ಬೆಂಗಳೂರು: ವಿಧಾನಸಭೆಯಿಂದ (Legislative assembly) ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು (APMC Ammendment bill) ಮತದಾನದ ಮೂಲಕ ಸೆಲೆಕ್ಟ್ ಕಮಿಟಿಗೆ (Select Committee) ವಹಿಸುವ ಪ್ರಸ್ತಾವವನ್ನು ವಿಧಾನ ಪರಿಷತ್ (Legislative Council) ಅಂಗೀಕರಿಸಿದ್ದು, ಎಪಿಎಂಸಿ ಕಾಯ್ದೆ (APMC BILL) ತಿದ್ದುಪಡಿಗೆ ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ವಿಧಾನ ಪರಿಷತ್ ಕಲಾಪದಲ್ಲಿ ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ (Minister Shivananda Pateel), ಎಪಿಎಂಸಿ ಕಾಯ್ದೆ ಕೇಂದ್ರ ವಾಪಸ್ ಪಡೆದರೂ ಕರ್ನಾಟಕ ವಾಪಸ್ ಪಡೆದಿಲ್ಲ, ಹಿಂದೆ ಕಾಯ್ದೆ ತಿದ್ದುಪಡಿ ಮಾಡುವ ವೇಳೆ ಇರಿಸಿಕೊಂಡಿದ್ದ ಕಾನೂನಿನ ಉದ್ದೇಶ ಈಡೇರಿಲ್ಲ, ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ ಮಾತ್ರ ಉಳಿಸಿಕೊಂಡಿವೆ, ಮೊದಲೆಲ್ಲಾ ಆವರ್ತನಿಧಿಗೆ ಸೆಸ್ ಸಂಗ್ರಹ ಮಾಡುತ್ತಿದ್ದೆವು, ಇದರಿಂದ 160 ಕೋಟಿ ಸಂಗ್ರಹವಾಗುತ್ತಿತ್ತು. ಆದರೆ ಹೊಸ ಕಾಯ್ದೆ ತಂದ ನಂತರ 60 ಕೋಟಿಯೂ ಆಗಲ್ಲ. ಹಾಗಾಗಿ ಬೆಲೆ ಕುಸಿದಾಗ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡದ ಸ್ಥಿತಿ ಇದೆ, ಇದ್ದ ಆವರ್ತನಿಧಿ ಕರಗಿ ಹೋಗಿದೆ. ಹಾಗಾಗಿ ಕೊಬ್ಬರಿ ಬೆಂಬಲ ಬೆಲೆಗೆ ಕೇಂದ್ರದ ಕಡೆ ನೋಡಬೇಕಾದ ಸ್ಥಿತಿ ಇದೆ. ಬೆಳೆಗೆ ಎಪಿಎಂಸಿ ಹೊರಗೆ ಉತ್ತಮ ಬೆಲೆ ಸಿಗುತ್ತಿಲ್ಲ, ಎರಡೂ ಕಡೆ ಒಂದೇ ಬೆಲೆ ಇದೆ, ರೈತ ಸಂಘಟನೆಗಳೂ ಹಳೆ ಕಾಯ್ದೆಗೆ ಬೇಡಿಕೆ ಇಡುತ್ತಲೇ ಬರುತ್ತಿದ್ದಾರೆ, ಹೋರಾಟವನ್ನೂ ಮಾಡಿದ್ದಾರೆ ಹಾಗಾಗಿ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.
