Site icon Vistara News

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ಹಗರಣ ಬಯಲಿಗೆ, 11 ಖದೀಮರು ಅರೆಸ್ಟ್‌

CHAPA

ಬೆಂಗಳೂರು: ರಾಜ್ಯದಲ್ಲಿ ೨೦೦೧ರಲ್ಲಿ ನಡೆದ ಬೃಹತ್‌ ನಕಲಿ ಛಾಪಾ ಕಾಗದ ಹಗರಣದ ನೆನಪು ನಿಧಾನಕ್ಕೆ ಮರೆಯಾಗುತ್ತಿರುವಂತೆಯೇ ಇದೀಗ ಮತ್ತೊಂದು ದೊಡ್ಡ ಸ್ಟಾಂಪ್‌ ಪೇಪರ್‌ ಹಗರಣ ಬಯಲಿಗೆ ಬಂದಿದೆ. ಅಂದು ಕರೀಂ ಲಾಲಾ ತೆಲಗಿ ಎಂಬಾತ ಸೃಷ್ಟಿಸಿದ ಹಗರಣದಲ್ಲಿ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟ ಸಂಭವಿಸಿತ್ತು.
ಇದೀಗ ಬಯಲಾಗಿರುವ ಹೊಸ ಹಗರಣದಲ್ಲಿ ಹನ್ನೊಂದು ಮಂದಿಯ ಗ್ಯಾಂಗನ್ನು ಬಂಧಿಸಲಾಗಿದೆ.

ಬೆಂಗಳೂರು ನಗರ ಕ್ರೈಂ ಬ್ರಾಂಚ್‌ ನಡೆಸಿದ ದಾಳಿಯಲ್ಲಿ ಒಟ್ಟು ೧೧ ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ 2664 ನಕಲಿ ಛಾಪಾ ಕಾಗದಗಳನ್ನು ವಶಕ್ಕೆ ಪಡೆಯಲಿದೆ. ಇವರು ನಾಲ್ಕು ಕಡೆ ಈ ನಕಲಿ ಛಾಪಾ ಕಾಗದ ಬಳಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಒಟ್ಟು ೧,೩೬,೨೦,೦೦೦ ರೂ. ಬೆಲೆಬಾಳುವ ನಕಲಿ ಛಾಪಾ ಕಾಗದಗಳು ವಶವಾಗಿದೆ.

ವಂಚಕರ ಕೈಯಲ್ಲಿ ಮೈಸೂರು ಒಡೆಯರ ಕಾಲದಿಂದ ಇವತ್ತಿನವರೆಗಿನ ಛಾಪಾ ಕಾಗದಗಳು ಪತ್ತೆಯಾಗಿದ್ದು, ಇವರು ಛಾಪಾ ಕಾಗದ ಮೂಲಕ ಅಸ್ತಿಗಳ ಜಿಪಿಎ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 1990, 1995, 2002, 2009ರಲ್ಲಿ ನೋಂದಣಿ ನಡೆದಿರುವಂತೆ ದಾಖಲಾತಿಗಳನ್ನು ಸೃಷ್ಟಿಸಲಾಗಿದ್ದು, ನಾಲ್ಕು ಕೇಸ್ ನಲ್ಲಿ ಕೋಟ್ಯಾಂತರ ರೂ ಬಾಳುವ ಆಸ್ತಿ ಗಳನ್ನು ಜಿಪಿಎ ಮಾಡಲಾಗಿದೆ.

ಮೈಸೂರು ಮಹಾರಾಜರ ಕಾಲದ ಒಂದು ಛಾಪಾ ಕಾಗದವನ್ನು ಐದರಿಂದ ಎಂಟು ಸಾವಿರಕ್ಕೆ ಮಾರಾಟ ಮಾಡಲಾಗಿದೆ. ಆರೋಪಿಗಳಿಂದ ನೂರಕ್ಕು ಹೆಚ್ಚು ಸೀಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಅಂದಿಗೆ ಹೊಂದಿಕೆಯಾಗುವ ಸೀಲು!
ನಕಲಿ ಛಾಪಾ ಕಾಗದ ಸೃಷ್ಟಿಸಿದ ಆರೋಪಿಗಳು ಎಷ್ಟು ಚಾಲಾಕಿಗಳು ಎಂದರೆ ಅವರು ನಕಲಿ ದಾಖಲೆ ಸೃಷ್ಟಿಸುವ ಕಾಲಾವಧಿಯಲ್ಲಿ ಯಾವ ರೀತಿಯ ಸೀಲ್‌ ಇರುತ್ತಿತ್ತೋ ಅದೇ ರೀತಿಯ ಸೀಲುಗಳನ್ನು ಹೊಸದಾಗಿ ರಚಿಸಿದ್ದಾರೆ. ಹೀಗಾಗಿ ಯಾರಿಗೂ ಸಂಶಯ ಬರುವಂತೆ ಇರಲೇ ಇಲ್ಲ.

ಎರಡೂ ರೀತಿಯಲ್ಲಿ ವಂಚನೆ
ಆರೋಪಿಗಳು ಎರಡು ರೀತಿಯಲ್ಲಿ ವಂಚನೆ ಮಾಡುತ್ತಿದ್ದರು. ಒಂದನೆಯದು ಕೇವಲ ನಕಲಿ ಛಾಪಾ ಕಾಗದ ಮಾರಾಟ ಮಾಡುವುದು, ಎರಡನೆಯದು ನಕಲಿ ಛಾಪಾ ಕಾಗದ ಬಳಿಸಿ ನಕಲಿ ದಾಖಲಾತಿಗಳನ್ನು ತಯಾರು ಮಾಡಿ ಆಸ್ತಿ ಪತ್ರ,ಜಿಪಿಎ ಮಾಡುವುದು.

Exit mobile version