Site icon Vistara News

Operation Hasta : ಬಿಜೆಪಿಯ ಮತ್ತೊಂದು ವಿಕೆಟ್‌ ಪತನ; ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಸುಕುಮಾರ್ ಶೆಟ್ಟಿ

Sukumar Shetty join Congress infront of DK Shivakumar

ಉಡುಪಿ: ಲೋಕಸಭಾ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಜಕೀಯ ತಂತ್ರಗಾರಿಕೆ (Congress Politics) ಮುಂದುವರಿದಿದೆ. ಹಲವು ರೀತಿಯಲ್ಲಿ ದಾಳ ಉರುಳಿಸುತ್ತಿರುವ ಕೈಪಡೆ ಆಪರೇಷನ್‌ ಹಸ್ತಕ್ಕೂ (Operation Hasta) ಕೈಹಾಕಿದೆ. ಇದರ ಭಾಗವಾಗಿ ಬಿಜೆಪಿ ಹಾಲಿ ಶಾಸಕರೊಂದಿಗೆ ಮಾತುಕತೆ ನಡೆಸಿದ್ದು, ಕನಿಷ್ಠ ಇಬ್ಬರು ಶಾಸಕರು ಶೀಘ್ರದಲ್ಲೇ ಪಕ್ಷ ಸೇರುತ್ತಾರೆ ಎಂಬ ವದಂತಿ ಹಬ್ಬಿದೆ. ಈ ನಡುವೆ ಪ್ರತಿ ವಿಧಾನಸಭಾ ಕ್ಷೇತ್ರದ ಪ್ರಬಲ ನಾಯಕರ ಮೇಲೂ ಕಣ್ಣಿಟ್ಟಿರುವ ಕಾಂಗ್ರೆಸ್‌, ಮಾಜಿ ಶಾಸಕರನ್ನು ಪಕ್ಷದತ್ತ ಸೆಳೆದುಕೊಳ್ಳುತ್ತಿದೆ. ಈಗ ಬಿಜೆಪಿಯಿಂದ ಮತ್ತೊಂದು ವಿಕೆಟ್‌ ಪತನವಾಗಿದ್ದು, ಬಿಜೆಪಿ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ (Former MLA BM Sukumar Shetty) ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದ್ದಾರೆ.

ಗುರುವಾರವಷ್ಟೇ (ಸೆಪ್ಟೆಂಬರ್‌ 8) ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (Deputy CM and KPCC president DK Shivakumar) ಅವರನ್ನು ಭೇಟಿ ಮಾಡಿದ್ದ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಶುಕ್ರವಾರ (ಸೆಪ್ಟೆಂಬರ್‌ 9) ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾಗಿ ಘೋಷಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಿಂದ (Byndoor Assembly Constituency) 2018ರಲ್ಲಿ ಗೆದ್ದು ಬಂದಿದ್ದ ಇವರಿಗೆ, 2023ರಲ್ಲಿ ಬಿಜೆಪಿ ಟಿಕೆಟ್‌ ನಿರಾಕರಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಸುಕುಮಾರ್‌ ಶೆಟ್ಟಿ, ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೂ ಅಷ್ಟಾಗಿ ಹೋಗಿರಲಿಲ್ಲ. ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆಯಲ್ಲೂ ಪಾಲ್ಗೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈಗ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಗುರುವಾರ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದ ಸುಕುಮಾರ್‌ ಶೆಟ್ಟಿ. ಈ ವೇಳೆ ಮಾಜಿ ಶಾಸಕ ಗೋಪಾಲ ಪೂಜಾರಿ ಜತೆಗಿದ್ದರು.

ನನಗೆ ಸೀಟು ಕೊಡದೆ ಬಿಜೆಪಿಯಿಂದ ಅನ್ಯಾಯ

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿ.ಎಂ. ಸುಕುಮಾರ್ ಶೆಟ್ಟಿ, ಬೆಳೆಯುವವರನ್ನು ಬಿಜೆಪಿ ಪಕ್ಷ ಬಿಡುವುದಿಲ್ಲ. ಕಾಲೆಳೆದು ಮಲಗಿಸುವ ಕೆಲಸ ಬಿಜೆಪಿಯ ಪರಿಪಾಠವಾಗಿದೆ. ಅದರಂತೆ ನನಗೆ ಸೀಟು ಕೊಡದೆ ಅನ್ಯಾಯ ಮಾಡಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಬಹಳಷ್ಟು ‌ನೋವಾಗಿದೆ. ಕೆಲವು ನಾಯಕರು ನನ್ನನ್ನು ಕಾಂಗ್ರೆಸ್ ಸೇರಲು ಹೇಳುತ್ತಿದ್ದರು. ಮುಂದಿನ ದಿನಗಳಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಕಾಂಗ್ರೆಸ್ ಸೇರುವ ದೃಢ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಗ್ರೀನ್‌ ಸಿಗ್ನಲ್‌ ನೀಡಿದ್ದೇನೆ

ಕರಾವಳಿಯಲ್ಲಿ ಹಿಂದುತ್ವದ ಹಿನ್ನೆಲೆಯನ್ನು ಹೊರತುಪಡಿಸಿ ಬೇರೆಲ್ಲ ಕಡೆ ಬಿಜೆಪಿ ಹೆಸರು ಹಾಳು ಮಾಡಿಕೊಂಡಿದೆ. ಡಿ.ಕೆ. ಶಿವಕುಮಾರ್ ಬಹಳಷ್ಟು ಬಾರಿ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಈಗ ನಾನು ಡಿಕೆಶಿ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದೇನೆ ಎಂದು ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: Weather report : ರಾಜ್ಯಾದ್ಯಂತ ಸೆ.8ರಂದು ಧಾರಾಕಾರ ಮಳೆ; ಮೀನುಗಾರರಿಗೆ ಅಲರ್ಟ್!‌

ಮುಂದಿನ ಚುನಾವಣೆಗೆ ಟಿಕೆಟ್?‌

2023ರ ವಿಧಾನಸಭಾ ಚುನಾವಣೆಯಲ್ಲಿ ಸುಕುಮಾರ್‌ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿ ಗುರುರಾಜ್‌ ಶೆಟ್ಟಿ ಗಂಟಿಹೊಳಿ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಇನ್ನು ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಪ್ರಬಲ ನಾಯಕ, ಮಾಜಿ ಶಾಸಕ ಗೋಪಾಲ್‌ ಪೂಜಾರಿ (Former MLA Gopal Poojary) ಕಣಕ್ಕಿಳಿದಿದ್ದರು. ಕೊನೆಗೆ ಗುರುರಾಜ್ ಗಂಟಿಹೊಳಿ (MLA Gururaj Gantiholi) ಅವರು ಜಯಗಳಿಸಿದ್ದರು. ಆದರೆ, ಚುನಾವಣೆ ಸಂದರ್ಭದಲ್ಲಿ ಗೋಪಾಲ್ ಪೂಜಾರಿ ಅವರು “ಇದೇ ನನ್ನ ಕೊನೇ ಚುನಾವಣೆ” ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಕುಮಾರ್‌ ಶೆಟ್ಟಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಿದೆಯೇ? ಆ ಆಶ್ವಾಸನೆ ಮೇರೆಗೆ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ.

Exit mobile version