ಮಂಡ್ಯ: ನಗರದಲ್ಲಿರುವ ಮಿಮ್ಸ್ ಆಸ್ಪತ್ರೆಯು ವಿವಾದಗಳ ಕೇಂದ್ರ ಬಿಂದುವಾಗುತ್ತಿದೆ. ಮಿಮ್ಸ್ ಸಿಬ್ಬಂದಿಯು ಮತ್ತೊಂದು ಎಡವಟ್ಟು ಮಾಡಿದ್ದು, ಗ್ಯಾಂಗ್ರಿನ್‌ನಿಂದ (ಕೀವು) ಬಳಲುತ್ತಿದ್ದ ರೋಗಿಯ ಕಾಲು ಕತ್ತರಿಸಿ ಆತನ ಪತ್ನಿಯ ಕೈಗೆ ಇಟ್ಟಿದ್ದಾರೆ. ಇದರಿಂದ ರೋಗಿಯ ಪತ್ನಿ ಭಾಗ್ಯಮ್ಮ ಆತಂಕಕ್ಕೀಡಾಗಿದ್ದಾರೆ. ಅಲ್ಲದೆ, ರೋಗಿಯ ಪತ್ನಿ ಬಳಿ ಸಿಬ್ಬಂದಿಯು ಲಂಚ ಕೇಳಿದ್ದಾರೆ ಎಂಬ ಆರೋಪವೂ ಇದೆ.
ಮಂಡ್ಯದ ಕೀಲಾರ ಗ್ರಾಮದವರಾದ ವೃದ್ಧೆ ಭಾಗ್ಯಮ್ಮ ಅವರು ತಮ್ಮ ಪತಿ ಪ್ರಕಾಶ್ ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಕಾರಣ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ಸಿಬ್ಬಂದಿಯು ಮೂರ್ನಾಲ್ಕು ದಿನಗಳಿಂದ ಚಿಕಿತ್ಸೆ ನೀಡಿ, ಮಂಗಳವಾರ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕಾಲು ಕತ್ತರಿಸಿದ್ದಾರೆ. ಇದಾದ ಬಳಿಕ, ಕಾಲನ್ನು ವೃದ್ಧೆಯ ಕೈಗೆ ನೀಡಿದ ಸಿಬ್ಬಂದಿಯು ಇದನ್ನು ಮಣ್ಣಿನಲ್ಲಿ ಮುಚ್ಚಿಹಾಕುವಂತೆ ತಿಳಿಸಿದ್ದಾರೆ. ಇದರಿಂದ ವಿಚಲಿತರಾದ ಭಾಗ್ಯಮ್ಮ ಅವರು ಅಳುತ್ತ, ಕಾಲು ಹಿಡಿದುಕೊಂಡೇ ಆಸ್ಪತ್ರೆ ಹೊರಗೆ ಬಂದಿದ್ದಾರೆ. ಇದನ್ನು ತಿಳಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಿ, ಕತ್ತರಿಸಿದ ಕಾಲನ್ನು ರೋಗಿಯ ಸಂಬಂಧಿಗೆ ನೀಡಿದ್ದು ಹಾಗೂ ಆಸ್ಪತ್ರೆ ಸಿಬ್ಬಂದಿಯೇ ಕಾಲನ್ನು ಮಣ್ಣು ಮಾಡಲು ಸಾವಿರಾರು ರೂ. ಕೇಳಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ನಿರ್ದೇಶಕ ಹೇಳುವುದೇನು?
ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಪತ್ನಿ ಕೈಗೆ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ ಸ್ಪಷ್ಟನೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಕಾಲನ್ನು ಬಯೋ ಮೆಡಿಕಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಆಡ್ಲಿಂಗ್ ರೂಲ್ಸ್ ಪ್ರಕಾರ ಡಿಸ್ಪೋಸ್ ಮಾಡಬೇಕು. ಆದರೆ, ದುರದೃಷ್ಟವಶಾತ್ ಆಸ್ಪತ್ರೆ ಸಿಬ್ಬಂದಿಯು ರೋಗಿಯ ಪತ್ನಿಗೆ ನೀಡಿದ್ದಾರೆ. ಈ ಕುರಿತು ವರದಿ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ. ಹಣ ಕೇಳಿರುವುದು ಸೇರಿ ಯಾವುದೇ ಅಕ್ರಮ ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು” ಎಂದು ಹೇಳಿದ್ದಾರೆ.
ಇದನ್ನೂ ಓದಿ | ಮಂಡ್ಯದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, 3 ವರ್ಷದಿಂದ ದೌರ್ಜನ್ಯ, ಇಬ್ಬರು ಅರೆಸ್ಟ್