದ, ಚಿಕ್ಕೋಡಿ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿದ್ದಲ್ಲ, ಅದನ್ನು ದಕ್ಕಿಸಿಕೊಳ್ಳಲು ಹಿರಿಯರು ಸ್ವಾತಂತ್ರ್ಯ ಹೋರಾಟಗಾರರು (Amrit Mahotsav) ಅನುಭವಿಸಿದ ವ್ಯಥೆ, ಮಾಡಿದ ತ್ಯಾಗ ಎಲ್ಲವೂ ಈಗ ಇತಿಹಾಸ. ಆದರೆ ಅಂದಿನ ಕಾಲದಲ್ಲೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ ಕ್ರಾಂತಿಕಾರಿಗಳಲ್ಲಿ ರಾಜ್ಯದಲ್ಲೂ ಹಲವರು ಇದ್ದರು ಎಂಬುದು ಹೆಮ್ಮೆಯ ಸಂಗತಿ. ಅಂತಹವರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣು ಗುರೂಜಿ ಕೂಡ ಒಬ್ಬರು.
ಗಾಂಧಿ ಆದರ್ಶ ಪಾಲಿಸಿದರೂ ಕ್ರಾಂತಿ ಸ್ವರೂಪ
ಶಾಂತಿ ಕ್ರಾಂತಿಯ ಸರದಾರ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ವೀರ ಸ್ವಾತಂತ್ರ್ಯ ಹೋರಾಟಗಾರ ಅಣ್ಣು ಗುರೂಜಿ ಅವರ ಮೂಲ ಹೆಸರು ಬಾಳಕೃಷ್ಣ ಯಮಾಜಿ ದೇಶಪಾಂಡೆ. ಇವರು ಸ್ವಾತಂತ್ರ್ಯಾ ನಂತರವೂ ತಮ್ಮ ದಿಟ್ಟತನವನ್ನು ಉಳಿಸಿಕೊಂಡವರು. ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲು ಸೇರಿದ್ದವರು. ಭಾರತ ಸ್ವಾತಂತ್ರ್ಯದ ಹಸಿವಿನಿಂದ ಬಳಲುತ್ತಿದ್ದ ಸಮಯದಲ್ಲಿ ಇವರ ಕ್ರಾಂತಿಕಾರಿ ನಡೆ ಎಲ್ಲರಿಗೂ ಪ್ರೇರಣಾದಾಯಕ.
1905ರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಂದರಗಿಯಲ್ಲಿ ಜನಿಸಿದ ಇವರು ಗಾಂಧೀಜಿ ಹಾಗೂ ಬಾಲಗಂಗಾಧರ ತಿಲಕರಿಂದ ಪ್ರೇರಿತರಾಗಿದ್ದರು. ಅವರನ್ನು ಅಕ್ಷರಶಃ ತಮ್ಮ ಗುರುಗಳೇ ಎಂದು ತಿಳಿದಿದ್ದ ಗುರೂಜಿ, ಅವರ ವಿಚಾರ ಧಾರೆಗಳಿಂದ ಪ್ರೇರಿತರಾಗಿ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅಂದಿನ ಕಾಲದಲ್ಲಿಯೇ ಮುಲ್ಕಿ ಪರೀಕ್ಷೆ ಪಾಸಾಗಿದ್ದ ಬಾಳಕೃಷ್ಣ ದೇಶಪಾಂಡೆಯವರು ರಾತ್ರಿ ಶಾಲೆ ನಡೆಸುತ್ತಿದ್ದರಿಂದ ಅವರಿಗೆ ಅಣ್ಣು ಗುರೂಜಿ ಎಂದೇ ಊರಿನ ಜನ ಸಂಬೋಧಿಸುತ್ತಿದ್ದರು.
ಇದನ್ನೂ ಓದಿ | Amrit Mahotsav | ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದ ಹಲಗಲಿ ಬೇಡರ ಹತಾರ್ ಲಡಾಯಿ
ಗಾಂಧೀಜಿ ಅವರ ಸರಳ, ಸತ್ಯ, ಅಂಹಿಸಾ ತತ್ವಗಳನ್ನು ಅಳವಡಿಸಿಕೊಂಡು ಬದುಕಿದವರು. ಇಡೀ ಜೀವಮಾನದವರೆಗೂ ಅಣ್ಣು ಗುರೂಜಿ ಯಾರಿಗೂ ತೊಂದರೆ ನೀಡಿದವರಲ್ಲ, ಆದರೆ, ಬ್ರಿಟಿಷರಿಗೆ ಸಹಕಾರ ನೀಡಿ ಬದುಕಿದವರಲ್ಲ. ಹೀಗಾಗಿ ಗಾಂಧೀಜಿ ಅವರ ಆದರ್ಶಗಳಿಂದ ಪ್ರೇರಿತರಾದ ಇವರು ಕ್ರಾಂತಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಸಮಾಜಕ್ಕೆ ಶಾಂತಿಧೂತನಾಗಿ ಬ್ರಿಟಿಷರಿಗೆ ಕ್ರಾಂತಿಕಾರಿ ಸಿಂಹಸ್ವಪ್ನವಾಗಿ ಬದುಕಿದವರು. ಅದಕ್ಕೆ ಉದಾಹರಣೆಯೇ ಗೋಕಾಕ ತಾಲೂಕಿನ ಸುಲದಾಳದ ರೈಲ್ವೆ ನಿಲ್ದಾಣ.
