ಕೋಲಾರ: ಜನತಾ ದರ್ಶನದಲ್ಲಿ ಸಂಸದ ಎಸ್.ಮುನಿಸ್ವಾಮಿ ಮೇಲೆ ದೌರ್ಜನ್ಯ, ಶ್ರೀನಿವಾಸಪುರದಲ್ಲಿ ರೈತರ ಮೇಲೆ ದಬ್ಬಾಳಿಕೆ, ಕ್ಲಾಕ್ ಟವರ್ ವೃತ್ತದಲ್ಲಿ ತಲ್ವಾರ್ ಹೆಬ್ಬಾಗಿಲು ಅಳವಡಿಕೆ, ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಖಂಡಿಸಿ ಜಿಲ್ಲಾಡಳಿತ, ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ಸಿ.ಟಿ.ರವಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸಿ.ಟಿ. ರವಿ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಯಿತು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಸಂಸದ ಮುನಿಸ್ವಾಮಿ, ಮಾಜಿ ಶಾಸಕ ವರ್ತೂರು ಪ್ರಕಾಶ್, ಬಿ.ಪಿ. ವೆಂಕಟಮುನಿಯಪ್ಪ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ನಗರದ ಬಂಗಾರಪೇಟೆ ವೃತ್ತದಿಂದ, ಕೋಲಾರ ಬಸ್ ನಿಲ್ದಾಣದವರೆಗೂ ಪ್ರತಿಭಟನಾ ಮೆರವಣಿಗೆ ಸಾಗಿತು. ಈ ವೇಳೆ ಕೋಲಾರ ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | Caste Census Report : ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ ಎಂದ ಬಿ.ಕೆ. ಹರಿಪ್ರಸಾದ್
ಭೂಗಳ್ಳರು ಸರ್ಕಾರದ ಭಾಗವಾಗಿದ್ದಾರೆ
ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಶ್ರೀನಿವಾಸಪುರದಲ್ಲಿ ಕಳೆದ ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡುವ ಅನ್ನದಾತರ ಮೇಲೆ ದೌರ್ಜನ್ಯ ನಡೆದಿದೆ. ಈ ಸರ್ಕಾರ ಭೂಗಳ್ಳರ ಸರ್ಕಾರ. ಈ ಸರ್ಕಾರ ರೈತವಿರೋಧಿ ಮಾತ್ರವಲ್ಲ, ಭೂಗಳ್ಳರ ಸರ್ಕಾರ ಎಂದು ಹೇಳಿದರು.
ಈ ಸರ್ಕಾರಕ್ಕೆ ತಾಕತ್ತಿದ್ದರೆ ಅರ್ಕಾವತಿ ಹಗರಣಕ್ಕೆ ಸಂಬಂಧಿಸಿದ ಕೆಂಪಣ್ಣ ವರದಿಯನ್ನು ಮಂಡಿಸಬೇಕು. ನೈಸ್ ಹಗರಣದಲ್ಲಿ ರೈತರ ಭೂಮಿ ಕಿತ್ತುಕೊಂಡ ಸಂಬಂಧದ ಟಿ.ಬಿ.ಜಯಚಂದ್ರರ ಸದನ ಸಮಿತಿ ವರದಿಯನ್ನು ಮಂಡಿಸಬೇಕು. ಆಗ ಬಹಳ ಜನ ಭೂಗಳ್ಳರು ಸರ್ಕಾರ ಭಾಗ ಆಗಿರುವುದು ಗೊತ್ತಾಗುತ್ತದೆ ಎಂದು ನುಡಿದರು.
