ಆನೇಕಲ್: ಸಿಲಿಕಾನ್ ಸಿಟಿ ಜನರಿಗೆ ಚಿರತೆ ಹಾವಳಿ ತಪ್ಪುವ ಹಾಗೆ ಕಾಣುತ್ತಿಲ್ಲ. ಬೊಮ್ಮನಹಳ್ಳಿಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಇತ್ತೀಚೆಗೆ ಅರಣ್ಯ ಸಿಬ್ಬಂದಿ ಗುಂಡಿಗೆ ಬಲಿಯಾದ ಬೆನ್ನಲ್ಲೇ ರಾಜಧಾನಿ ವ್ಯಾಪ್ತಿಯಲ್ಲಿ ಮತ್ತೊಂದು ಚಿರತೆ ಪತ್ಯಕ್ಷವಾಗಿದೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕ ತೋಗೂರು ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಕೆ.ಆರ್. ಪುರಂ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಚಿಕ್ಕತೋಗೂರು ಬಳಿಯ ನೈಸ್ ರಸ್ತೆ ಸಮೀಪ ಶನಿವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದೆ. ಬಾಲಕನೊಬ್ಬ ಮನೆಯಲ್ಲಿ ಕುಳಿತಿದ್ದಾಗ ಚಿರತೆ ಮನೆಯೊಳಗೆ ನುಗ್ಗಿದೆ. ತಕ್ಷಣ ಆತ ಜೋರಾಗಿ ಕೂಗಿಕೊಂಡಿದ್ದರಿಂದ ಚಿರತೆ ಅಲ್ಲಿಂದ ಓಡಿ ಹೋಗಿದೆ.
ಮಳೆ ಬಂದ ಹಿನ್ನೆಲೆಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ ಆಗಿಲ್ಲ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಚಿಕ್ಕತೋಗೂರು ಸುತ್ತಮುತ್ತ ನೈಸ್ ರಸ್ತೆ ಜಾಗದಲ್ಲಿ ಕಳೆದ ಎರಡು ದಿನಗಳಿಂದ ಆಗಾಗ ಚಿರತೆ ಓಡಾಡುತ್ತಿತ್ತು ಎನ್ನಲಾಗಿದೆ.
ಇನ್ನು ಮಧ್ಯರಾತ್ರಿ ನಸುಕಿನ ಮೂರು ಗಂಟೆಯಲ್ಲಿ ಬೀದಿ ನಾಯಿಯೊಂದನ್ನು ಚಿರತೆ ಎಳೆದೊಯ್ದಿದೆ. ಹೀಗಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಜಾಗ್ರತೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿ ವಾಪಸ್ ಹೋಗಿದ್ದರು. ಬೆಳಗ್ಗೆ 11 ಗಂಟೆಯಾದರೂ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ನಂತರ ಅರಣ್ಯ ಸಿಬ್ಬಂದಿ ಭೆಟಿ ನೀಡಿ ಚಿರತೆ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Assault Case : ಗ್ರಾಪಂ ಪಿಡಿಒ ಮೇಲೆ ಹಲ್ಲೆ ಯತ್ನ, ಕೊಲೆ ಬೆದರಿಕೆ; ಗ್ರಾಮಸ್ಥರ ವಿರುದ್ಧ ದೂರು, ದಾಖಲಾಗದ FIR
ಗುಂಡೇಟಿಗೆ ಬಲಿಯಾಗಿತ್ತು ಒಂದು ಚಿರತೆ
ಬೆಂಗಳೂರಿನ ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿಯ ಕೃಷ್ಣಾ ರೆಡ್ಡಿ ಬಡಾವಣೆಯಲ್ಲಿ ನ.1ರಂದು ಕಾರ್ಯಾಚರಣೆ ವೇಲೆ ಗುಂಡೇಟಿಗೆ ಚಿರತೆ ಬಲಿಯಾಗಿತ್ತು. ಹಲವು ಸುತ್ತಿನ ಕಾರ್ಯಾಚರಣೆಯ (Operation Leopard) ವೇಳೆ ಅದು ಗುಂಡೇಟಿಗೆ ಬಲಿಯಾಗಿತ್ತು. ಕೃಷ್ಣಾ ರೆಡ್ಡಿ ಬಡಾವಣೆಯ ಪಾಳು ಬಿದ್ದ ಹಳೆ ಕಟ್ಟಡವೊಂದರಲ್ಲಿ ವಾಸವಾಗಿ ಜನರನ್ನು ಕಂಗೆಡಿಸಿದ್ದ ಈ ಚಿರತೆಯನ್ನು ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿತ್ತು.
ಬೊಮ್ಮನಹಳ್ಳಿಯಲ್ಲಿ ಸೆರೆಸಿಕ್ಕ ಈ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಶಿಫ್ಟ್ ಮಾಡಲಾಯಿತು. ಅಲ್ಲಿಗೆ ಒಯ್ಯುವ ವೇಳೆ ಪರೀಕ್ಷೆ ನಡೆಸಿದಾಗ ಅದು ಪ್ರಾಣ ಕಳೆದುಕೊಂಡಿರುವುದು ಗೊತ್ತಾಗಿತ್ತು. ಜೈವಿಕ ಉದ್ಯಾನವನದ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.