Site icon Vistara News

Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್‌ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!

Appeals to CM not to increase liquor prices

ಬೆಂಗಳೂರು: ಅನೇಕ ಬಜೆಟ್‌ ಮಂಡನೆ ಸಂದರ್ಭದಲ್ಲಿ ಮದ್ಯ ಪ್ರಿಯರಿಗೆ ಆಯಾ ಸರ್ಕಾರಗಳು ಶಾಕ್‌ ಕೊಡುತ್ತಲೇ ಬರುತ್ತಿವೆ. ಮದ್ಯದ ದರದ ಮೇಲೆ ಅಬಕಾರಿ ಸುಂಕವನ್ನು ಹೇರುತ್ತಿವೆ. ಈಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್‌ ಮಂಡನೆ ಮಾಡಲಿದ್ದಾರೆ. ಈ ನಡುವೆ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲಿದೆ. ಅದಕ್ಕೆ ಹಣ ಹೊಂದಾಣಿಕೆಯನ್ನು ಮಾಡಬೇಕಿದೆ. ಇದು ಈಗ ಮದ್ಯ ಪ್ರಿಯರಲ್ಲಿ ತಲ್ಲಣವನ್ನು ಹುಟ್ಟಿಸಿದೆ. ಈ ಕಾರಣಕ್ಕೆ ಅವರೆಲ್ಲರೂ “ಎಣ್ಣೆಯ ವಿಷ್ಯ, ಬೇಡವೋ ಶಿಷ್ಯ” ಎಂಬ ಹಾಡನ್ನು ಹಾಡಬೇಕಾಗುತ್ತದೆ ಎಂದು ಆತಂಕದಲ್ಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಮದ್ಯ ಪ್ರೇಮಿಗಳ/ಕುಡುಕರ ಸಂಘವು, ಈಗಾಗಲೇ ಮದ್ಯದ ಸುಂಕವನ್ನು ಹೆಚ್ಚಳ ಮಾಡಿದ್ದು, ಅದನ್ನು ಇಳಿಸಿ ಎಂದು ಮನವಿ ಮಾಡಿದ್ದಾರೆ. ಈ ಪತ್ರ ಈಗ ವೈರಲ್‌ (Viral News) ಆಗಿದೆ.

ಇದಲ್ಲದೆ, ಅಬಕಾರಿ ಸಚಿವರು, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರದ ಪ್ರತಿಯನ್ನು ಲಗತ್ತಿಸಿದ್ದು, ದಯಮಾಡಿ ಅಬಕಾರಿ ಸುಂಕವನ್ನು ಇಳಿಸಿ ಸಂಕಷ್ಟದಲ್ಲಿರುವ ಮದ್ಯ ಪ್ರಿಯರ ರಕ್ಷಣೆಗೆ ದಾವಿಸಿ ಎಂದು ಮೊರೆ ಇಟ್ಟಿದ್ದಾರೆ!

ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್!‌ 90 ರೂಪಾಯಿ ಮಿನಿಮಮ್ ಚಾರ್ಜ್‌ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?

ಮುಖ್ಯಮಂತ್ರಿಗೆ ಪತ್ರ ಬರೆದ ಮದ್ಯಪ್ರಿಯರು

ಮನವಿ ಪತ್ರದಲ್ಲೇನಿದೆ?

ಮಾನ್ಯ ಮುಖ್ಯಮಂತ್ರಿ ಮತ್ತು ಮದ್ಯ ಪ್ರಿಯರ ಇಲಾಖೆ ಅಂದರೆ ಅಬಕಾರಿ ಇಲಾಖೆಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ರಾಜ್ಯದಲ್ಲಿ ಜಾತಿ, ಧರ್ಮ, ಬಡವ ,ಬಲ್ಲಿದ, ರಾಜಕಾರಣಿ, ಡಾಕ್ಟರ್, ಪತ್ರಕರ್ತ, ಸರ್ಕಾರಿ ನೌಕರರು,‌ ವಕೀಲರು ಎಂಬ ತಾರತಮ್ಯ ಇಲ್ಲದೆ ಮದ್ಯ ಸೇವನೆಯನ್ನು ಮಾಡುತ್ತಾರೆ. ಎಲ್ಲ ವರ್ಗದವರು ಮದ್ಯ ಸೇವನೆಯನ್ನು ಮಾಡುತ್ತಿದ್ದು, ಇದು ಆಹಾರ ಸಂಸ್ಕೃತಿಯ ಭಾಗವಾಗಿದೆ. ಮದುವೆ, ಹಬ್ಬ ಹರಿದಿನಗಳಲ್ಲಿ ಆರಾಧನೆ ಪದ್ಧತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಸುರಪಾನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ.

ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲ ಆದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬ ದುಃಖಕರ ವಿಷಯ. ಈಗಾಗಲೇ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಏನೆಂದರೆ, ಒಬ್ಬ ‌ಬಿಪಿಎಲ್‌ ಕಾರ್ಡ್ ಹೊಂದಿದವನ ಆದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಗೂಲಿ ನೌಕರ ದಿನವೂ ಸರಾಸರಿ 180 ಎಂ.ಎಲ್‌. ಕುಡಿದರೂ ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿಯಷ್ಟು ಮದ್ಯಕ್ಕೆ ಖರ್ಚು ತಗಲುತ್ತದೆ. ಅಂದರೆ, ತಿಂಗಳಿಗೆ 7500 ರೂಪಾಯಿ ಬೇಕಾಗುತ್ತದೆ. ವಾರ್ಷಿಕ 90,000 ರೂಪಾಯಿ ಒಬ್ಬ ಮದ್ಯ ಪ್ರೇಮಿ ಕುಡುಕನಿಗೆ ಬೇಕಾಗುತ್ತದೆ.

ಇದನ್ನೂ ಓದಿ: Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಆದ್ದರಿಂದ ಮದ್ಯದ ಮೇಲಿನ ಸುಂಕದ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಸ್ಥಳೀಯ ಬ್ರಾಂಡ್‌ನ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಹಾಗೂ ಬಿಯರ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂದು ಎಲ್ಲ ಮದ್ಯ ಪ್ರಿಯ ಬ್ರದರ್ಸ್ & ಸಿಸ್ಟರ್ಸ್ ಪರವಾಗಿ ವಿನಂತಿಸುತ್ತೇವೆ.

Exit mobile version