ಹೌದು, ಗಾಂಧೀಜಿ ಅವರು 1920ರಲ್ಲಿ ಕರೆ ನೀಡಿದ ಅಸಹಕಾರ ಚಳವಳಿಯಲ್ಲಿ ಇಡೀ ದೇಶದ ಜನರೇ ಭಾಗವಹಿಸಿದ್ದರು. ಬ್ರಿಟಿಷ್ ಸರ್ಕಾರ ಜಾರಿಗೆ ತಂದಿದ್ದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಲು ಸೇನಾನಿಗಳು ಮುಂದೆ ಬಂದಿದ್ದರು. ಬ್ರಿಟಿಷರು ತಮ್ಮ ವಸ್ತುಗಳು, ಟಪಾಲುಗಳು ಸಾಗಿಸಲು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿ ರೈಲು ಬಳಕೆಯಾಗುತ್ತಿತ್ತು. ಹೀಗಾಗಿ ಅಣ್ಣು ಗುರೂಜಿ ಸಹ ಚಳವಳಿಯಲ್ಲಿ ಪಾಲ್ಗೊಂಡು ರೈಲು ನಿಲ್ದಾಣಕ್ಕೆ ಸಹಚರರೊಂದಿಗೆ ಬೆಂಕಿ ಇಟ್ಟು ಬ್ರಿಟಿಷರ ಗುಂಡಿಗೆ ನಡುಗುವ ರೀತಿ ಮಾಡಿದ್ದರು.
ಹೌದು, ರೈಲ್ವೆ ನಿಲ್ದಾಣಕ್ಕೆ ಬೆಂಕಿ ಬಿದ್ದು ಕೆಲ ತಿಂಗಳುಗಳ ಕಾಲ ಬ್ರಿಟಿಷರು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡಿದ್ದರು. ಅಣ್ಣು ಗುರೂಜಿಯನ್ನು ಹಿಡಿದುಕೊಟ್ಟವರಿಗೆ 5 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದರು. ಆದರೂ ದೇಶ ಭಕ್ತರೇ ತುಂಬಿಕೊಂಡಿದ್ದ ಕುಂದರಗಿ ಜನ ಅವರನ್ನು ಬ್ರಿಟಿಷರ ಕೈಯಿಂದ ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮದ್ದು ಗುಂಡು ಬಂದೂಕು ಹಿಡಿದು ಜನರನ್ನು ದಾಸ್ಯದೊಳಗೆ ನೂಕಿದ್ದ ಬ್ರಿಟಿಷರ ಎದುರು ಜನರನ್ನು ಸೇರಿಸಲು ಗುರೂಜಿ ಅಂದು ಕೇವಲ ಸೈಕಲ್ ಹತ್ತಿ ಸಂಘಟನೆ ಮಾಡಿದ್ದರು. ಜನರನ್ನು ಸೇರಿಸಿ ಬ್ರಿಟಿಷ್ ಸರ್ಕಾರ ತಮ್ಮ ಮೇಲೆ ಮಾಡುತ್ತಿರುವ ಅನ್ಯಾಯಗಳನ್ನು ಜನರಿಗೆ ಅರಿವಾಗುವ ರೀತಿಯಲ್ಲಿ ತಮ್ಮ ಹರಿತವಾದ ಭಾಷಣದಿಂದಲೇ ತಲುಪಿಸುತ್ತಿದ್ದರು.
ಸಂಗೊಳ್ಳಿ ರಾಯಣ್ಣನಂತೆ ಹಿಡಿದು ಬ್ರಿಟಿಷರಿಗೆ ಒಪ್ಪಿಸಿದ್ದ ನೀಚರು!