ಈ ಸರ್ಕಾರದ ಪಾಪದ ಕೊಡ ತುಂಬಿದೆ ಎಂದ ಅವರು, ಈ ಪಾಪಿಗಳ ಸರ್ಕಾರ ಮುಂದುವರಿಯಬೇಕಾ ಎಂದು ಪ್ರಶ್ನಿಸಿದರು. ಮರ ಕಡಿದ ಪಾಪಿಯ ಪಾಪಕ್ಕೆ ಪ್ರಾಯಶ್ಚಿತ್ತ ಇಲ್ಲವೆನ್ನಲು ಇಲ್ಲಿ ಬಂದಿದ್ದೇವೆ. ಪಾಪಿಗಳು ನೀವು, ನಿಮ್ಮನ್ನು ನಂಬಿ ಅಧಿಕಾರ ಕೊಟ್ಟದ್ದಕ್ಕೆ ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದೀರಿ. ಇಲ್ಲಿನ ಪ್ರತಿಭಟನೆಗೆ ಸಿ.ಟಿ.ರವಿ ಬರಬಾರದು ಎನ್ನಲು ಇದೇನು ಪಾಕಿಸ್ತಾನದಲ್ಲಿದೆಯೇ ಎಂದ ಅವರು, ನಾನು ತಾಲಿಬಾಲಿನವನಲ್ಲ, ಬಾಂಬ್ ಹಾಕಿದವನಲ್ಲ. ಕೋಲಾರದ ಜನರು ಉಂಡ ಮನೆಗೆ ಎರಡು ಬಗೆದವರ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಎಸ್ಪಿಯನ್ನು ಕೂಡಲೇ ಅಮಾನತು ಮಾಡಿ
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಜನರಿಂದ ಆಯ್ಕೆಯಾದ ನಮ್ಮ ಸಂಸದ ಮುನಿಸ್ವಾಮಿಯವರನ್ನು ವೇದಿಕೆಯಿಂದ ಕೆಳಕ್ಕಿಳಿಸಿದ್ದರ ಔಚಿತ್ಯ ಏನು? ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು. ಅವರನ್ನು ಅವಮಾನಿಸಿದ್ದು, ಸಂವಿಧಾನ ವಿರೋಧಿ ಕ್ರಮವಲ್ಲವೇ? ಹಾಗಿದ್ದರೆ ನಿಮ್ಮ ಎಸ್ಪಿಯನ್ನು ಕೂಡಲೇ ಅಮಾನತು ಮಾಡಿ ಎಂದು ಒತ್ತಾಯಿಸಿದರು.
ದೇಶ ಮತ್ತು ವಿದೇಶಗಳಿಗೆ ಮಾವಿನಹಣ್ಣು ಕಳಿಸುವ ಶ್ರೀನಿವಾಸಪುರ ತಾಲೂಕಿನ ರೈತರ ಜಮೀನಿಗೆ ಕಳ್ಳರಂತೆ 70-80 ಜೆಸಿಬಿ ಜತೆ ರಾತ್ರೋರಾತ್ರಿ ಬಂದ ಡಿಎಫ್‍ಒ ಏಡುಕೊಂಡ್ಲು, ಮಾವಿನ ಮರಗಳನ್ನು ಬೀಳಿಸಿದ್ದಾರೆ. ನೋಟಿಸ್ ಕೂಡ ನೀಡದೆ ಅಕ್ರಮವಾಗಿ ನಾಶ ಕಾರ್ಯ ನಡೆದಿದೆ. ಡಿಎಫ್‍ಒರನ್ನು ಕೂಡಲೇ ಅಮಾನತು ಮಾಡಿ ಎಂದು ಆಗ್ರಹಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಒಂದಿಂಚು ಜಮೀನನ್ನೂ ಮುಟ್ಟಿಲ್ಲ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಸರ್ಕಾರ ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ ಮಾಡಿದೆ. ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅವಮಾನ ಮಾಡಿದ್ದು ಖಂಡನಾರ್ಹ. ಇದನ್ನು ಗಮನಿಸಿದ ಜನತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯ ಮತ್ತು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಸಂಸದ ಮುನಿಸ್ವಾಮಿ, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಸಚಿವ ವರ್ತೂರ್ ಪ್ರಕಾಶ್ ಸೇರಿ ನೂರಾರು ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.
