ಬೆಂಗಳೂರು: ಪ್ರಾಣಿ ಕಡಿತಕ್ಕೊಳಗಾದವರಿಗೆ ರೇಬಿಸ್ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್ (Anti Rabies Vaccine-ARV) ಮತ್ತು ರೇಬಿಸ್ ಇಮ್ಯೂನೋಗ್ಲೋಬುಲಿನ್ ಲಸಿಕೆ (RIG) ಉಚಿತವಾಗಿ ನೀಡಲು ಸೂಚಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.
ರೇಬಿಸ್, ಒಂದು ಮಾರಣಾಂತಿಕ ಕಾಯಿಲೆಯಾಗಿದ್ದರೂ ಸಮಯೋಚಿತ ಹಾಗೂ ಸೂಕ್ತ ಚಿಕಿತ್ಸೆಯಿಂದ ಪ್ರಾಣವನ್ನು ಉಳಿಸಬಹುದು. 2030ರ ವೇಳೆಗೆ ನಾಯಿಕಡಿತದಿಂದ ಬರುವ ರೇಬೀಸ್‌ನ ನಿರ್ಮೂಲನೆ ಮಾಡುವುದು ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಧ್ಯೇಯವಾಗಿದೆ. ಕರ್ನಾಟಕದಲ್ಲಿ ರೇಬೀಸ್ ಅನ್ನು ಒಂದು ಅಧಿಸೂಚಿತ ರೋಗ (Notifiable Disease) ಎಂದು 2022ರ ಡಿ.5 ರಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ, ಮಾರಣಾಂತಿಕ ರೇಬಿಸ್ ಕಾಯಿಲೆಯಿಂದ ಜೀವರಕ್ಷಿಸಬಲ್ಲ ಔಷಧಗಳಾದ ಆ್ಯಂಟಿ ರೇಬಿಸ್ ವ್ಯಾಕ್ಸಿನ್ (ARV) ಮತ್ತು ರೇಬಿಸ್ ಇಮ್ಯೂನೋಗ್ಲೋಬುಲಿನ್ (RIG) ಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL)ದ ವಾರ್ಷಿಕ ಇಂಡೆಂಟ್ ಪೂರೈಕೆಯ ಒಂದು ಭಾಗವನ್ನಾಗಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರುವಂತೆ ಸೂಕ್ತ ಕ್ರಮ ಕೈಗೊಳ್ಳಲು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಪರಿಗಣಿಸದೇ ಪ್ರಾಣಿ ಕಡಿತದ ಯಾವುದೇ ಸಂತ್ರಸ್ತರಿಗೆ ಚಿಕಿತ್ಸೆಯನ್ನು ನಿರಾಕರಿಸದೇ, ಎಲ್ಲಾ ಪ್ರಾಣಿ ಕಡಿತ ಪ್ರಕರಣಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಉಚಿತ ARV ಮತ್ತು RIG ಅನ್ನು ಒದಗಿಸಬೇಕು. RIG ಅನ್ನು ವಿವೇಚನೆಯಿಂದ ಬಳಸಲು, “ರೇಬೀಸ್ ರೋಗನಿರೋಧಕ ಮಾರ್ಗಸೂಚಿಗಳು” ಎಂಬ ಶೀರ್ಷಿಕೆಯಡಿಯಲ್ಲಿನ NRCP ಶಿಫಾರಸಿನಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಏನಿದು ರೇಬಿಸ್ ಕಾಯಿಲೆ?
ರೇಬಿಸ್ ಕಾಯಿಲೆ ಎಂಬುದು ರೇಬಿಸ್ ಎಂಬ ವೈರಸ್‌ನಿಂದ ಹರಡುವ ರೋಗವಾಗಿದೆ. ಇದು ವಿಶೇಷವಾಗಿ ಪ್ರಾಣಿಗಳ ರೋಗ. ನಾಯಿ, ಬೆಕ್ಕು, ಕೋತಿ ಮತ್ತಿತರ ಪ್ರಾಣಿಗಳ ಕಡಿತದಿಂದ ಈ ರೋಗ ಹರಡುತ್ತದೆ. ಯಾವುದಾದರೂ ಪ್ರಾಣಿಗೆ ಈ ರೋಗ ಬಂದು ಅದು ಮನುಷ್ಯನಿಗೆ ಕಚ್ಚಿದರೆ ಆ ವ್ಯಕ್ತಿಗೂ ಈ ರೋಗ ಹರಡುತ್ತದೆ. ಸೋಂಕಿತ ಪ್ರಾಣಿಗಳ ಲಾಲಾರಸದಲ್ಲಿ ಈ ವೈರಸ್ ಇರುತ್ತದೆ. ಈ ಕಾಯಿಲೆಗೆ ತುತ್ತಾದ ಪ್ರಾಣಿಯು ಮನುಷ್ಯನನ್ನು ಕಚ್ಚಿದಾಗ, ವೈರಸ್ ಲಾಲಾರಸದ ಮೂಲಕ ಮನುಷ್ಯನ ರಕ್ತವನ್ನು ಪ್ರವೇಶಿಸುತ್ತದೆ.
ಇದನ್ನೂ ಓದಿ | Saffron Health Benefits: ಕೇಸರಿ, ಆರೋಗ್ಯಕ್ಕೆ ಇದೇ ಸರಿ! ಮರೆವಿನ ಕಾಯಿಲೆಗೂ ಇದರಲ್ಲಿ ಮದ್ದಿದೆ!
ರೇಬಿಸ್ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ ತೀವ್ರ ನೋವು, ಸುಸ್ತಾಗುವುದು, ತಲೆ ನೋವು, ಜ್ವರ, ಸ್ನಾಯುಗಳ ಬಿಗಿತ, ಪಾರ್ಶ್ವ ವಾಯು, ಲಾಲಾರಸ, ಕಣ್ಣೀರು ಹೆಚ್ಚು ಉತ್ಪತ್ತಿಯಾಗುವುದು, ದೊಡ್ಡ ಶಬ್ದರಿಂದ ಕಿರಿಕಿರಿಯಾಗುವುದು, ಮಾತನಾಡಲು ತೊಂದರೆಯಾಗುತ್ತದೆ.
ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಕಾಯಿಲೆಯೂ ಬಹಳ ಅಪಾಯಕಾರಿಯಾಗಿದೆ. ನಾಯಿ ಕಚ್ಚಿರುವುದನ್ನು ಕಡೆಗಣಿಸಿದರೆ, ಅದು ಮಾರಣಾಂತಿಕವಾಗಿ ಬದಲಾಗುವ ಸಾಧ್ಯತೆಯಿದೆ. ರೇಬಿಸ್‌ಗೆ ಪರಿಣಾಮಕಾರಿ ಚಿಕಿತ್ಸೆ ಇಲ್ಲ, ಹೀಗಾಗಿ ತಕ್ಷಣ ಆಸ್ಪತ್ರೆಗೆ ತೆರಳಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಅಗತ್ಯ. ಇನ್ನು ಮನೆಯಲ್ಲಿರುವ ಸಾಕು ಪ್ರಾಣಿಗಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕಾಗುತ್ತದೆ. ಇದರಿಂದ ಅವು ಕಚ್ಚಿದಾಗ ಅಥವಾ ಪರಚಿದಾಗ ರೇಬಿಸ್ ರೋಗ ಹರಡುವುದನ್ನು ತಡೆಯಬಹುದಾಗಿದೆ.