ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಯಲ್ಲಿ ಒಂದಾದ “ಗೃಹಲಕ್ಷ್ಮಿ” ಯೋಜನೆ (Gruha Lakshmi Scheme) ಜಾರಿಗೆ ಸಾಕಷ್ಟು ಸಿದ್ಧತೆಗಳು ನಡೆಯುತ್ತಿದೆ. ಅಲ್ಲದೆ, ಈ ಸಂಬಂಧ ಈಗ ಪ್ರಜಾಪ್ರತಿನಿಧಿಗಳ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇವರು ಅರ್ಹರ ಮನೆ ಬಾಗಿಲಿಗೆ ಹೋಗಲಿದ್ದು, ಅವರ ಊರಿಗೇ ಬಂದು ಅರ್ಜಿಯನ್ನು ಭರ್ತಿ ಮಾಡಲಿದ್ದಾರೆ. ಈ ಮೂಲಕ ಮೊಬೈಲ್ ತಂತ್ರಾಂಶದ ಬಳಕೆ ಬಗ್ಗೆ ಮಾಹಿತಿ ಇಲ್ಲದಿರುವ, ಅರಿವಿಲ್ಲದಿರುವವರಿಗೆ ಇದು ಅನುಕೂಲವನ್ನುಂಟು ಮಾಡಲಿದೆ. ಇದೇ ಜುಲೈ 14ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ ಎಂದು ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಪ್ರತಿ ಜಿಲ್ಲೆಯಲ್ಲೂ ಪ್ರಜಾಪ್ರತಿನಿಧಿಗಳ ನೇಮಕ ಮಾಡಲಾಗಿದೆ. ಪ್ರತಿ ಜಿಲ್ಲೆಗೂ ನೇಮಕ ಮಾಡಲಾಗುತ್ತಿದ್ದು, 50ರಿಂದ 100 ಜನ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ. ಯೋಜನೆ ಸಮರ್ಪಕ ಜಾರಿಗೆ ಗೃಹಲಕ್ಷ್ಮಿ ಆ್ಯಪ್ ಅನ್ನು ಇಡಿಸಿಎಸ್ ಡಿಪಾರ್ಟ್‌ಮೆಂಟ್ ಸಿದ್ಧಪಡಿಸಿದೆ. ಪ್ರಜಾಪ್ರತಿನಿಧಿಗಳಾಗಿ ನೇಮಕಗೊಂಡವರ ಮೊಬೈಲ್‌ಗೆ ಈ ಆ್ಯಪ್ ಅನ್ನು ಅಳವಡಿಕೆ ಮಾಡಲು ಚಿಂತನೆ.
ಇದನ್ನೂ ಓದಿ: PM Modi : ನರೇಂದ್ರ ಮೋದಿಗೆ ಬುದ್ಧಿ ಹೇಳಿ; ಪ್ರಧಾನಿ ವಿರುದ್ಧ ರಾಷ್ಟ್ರಪತಿಗೆ ದಿನೇಶ್ ಗುಂಡೂರಾವ್ ಪತ್ರ
ಜುಲೈ 14ರಿಂದ ಅರ್ಜಿ ಸ್ವೀಕಾರ
ಗೃಹಲಕ್ಷ್ಮಿ ಯೋಜನೆಗೆ ಜುಲೈ 14ರಿಂದ ಅರ್ಜಿ ಸ್ವೀಕಾರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಅಲ್ಲದೆ, ಈ ಬಗ್ಗೆ ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಬೆಳಗಾವಿಯಲ್ಲಿ ಹೇಳಿದ್ದಾರೆ. ಆಗಸ್ಟ್ 15ಕ್ಕೆ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಯಜಮಾನಿ ಎಂದು ಗುರುತಿಸಿಕೊಂಡವರ ಖಾತೆಗೆ ಹಣ ವರ್ಗಾವಣೆಯಾಗಲಿದೆ.