ಉರಿಗೌಡ, ನಂಜೇಗೌಡನ ವಂಶಸ್ಥರು ನಾವು, ನಮಗೆ ಇನ್ನೆಷ್ಟು ಇರಬೇಡ
ಕ್ಲಾಕ್ ಟವರ್ ವೃತ್ತದಲ್ಲಿ ತಲ್ವಾರ್ ಹೆಬ್ಬಾಗಿಲು ಅಳವಡಿಕೆ ಬಗ್ಗೆ ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಪರ್ಶಿಯನ್ ಭಾಷೆಯಲ್ಲಿ ಕಾಫೀರರ ರಕ್ತ ಹರಿಸಲು ನನ್ನ ಖಡ್ಗ ಕಾಯುತ್ತಿದೆ ಅಂತ ಟಿಪ್ಪು ಕಡ್ಗದಲ್ಲಿದೆ. ಕಾಫೀರ ಅಂದ್ರೆ ಯಾರು? ಯಾರು ಶಿವ, ಹರಿಯನ್ನು ಪೂಜೆ ಮಾಡುತ್ತಾರೋ ಅವರು. ಅಂದರೆ ಅಲ್ಲಾನ ಹೊರತುಪಡಿಸಿ ಇತರೆ ದೇವರ ಆರಾಧಕರು. ಇವನು ಎಸ್ಸಿ, ಅವನು ಎಸ್ಟಿ ಹೀಗೆ ಹೊಡೆದಾಡುವಂತೆ ಮಾಡುತ್ತಿದ್ದಾರೆ. ಇದು ಅವರ ಷಡ್ಯಂತ್ರ. ನಂಬಿಕೆ ದ್ರೋಹಿಗಳ ಋಣ ತೀರಿಸುವುದು ಸಿದ್ದರಾಮಯ್ಯ ಅವರು ನಿರ್ಧಾರ ಮಾಡಿದ್ದಾರೆ. ಮೈಸೂರಿನಲ್ಲಿ ಹುಟ್ಟಿ, ರಾಜರ ಮನೆ ಹಾಳು ಮಾಡಿದವರ ಋಣ ತೀರಿಸಬೇಕು ಅಂತೀರಲ್ಲ ಸಿದ್ದರಾಮಯ್ಯ. ನಿಮಗೆ ಮರ್ಯಾದೆ ಇದೆಯಾ ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ಚಾಮುಂಡಿ ದಸರಾ ಆಚರಣೆ ಇಲ್ಲ. ಮಹಿಷಾಸುರನ ದಸರಾ ಮಾಡುತ್ತಾರಂತೆ. ಸಿದ್ದರಾಮಯ್ಯ ಅವರೇ ಇದೇನಾ ನೀವು ಋಣ ತೀರಿಸುವುದು. ಈ ಸರ್ಕಾರ ಇರಬೇಕಾ.? ಇದು ರೈತ ವಿರೋಧಿ ಅಲ್ಲವಾ? ನೀವು ಯಾವತ್ತೋ ಎಗರಿಹೋದ ಟಿಪ್ಪುನ ಖಡ್ಗ ಇಟ್ಟುಕೊಂಡು ಓಡಾಡೋ ನಿಮಗೆ ಇಷ್ಟು ಇರಬೇಕಾದರೆ.? ಟಿಪ್ಪು ಹತ್ಯೆ ಮಾಡಿದ ಉರಿಗೌಡ, ನಂಜೇಗೌಡನ ವಂಶಸ್ಥರು ನಾವು. ನಮಗೆ ಇನ್ನೆಷ್ಟು ಇರಬೇಡ ಎಂದರು.
ಇದನ್ನೂ ಓದಿ | Lingayat CM : ರಾಜ್ಯದಲ್ಲಿ 3 ಲಿಂಗಾಯತ ಡಿಸಿ, 7 ಎಸ್ಪಿ ಇದಾರೆ; ಶಾಮನೂರು ಹೇಳಿಕೆ 100% ತಪ್ಪು ಎಂದ ರಾಯರೆಡ್ಡಿ
ನಾವು ಪೂಜಿಸೋ ಹನುಮ, ಶಿವ, ಚಾಮುಂಡಿ ಎಲ್ಲರ ಬಳಿ ಯಾವ ಆಯುಧ ಇದೆ ಗೊತ್ತಾ? ನೀವು ಒಳ್ಳೆಯವರಾದರೆ ಎದೆಯಲ್ಲಿ ಜಾಗ ಕೊಡುತ್ತೇವೆ. ದುಷ್ಟ ಶಕ್ತಿಗಳ ರಕ್ಷಣೆ ಮಾಡುವ ರಾಜಕಾರಣ ಮಾಡಬೇಡಿ. ಗಣೇಶ ಕೂರಿಸುವಾಗ ನೂರೆಂಟು ಕಂಡೀಷನ್ ಹಾಕುತ್ತೀರಿ. ಅವರಿಗೆ ಹೇಗೆ ಅನುಮತಿ ಕೊಟ್ಟಿರಿ. ಇನ್ನು ಕಣ್ಣು ಮುಚ್ಚಿ ಕುಳಿತರೆ ನಾವು ಉಳಿಯಲ್ಲ, ನಮ್ಮ ಮನೆಯವರು ಉಳಿಯಲ್ಲ. ನಮ್ಮ ಹಿರಿಯರು, ನಾಡಿಗಾಗಿ ಹೋರಾಟ ಮಾಡಿದ್ದಕ್ಕೆ ನಾವು ಉಳಿದಿದ್ದೇವೆ. ನಮ್ಮ ಹಣೆಯಲ್ಲಿ ಕುಂಕುಮ, ಬಳೆ ಉಳಿದಿದೆ ಎಂದರು.