ಮೈಸೂರು: ಮನೆ ಯಜಮಾನಿಗೆ 2000 ರೂಪಾಯಿ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಕೆ ಆರಂಭದ ದಿನಾಂಕವನ್ನು ಜೂನ್ 27ರಂದು ಘೋಷಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದ ಚಾಮುಂಡಿ ಬೆಟ್ಟಕ್ಕೆ ಶನಿವಾರ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಪ್ರತ್ಯೇಕ ಆ್ಯಪ್ ರೂಪಿಸಿದ್ದೇವೆ. ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ಮಾಡಿದ್ದೇವೆ. ಜೂನ್ 27 ರಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಆ್ಯಪ್ ತೋರಿಸುತ್ತೇವೆ. ನಂತರ ಅರ್ಜಿ ಸಲ್ಲಿಕೆಗೆ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಆಗಸ್ಟ್ 17ರ ನಂತರ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ, ಯಾವ ಶುಲ್ಕವೂ ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ರಚಿಸಿದ್ದೇವೆ. ಒಂದು ರೂಪಾಯಿಯನ್ನೂ ಅರ್ಜಿ ಸಲ್ಲಿಕೆಗೆ ಕೊಡುವವಂತಿಲ್ಲ. ಅರ್ಜಿ ಸಲ್ಲಿಸಿ ಸ್ಚೀಕೃತಿ ಪತ್ರ ಸಿಕ್ಕರೆ ಫಲಾನುಭವಿ ಪಟ್ಟಿಗೆ ಸೇರ್ಪಡೆಯಾಗುತ್ತಾರೆ.
ಇದರಲ್ಲಿ ಯಾವುದೇ ಗೊಂದಲಗಳು ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಮೌಢ್ಯಕ್ಕೆ ಬ್ರೇಕ್ : ವಾಸ್ತು ಸರಿ ಇಲ್ಲ ಎಂದು ಮುಚ್ಚಿದ್ದ ಸಿಎಂ ಕಚೇರಿ ದಕ್ಷಿಣ ಬಾಗಿಲು ತೆರೆಸಿದ ಸಿದ್ದರಾಮಯ್ಯ
ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಹಣಕಾಸಿನ ತೊಂದರೆ ಇದೆ ಎಂಬುದರಲ್ಲಿ ಅರ್ಥವಿಲ್ಲ. ಎಲ್ಲಾ ರೀತಿಯ ಸಂಪನ್ಮೂಲ ನಮ್ಮ ಬಳಿ ಇದೆ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಚಾಮುಂಡಿ ತಾಯಿಯಲ್ಲಿ ಹರಕೆ ಕಟ್ಟಿದ್ದೆ. ಹೀಗಾಗಿ ಹರಕೆ ತೀರಿಸಿದ್ದೇನೆ. ರಾಜ್ಯದಲ್ಲಿ ಒಳ್ಳೆ ಮಳೆಯಾಗಲಿ ಎಂದು ದೇವಿ ಮುಂದೆ ಬೇಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.