ವಿಧೇಯಕದ ಮೇಲೆ ಮಾತನಾಡಿದ ಬಿಜೆಪಿಯ ಸದಸ್ಯ ತಳವಾರ್ ಸಾಬಣ್ಣ, ಈ ಕಾಯ್ದೆ ವರ್ತಕರಿಗೆ ಅನುಕೂಲ ಆಗುವ ರೀತಿ ಇದೆ, ಎರಡು ಲಕ್ಷ ವರ್ತಕರು, ದಲ್ಲಾಳಿಗಳಿಗಾಗಿನ 75 ಲಕ್ಷ ರೈತರ ಜೀವನದ ಜೊತೆ ಆಟವಾಡಬಾರದು, ಇದು ಕೇವಲ ಮಧ್ಯವರ್ತಿಗಳ ಪರ ಇರುವ ಕಾಯ್ದೆಯಾಗಿದೆ.ಸಣ್ಣ, ಅತಿಸಣ್ಣ ರೈತರಿಗೆ ಪೂರಕವಾಗಿಲ್ಲ ಹಾಗಾಗಿ ಕಾಯ್ದೆಯನ್ನು ವಿರೋಧಿಸುತ್ತೇನೆ, ಮತ್ತೊಮ್ಮೆ ಮರು ಪರಿಶೀಲನೆ ಮಾಡಿ ಎಂದರು.
ಬಿಜೆಪಿ ಸದಸ್ಯ ನವೀನ್ ಮಾತನಾಡಿ, ಬಿಜೆಪಿ ತಂದಿರುವ ಕಾಯ್ದೆಯಲ್ಲಿ ಎಪಿಎಂಸಿ ಮುಚ್ಚುತ್ತೇವೆ ಎಂದು ಎಲ್ಲೂ ಹೇಳಿಲ್ಲ, ರೈತ ತನಗೆ ಬೇಕಾದ ಕಡೆ ಮಾರಾಟ ಮಾಡುವ ಅವಕಾಶ ಇದೆ ಹಾಗಾಗಿ ಆತ ತನಗೆ ಉತ್ತಮ ಬೆಲೆ ಎಲ್ಲಿ ಸಿಗುತ್ತೋ ಅಲ್ಲಿ ಹೋಗಿ ಮಾರಾಟ ಮಾಡುವ ವ್ಯವಸ್ಥೆ ಹಾಗೆಯೇ ಇರಬೇಕು ಹಾಗಾಗಿ ಈ ಬಿಲ್ ಗೆ ವಿರೋಧ ವ್ಯಕ್ತಪಡಿಸುತ್ತೇನೆ ಎಂದರು.
ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಕೃಷಿಕರಿಗೆ ಮಾತ್ರ ನಿಯಮ ಯಾಕೆ? ಕಾರ್ಖಾನೆ ಇತ್ಯಾದಿ ಎಲ್ಲರೂ ತಮ್ಮ ಉತ್ಪನ್ನ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾದರೆ ರೈತನಿಗೆ ಏಕೆ ಆ ಅವಕಾಶ ಇಲ್ಲ, ರೈತರಿಗೂ ಆ ಅವಕಾಶ ಕೊಡಬೇಕಲ್ಲವೆ? ಬಿಜೆಪಿ ಕಾಯ್ದೆ ಮಾಡಿತ್ತು ಎನ್ನುವ ಕಾರಣಕ್ಕೆ ಎಪಿಎಂಸಿ ಮಸೂದೆ ತಿದ್ದುಪಡಿಗೆ ಮುಂದಾಗಿದೆ. ಹಾಗಾಗಿ ಈ ಕಾಯ್ದೆ ವಿರೋಧಿಸುತ್ತೇವೆ ಎಂದರು.