ವಿಜಯಪುರ ಅಜ್ಞಾತ ಸ್ಥಳದಿಂದಲೇ ಅಣ್ಣು ಗುರೂಜಿಯನ್ನು ಬ್ರಿಟಿಷರು ಬಂಧಿಸಿದ್ದರು. ಸಂಗೊಳ್ಳಿ ರಾಯಣ್ಣನನ್ನು ಹೇಗೆ ಹೊಂಚು ಹಾಕಿ ನಮ್ಮವರೇ ಬ್ರಿಟಿಷರಿಗೆ ಒಪ್ಪಿಸಿದರೋ ಅದೇ ರೀತಿಯಲ್ಲಿ ಅಣ್ಣು ಗುರೂಜಿ ಅವರ ನಡೆ ಗಮನಿದ್ದ ಬೇಹುಗಾರರು ಬ್ರಿಟಿಷ್ ಸರ್ಕಾರದ ಬೂಟು ನೆಕ್ಕಿ ಅವರನ್ನು ಹಿಡಿದುಕೊಟ್ಟಿದ್ದರು. ಕಠಿಣ ಶಿಕ್ಷೆ ಜೈಲುವಾಸದ ನಂತರ ಅಣ್ಣು ಗುರೂಜಿ ಮತ್ತೆ ಹೊರಗೆ ಬಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
ಇದನ್ನೂ ಓದಿ | Amrit Mahotsav | ಇಂಗ್ಲಿಷ್‌ನಲ್ಲಿ ಬ್ರಿಟಿಷರನ್ನೇ ಮೀರಿಸುತ್ತಿದ್ದ ರಣವಿಕ್ರಮ ಮುಂಡರಗಿ ಭೀಮರಾಯ
ನಿತ್ಯ ಚರಕದಿಂದ ನೂಲು ತೆಗೆದು ಖಾದಿ ಬಟ್ಟೆ ತಯಾರಿಕೆ!
ಗಾಂಧೀಜಿ ಅವರು ಕರೆ ನೀಡಿದ್ದ ಸ್ವದೇಶಿ ಚಳವಳಿ ಕರೆಗೆ ಓಗೊಟ್ಟಿದ್ದ ಗುರೂಜಿ ತಮ್ಮ ಮನೆಯ ಮಂದಿಗೆಲ್ಲವೂ ಸ್ವತಃ ಚರಕದಿಂದ ನೇಯ್ದ ನೂಲಿನಿಂದ ತಯಾರಾದ ಬಟ್ಟೆಯನ್ನು ನೀಡುತ್ತಿದ್ದರು. ಯಾವುದೇ ಕಾರಣಕ್ಕೂ ಮನೆಯ ಮಂದಿ ಬೇರೆ ಬಟ್ಟೆ ಧರಿಸದಂತೆ ಆಜ್ಞೆ ಮಾಡಿದ್ದರು. ಮನೆಗೆ ಬರುವ ಸೊಸೆಗೂ ಅನ್ವಯಿಸುವ ಹಾಗೆ ಮದುವೆ ವಸ್ತುಗಳ ಪಟ್ಟಿ ಕೇವಲ ಖಾದಿ ಬಟ್ಟೆಯನ್ನು ಬರೆಸಿದ್ದರಂತೆ, ಅಂದಿನಿಂದ ಮನೆಯ ಎಲ್ಲ ಸದಸ್ಯರೂ ಸಹ ಖಾದಿ ಬಟ್ಟೆಯನ್ನೇ ಧರಿಸಿದರು.
ಸರ್ಕಾರದ ಪಿಂಚಣಿ ಪಡೆದೇ ಇಲ್ಲ
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರಯೋಧರು ಹಾಗೂ ಸ್ವಾತಂತ್ರ್ಯ ಸೇನಾನಿಗಳಿಗೆ ಸರ್ಕಾರ ವಿಶೇಷ ಅನುದಾನ, ಪಿಂಚಣಿ, ಸೇವೆಗಳನ್ನು ಒದಗಿಸುತ್ತದೆ. ಆದರೆ ಅಣ್ಣು ಗುರೂಜಿ ಬದುಕಿರುವವರೆಗೆ ಸರ್ಕಾರದಿಂದ ಯಾವುದೇ ಪಿಂಚಣಿ ಲಾಭ ಹಾಗೂ ಸೇವೆಯನ್ನು ಪಡೆದುಕೊಂಡಿಲ್ಲ ಎನ್ನುವುದು ವಿಶೇಷ. ಅಲ್ಲದೆ ಅವರ ಕುಟುಂಬಸ್ಥರಿಂದಲೂ ಮಾತು ಪಡೆದುಕೊಂಡಿದ್ದ ಗುರೂಜಿ, ಮರಣಾನಂತರವೂ ಯಾವುದೇ ಲಾಭ ಪಡೆಯದಂತೆ ಸೂಚಿಸಿದ್ದರು. ಹೀಗಾಗಿ ಇಂದಿಗೂ ಗುರೂಜಿ ಕುಟುಂಬ ಸರ್ಕಾರದಿಂದ ಯಾವುದೇ ಲಾಭ ಪಡೆದುಕೊಂಡಿಲ್ಲ.
ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಗಾಂಧೀಜಿ ನೆನಪಿಗೆ ಪಾಶ್ಚಾಪುರ ಗ್ರಾಮದಲ್ಲಿ ಗಾಂಧಿ ಸ್ಮಾರಕ ಭವನ ನಿರ್ಮಾಣ ಮಾಡಲು ಅಣ್ಣು ಗುರೂಜಿ ಸಾಕಷ್ಟು ದುಡಿದಿದ್ದಾರೆ. ಅಂದಿನ ಕಾಲದಲ್ಲೇ ಗಾಂಧಿ ಸ್ಮಾರಕ ಭವನಕ್ಕೆ 66,665 ರೂ.ಗಳನ್ನು ದಾನಿಗಳಿಂದ ಸಂಗ್ರಹಿಸಿ, ಸ್ವಾತಂತ್ರ್ಯದ ಸವಿನೆನಪಿಗಾಗಿ ಭವ್ಯವಾದ ಗಾಂಧಿ ಸ್ಮಾರಕ ಭವನ ನಿರ್ಮಾಣ ಮಾಡಿದ್ದಾರೆ. ಸುಮಾರು 40 ಹಳ್ಳಿಗಳ ಜನ ಆ ಸ್ಮಾರಕಕ್ಕಾಗಿ ಕಲ್ಲು, ಮರಳು, ಸಿಮೆಂಟ್ ಹಾಗೂ ತಮ್ಮ ಎತ್ತುಗಳು, ಎತ್ತಿನಗಾಡಿಗಳನ್ನು ನೀಡಿ ನಿಸ್ವಾರ್ಥವಾಗಿ ದುಡಿದಿದ್ದಾರೆ. ಗಾಂಧಿ ಸ್ಮಾರಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪೊಲೀಸ್ ಠಾಣೆ ಮತ್ತು ಪ್ರಾಥಮಿಕ ಶಾಲೆಯನ್ನು ವರ್ಷಕ್ಕೆ 1 ರೂಪಾಯಿ ಬಾಡಿಗೆ ಪಡೆದು ಜನೋಪಯೋಗಿ ಕೆಲಸಗಳಿಗೆ ಬಾಡಿಗೆ ನೀಡಲಾಗಿತ್ತು.
ಮನೆಯಲ್ಲಿದೆ ಅಣ್ಣು ಗುರೂಜಿ ನೆನಪು
ಮೊಮ್ಮಗ ಮಹೇಶ ದೇಶಪಾಂಡೆ ಗುರೂಜಿ ಇಂದಿಗೂ ಅಣ್ಣು ಗುರೂಜಿ ಅವರ ಹೋರಾಟದ ಸವಿನೆನಪು ಹಾಗೂ ಅವರಿಗೆ ಸಿಕ್ಕ ಪ್ರಶಸ್ತಿ ಪದಕಗಳು ಅವರ ಹೋರಾಟದ ಕ್ಷಣಗಳ ಫೋಟೊಗಳು ಅವರು ಓಡಾಡುತ್ತಿದ್ದ ಸೈಕಲ್, ನೂಲು ತೆಗೆಯುತ್ತಿದ್ದ ಚರಕ ಎಲ್ಲವನ್ನೂ ಸಂಗ್ರಹಿಸಿದ್ದಾರೆ. ಸ್ವತಃ ಭಾರತದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಬೆಳಗಾವಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಾಗ ಅವರೊಂದಿಗಿನ ಅಣ್ಣು ಗುರೂಜಿ ಫೋಟೊ ಇಂದಿಗೂ ಮನೆಯಲ್ಲಿದೆ.
ಸ್ವತಃ ಅಣ್ಣು ಗುರೂಜಿ ಬರೆದ ʼನಾನು ನಡೆದು ಬಂದ ದಾರಿʼ ಎನ್ನುವ ಆತ್ಮಕಥನ ಹಾಗೂ ʼಕರ್ನಾಟಕ-ಮಹಾರಾಷ್ಟ್ರದ ಗಡಿ ಸಂಘರ್ಷʼ ಸೇರಿದಂತೆ ʼಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿʼ ಎಂಬ ಪುಸ್ತಕಗಳನ್ನು ಮೊಮ್ಮಗ ಮಹೇಶ ಜೋಪಾನವಾಗಿ ಇಟ್ಟಿದ್ದಾರೆ.
ಇದನ್ನೂ ಓದಿ | Amrit Mahotsav | ವನವಾಸಿಗಳಲ್ಲಿ ಸ್ವಾಭಿಮಾನ, ದೇಶಪ್ರೇಮ ಬಡಿದೆಬ್ಬಿಸಿದ ಬಿರ್ಸಾ ಮುಂಡಾ