ಮಂಗಳೂರು: ನೈತಿಕ ಪೊಲೀಸ್‌ಗಿರಿ (Moral policing) ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ (Anti communal wing) ಅನ್ನು ಸ್ಥಾಪಿಸಲಾಗುವುದು. ಮಂಗಳೂರು ಕಮೀಷನರೇಟ್ (Mangalore Commissionerate) ವ್ಯಾಪ್ತಿಯಲ್ಲಿ ಈ ನೂತನ ಪಡೆ ಅಸ್ಥಿತ್ವಕ್ಕೆ ಬರಲಿದೆ ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwar) ಘೋಷಣೆ ಮಾಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್, ಪೊಲೀಸ್ ಇಲಾಖೆಗೆ ಹಲವಾರು ಸವಾಲುಗಳಿವೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನ ಇದ್ದಾರೆ ಎಂದು ನಂಬಿದ್ದೆವು. ಇಡೀ ದೇಶವೇ ಈ ಮಾತನ್ನು ನಂಬುತ್ತದೆ. ಆದರೆ ಅದರ ಜತೆಗೆ ಬೇರೆ ಮಾತುಗಳೂ ಬಂದಿವೆ. ದ.ಕ ಜಿಲ್ಲೆಯಲ್ಲಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಇಲ್ಲ, ಕೋಮು ಸಾಮರಸ್ಯ ಇಲ್ಲ ಎಂಬ ಮಾತೂ ಇದೆ ಎಂದು ಹೇಳಿದರು.
ಪ್ರಣಾಳಿಕೆ ಸಮಿತಿ ಅಧ್ಯಕ್ಷ ಆಗಿದ್ದ ನಾನು ಆಗ ಇಪ್ಪತ್ತು ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದೆ. ಆಗ ಇಲ್ಲಿ ಶಾಂತಿ ನೆಲೆಸುವಂತೆ ಮಾಡಿ ಎಂಬ ಮಾತನ್ನು ಹೇಳಿದ್ದರು. ಹೀಗಾಗಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಕೋಮು ಸೌಹಾರ್ದತೆಗೆ ಈ ಹಿಂದೆ ನಾನು ಪಾದಯಾತ್ರೆಯನ್ನೂ ಮಾಡಿದ್ದೆ. ಕರಾವಳಿಯಲ್ಲಿ ಇಂದು ಭಯದ ವಾತಾವರಣ ಇದೆ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಾವು ತಡೆಯಲಿದ್ದೇವೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಸರ್ಕಾರಿ ಶಾಲೆಗೆ ಬೀಗ ಹಾಕಿ ದನ ಕಟ್ಟಿದ ಮೂಲ ಮಾಲೀಕರು; ಈಗ ಬೀದಿಯಲ್ಲೇ ಮಕ್ಕಳಿಗೆ ಪಾಠ!
ವಿಂಗ್‌ನಲ್ಲಿ ಸಮರ್ಥ ಅಧಿಕಾರಿಗಳು
ನೈತಿಕ ಪೊಲೀಸ್‌ಗಿರಿ ಇಲ್ಲಿ ತುಂಬಾ ನಡೆಯುತ್ತಿದೆ. ಇಲ್ಲಿ ನೈತಿಕ ಪೊಲೀಸ್‌ಗಿರಿ ಮಾಡುವವರು ಯಾರು? ಎಲ್ಲವೂ ಇದ್ದು ನಾವು ತಡೆಯದಿದ್ದರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ನೈತಿಕ ಪೊಲೀಸ್‌ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದರ ತಡೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತಿದ್ದೇವೆ. ಈ ವಿಂಗ್‌ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.