ಜೆಡಿಎಸ್ ಸದಸ್ಯ ಗೋವಿಂದರಾಜು ಮಾತನಾಡಿ, ಎಪಿಎಂಸಿ ಬಿಟ್ಟು ಹೊರಗೆ ಮಾರಾಟ ಮಾಡಿದರೆ ಆರು ತಿಂಗಳ ಜೈಲು ಶಿಕ್ಷೆ ಯಾವ ನ್ಯಾಯ? ಇದು ಸರಿಯಲ್ಲ, ರೈತರ ಎಲ್ಲ ಬೆಳೆ ಎಇಎಂಸಿಗೆ ತಂದರೆ ಮಾರಾಟಕ್ಕೆ ಜಾಗ ಇರುತ್ತಾ? ರೈತನಿಗೆ ಮಾರಕವಾಗುವ ಈ ಕಾಯ್ದೆ ವಿರೋಧಿಸುತ್ತೇನೆ, ಮೊದಲು ಎಪಿಎಂಸಿಗಳಲ್ಲಿ ಮೂಲಸೌಕರ್ಯ ಕಲ್ಪಿಸಿ ನಂತರ ಕಾಯ್ದೆ ತನ್ನಿ ಒಪ್ಪಿಗೆ ಕೊಡುತ್ತೇವೆ ಎಂದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಕಾರ್ಪೊರೇಟ್ ಕಂಪನಿಗಳು ರೈತರ ಉತ್ಪನ್ನ ಖರೀದಿ ಮಾಡುತ್ತವೆ ಅವರು ಅವರ ಹಿತ ನೋಡುತ್ತಾರೆಯೇ ಹೊರತು ರೈತರ ಹಿತವಲ್ಲ, ಹಾಗಾಗಿ ರೈತರ ಹಿತ ಕಾಯುವ ವ್ಯವಸ್ಥೆ ಬರಬೇಕು, ಬೆಲೆ ಆಯೋಗ ರಚಿಸಿ, 10 ಸಾವಿರ ಕೋಟಿ ಆವರ್ತನಿಧಿ ಇಟ್ಟು ಬೆಲೆ ಕುಸಿದಾಗ ಬೆಂಬಲ ಬೆಲೆಯಡಿ ಎಪಿಎಂಸಿಗಳು ಬೆಳೆ ಖರೀದಿ ಮಾಡಬೇಕು ಈ ವ್ಯವಸ್ಥೆ ಜಾರಿಗೆ ತನ್ನಿ ಎಂದು ಸಲಹೆ ನೀಡಿದರು.
ಕೆಲವರು ಮಣ್ಣಿನ ಮಕ್ಕಳು, ರೈತರ ಮಕ್ಕಳು, ರೈತರ ಸರ್ಕಾರ ಎನ್ನುತ್ತಾರೆ ಆದರೆ ಕಾಯ್ದೆ ವಿರೋಧಿಸುತ್ತಾರೆ ನಿಜವಾಗಿಯೂ ರೈತರ ಕಾಳಜಿ ಇದ್ದವರು ಯಾರೂ ಈ ಕಾಯ್ದೆ ವಿರೋಧಿಸಬಾರದು ಎನ್ನುತ್ತಾ ಕಾಯ್ದೆ ಬೆಂಬಲಿಸಿದರು.
ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಈ ಸರ್ಕಾರ ಬಂದು 50 ದಿನ ಆಗಿದೆ. ಬಿಜೆಪಿ ತಂದ ಎಲ್ಲಾ ಕಾಯ್ದೆ ವಿರೋಧ ಮಾಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ಬಿಜೆಪಿಯ ಎಲ್ಲಾ ಕಾಯ್ದೆಗೆ ಈ ಸರ್ಕಾರ ವಿರೋಧ ಮಾಡುತ್ತಿದೆ. ಈ ಬಿಲ್ ನಿಂದ ಮತ್ತೆ ದಲ್ಲಾಳಿಗಳು ಬರುತ್ತಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ಮುಕ್ತ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನ ಮಾರಾಟ ಆಗಬೇಕು ಅಂತ ಹೇಳಿದ್ದರು. ಆದರೆ ಈಗ ರೈತರ ವಿರೋಧ ಬಿಲ್ ತರುತ್ತಿದ್ದಾರೆ. ಈ ಬಿಲ್ ರೈತ ವಿರೋಧಿ, ದಲ್ಲಾಳಿಗಳ ಪರ ಇದು. ರೈತರ ಉತ್ಪನ್ನ ಇಂತಹವರ ಕಡೆ ಮಾರಾಟ ಮಾಡಿ ಅನ್ನೋದು ಹಿಟ್ಲರ್ ಧೋರಣೆ.ರೈತರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ.ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದಾಗ ಯಾರು ಮಾಡಿಸಿದ್ದರು ಅಂತ ಗೊತ್ತಿದೆ. ಈವೆಂಟ್ ಮ್ಯಾನೇಜ್ಮೆಂಟ್ ಯಾರು ಅಂತ ಗೊತ್ತಿದೆ ಎಂದು ಬಿಲ್ ಗೆ ವಿರೋಧ ವ್ಯಕ್ತಪಡಿಸಿದರು.