ಅರ್ಜಿದಾರರು ಶುಲ್ಕ ಕೊಡಬೇಕಿಲ್ಲ
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರ ಖಾತೆಗೆ ಹಣ ಸಂದಾಯವಾಗಲಿದೆ. ಇನ್ನು ಪ್ರತಿ ಅರ್ಜಿಗೆ ಪ್ರಜಾಪ್ರತಿನಿಗಳಿಗೆ 15 ರೂಪಾಯಿ ಸೇವಾಶುಲ್ಕವನ್ನು ನೀಡಲು ಚಿಂತನೆ ನಡೆಸಲಾಗಿದೆ. ಅರ್ಜಿ ಸಲ್ಲಿಕೆಗೆ 10 ರೂಪಾಯಿ ಹಾಗೂ ಮುದ್ರಿತ ಪ್ರತಿಗೆ 5 ರೂಪಾಯಿಯನ್ನು ಸರ್ಕಾರದಿಂದ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ಅರ್ಜಿದಾರರು ಯಾವುದೇ ಶುಲ್ಕ ಸಲ್ಲಿಸುವಂತಿಲ್ಲ. ಪ್ರತಿ ಜಿಲ್ಲೆಯಲ್ಲೂ ಪ್ರತಿನಿಧಿಗಳ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿಗಳು ನಿರ್ವಹಿಸಲಿದ್ದಾರೆ.
ಯಾವ ರೀತಿ ಅರ್ಜಿ ಸಲ್ಲಿಸಬಹುದು?
ಪ್ರಜಾಪ್ರತಿನಿಧಿಗಳ ಮೊಬೈಲ್‌ಗೆ ಆ್ಯಪ್ ಅನ್ನು ಅಳವಡಿಕೆ ಮಾಡಲಾಗುತ್ತದೆ. ಮೊಬೈಲ್‌ನಲ್ಲಿ ಲಾಗಿನ್ ಅವರಿಗೆ ಆಗಲು ಪಾಸ್‌ವರ್ಡ್ ಕೊಡಲಾಗುವುದು. ಪ್ರತಿನಿಧಿಗಳು ಆ್ಯಪ್‌ಗೆ ಲಾಗಿನ್ ಆಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಇದಕ್ಕೆ ರೇಷನ್ ಕಾರ್ಡ್, ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರವನ್ನು ಅಪ್ಲೋಡ್ ಮಾಡುವುದು. ಅರ್ಜಿ ಸಲ್ಲಿಸಿದ ಪ್ರತಿಯನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ.
ಹಿಂಬಾಕಿ ಇದ್ದರೂ ಗೃಹಜ್ಯೋತಿಗೆ ಅರ್ಹರು
ಬಿಲ್ ಬಾಕಿ ಉಳಿಸಿಕೊಂಡವರಿಗೂ ಗೃಹಜ್ಯೋತಿ ಸೌಲಭ್ಯ ಸಿಗಲಿದೆ. ಫಲಾನುಭವಿಗಳಿಗೆ ಸರಾಸರಿ ಆಧಾರದಲ್ಲಿ 200 ಯುನಿಟ್‌ವರೆಗೂ ಉಚಿತ ವಿದ್ಯುತ್ ಲಭ್ಯವಾಗಲಿದೆ. ಬಾಕಿ ಇರುವ ಬಿಲ್ ಕಟ್ಟಲು ಮೂರು ತಿಂಗಳು ಕಾಲಾವಕಾಶವನ್ನು ಇಂಧನ ಇಲಾಖೆ ನೀಡಿದೆ. ಸೆಪ್ಟೆಂಬರ್ 30ರೊಳಗೆ ಹಿಂಬಾಕಿಯನ್ನು ಕಟ್ಟಬೇಕು ಎಂದು ಇಂಧನ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Caste Census : ರಾಜ್ಯದಲ್ಲಿ ಕುರುಬರು ಶೇ. 7ರಷ್ಟಿದ್ದಾರೆ; ಅವರಿಗಾಗಿಯೇ ಜಾತಿ ಗಣತಿ ಮಾಡಿಸಿದೆ: ಸಿಎಂ ಸಿದ್ದರಾಮಯ್ಯ
ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ ಆಗಸ್ಟ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ. ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ ಇರಲಿದೆ. ಹೀಗಾಗಿ ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್‌ನಲ್ಲಿ ಪ್ರಯೋಜನ ಸಿಗುವುದಿಲ್ಲ. ಅವರಿಗೆ ಸೆಪ್ಟೆಂಬರ್‌ನಲ್ಲಿ ದೊರೆಯುವ ಆಗಸ್ಟ್ ತಿಂಗಳ ಬಿಲ್ ಉಚಿತ ಆಗಲಿದೆ.