ಜೆಡಿಎಸ್ ಸದಸ್ಯ ಬೋಜೇಗೌಡ ಮಾತನಾಡಿ ಕಾಯ್ದೆ ಇದ್ದರೂ ಕೋವಿಡ್ ಸಮಯದಲ್ಲಿ ರೈತರಿಗೆ ಉಪಯೋಗವಾಗಲಿಲ್ಲ ಈಗ ತಿದ್ದುಪಡಿ ಮಾಡುತ್ತಿದ್ದೀರಿ ಇದರ ಬದಲು ಸೆಲೆಕ್ಟ್ ಕಮಿಟಿಗೆ ವಹಿಸಿದರೆ ಅನುಕೂಲವಾಗಲಿದೆ, ಸಲಹೆ ಪಡೆದು ನಿರ್ಧಾರ ಕೈಗೊಳ್ಳಬಹುದು ಎಂದರು.
ಎರಡು ಗಂಟೆಗೂ ಹೆಚ್ಚು ಕಾಲ ನಡೆಸ ಚರ್ಚೆಗೆ ಉತ್ತರ ನೀಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್,
ಈ ಕಾಯ್ದೆಯನ್ನು ಆತುರತೆಯಿಂದ ತಂದಿಲ್ಲ, ಈ ಹಿಂದೆ ಬಿಜೆಪಿಯವರು ತರಬೇಕಾದಾಗಲೇ ನಾವು ವಿರೋಧ ಮಾಡಿದ್ದೆವು, ಕುಮಾರಸ್ವಾಮಿ ಕೂಡ ವಿರೋಧ ಮಾಡಿದ್ದರು,ಆದರೆ ಈಗ ನಮ್ಮ ತಿದ್ದುಪಡಿಗೆ ಯಾಕೆ ಮುಂದಾಗಿದ್ದಾರೋ ಗೊತ್ತಿಲ್ಲ, 2019ರಲ್ಲಿ ಇದ್ದ ಕಾನೂನನ್ನು ಯಥಾವತ್ತಾಗಿ ಮರು ಜಾರಿ ಮಾಡುತ್ತಿದ್ದೇವೆ, 2014 ರಲ್ಲಿ ನೀವು ಆಯ್ಕೆಯಾದರೂ 2019ರವರೆಗೆ ಯಾಕೆ ಕಾಯಬೇಕಿತ್ತು, ಅಲ್ಲಿಯವರೆಗೆ ರೈತರ ಶೋಷಣೆ ನಿಮಗೆ ಕಾಣಲಿಲ್ಲವೇ? ಸುಗ್ರೀವಾಜ್ಞೆ ಮೂಲಕ ಯಾಕೆ ಕಾಯ್ದೆ ಜಾರಿಗೆ ತಂದಿದ್ದೀರಿ, ಕೇಂದ್ರಕ್ಕೂ ಮೊದಲೇ ರಾಜ್ಯದಲ್ಲಿ ಕಾಯ್ದೆಗೆ ತಿದ್ದುಪಡಿ ತಂದರು ಅವರಿಗೆ ಅವಸರ ಇದ್ದಿದ್ದು, ನಾವು ಪ್ರಣಾಳಿಕೆಯಲ್ಲೇ ಹೇಳಿದ್ದೆವು. ಹಾಗಾಗಿ ನಮಗೆ ತರಾತುರಿ ಇಲ್ಲ, ನಮ್ಮ ನಿಲುವಿನಂತೆ ಈಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ರೈತರ ಹಿತದೃಷ್ಟಿಯಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಹಾಗಾಗಿ ಸದನ ಕಾಯ್ದೆಗೆ ಒಪ್ಪಿಗೆ ಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಟಾ ಶ್ರೀನಿವಾಸ ಪೂಜಾರಿ ಈ ಬಿಲ್ ವಿರೋಧಿಸಿ ಹಲವು ಸದಸ್ಯರು ಮಾತನಾಡಿದ್ದಾರೆ ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮನ್ನಣೆ ನೀಡಿ ಬಿಲ್ ವಾಪಸ್ ಪಡೆಯಬೇಕು. ಸೆಲೆಕ್ಟ್ ಕಮಿಟಗೆ ವಹಿಸಬೇಕು ಎಂದರು.
ಸಚಿವ ಶಿವಾನಂದ ಪಾಟೀಲ್ ಮಾತನಾಡಿ ಸೆಲೆಕ್ಟ್ ಕಮಿಟಿಗೆ ಕೊಡುವುದು ಬೇಡ, ಮುಂದೆ ಸಲಹೆ ಪರಿಗಣಿಸಿ ಸೇರಿಸೋಣ, ಈಗ ಬಿಲ್ ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿದರು.
ಪ್ರತಿಪಕ್ಷ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಎಚ್.ಕೆ ಪಾಟೀಲ್, ಈಗಾಗಲೇ ಚರ್ಚೆ ಆಗಿದೆ, ಚರ್ಚೆಗೆ ಮೊದಲೇ ಹೇಳಿದ್ದರೆ ಆಗ ಸಭಾಪತಿ ನಿರ್ಧರಿಸಬಹುದಿತ್ತು. ಆದರೆ ಈಗ ಚರ್ಚೆ ಮುಗಿದಿದೆ. ಹಾಗಾಗಿ ಈಗ ಸೆಲೆಕ್ಟ್ ಕಮಿಟಿಗೆ ವಹಿಸಲು ಬರಲ್ಲ ಎಂದರು. ಆದರೆ ಬಿಜೆಪಿ ಸದಸ್ಯರು ರೂಲ್ ಬುಕ್ ನಲ್ಲಿ ಅವಕಾಶ ಇರುವುದನ್ನು ಪೀಠದ ಗಮನಕ್ಕೆ ತಂದರು. ಅವಕಾಶ ಇರುವುದನ್ನು ಒಪ್ಪಿದ ಸಭಾಪತಿ ಬಸವರಾಜ ಹೊರಟ್ಟಿ, ವಿಧೇಯಕವನ್ನು ಸೆಲೆಕ್ಟ್ ಕಮಿಟಿಗೆ ವಹಿಸುವ ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಪ್ರಸ್ತಾಪದ ಪರ 31 ಹಾಗು ವಿರುದ್ಧ 21 ಮತ ಬಿದ್ದ ಹಿನ್ನಲೆಯಲ್ಲಿ ಎಪಿಎಂಸಿ ಬಿಲ್ ಸದನ ಸಮಿತಿಗೆ ವಹಿಸುವ ಪ್ರಸ್ತಾಪಕ್ಕೆ ಪರಿಷತ್ ಅಂಗೀಕಾರ ನೀಡಿತು. ನಂತರ ಕಲಾಪವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಮುಂದೂಡಲಾಯಿತು.
ಇದನ್ನೂ ಓದಿ : Assembly Session: ಎಸ್ಸಿ, ಎಸ್ಟಿ ಗುತ್ತಿಗೆದಾರರ ಕಾಮಗಾರಿಗಳ ಮೊತ್ತ 50 ಲಕ್ಷದಿಂದ 1 ಕೋಟಿ ರೂ.ಗೆ ಹೆಚ್ಚಳ