ಬೆಂಗಳೂರು: ರಾಜಧಾನಿಯನ್ನು ಸರ್ವತೋಮುಖ ಅಭಿವೃದ್ಧಿ ಮಾಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬ್ರ್ಯಾಂಡ್ ಬೆಂಗಳೂರು (Brand Bangalore) ಯೋಜನೆಗೆ ತಜ್ಞರ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ. ಜತೆಗೆ ಸಮಿತಿಯ ಕಾರ್ಯವ್ಯಾಪ್ತಿ ಹಾಗೂ ಕಾರ್ಯವೈಖರಿಯನ್ನೂ ಆದೇಶದಲ್ಲಿ ಉಲ್ಲೇಖಿಸಿದೆ.
ರಾಜಧಾನಿಯನ್ನು ಸರ್ವತೋಮುಖ ಅಭಿವೃದ್ಧಿ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಈ ನಿಟ್ಟಿನಲ್ಲಿ ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ವಿವಿಧ ಕ್ಷೇತ್ರಗಳ ಗಣ್ಯರ ಜತೆ ಕಳೆದ ಜೂನ್ 17ರಂದು ವಿಧಾನಸೌಧದಲ್ಲಿ ಸಭೆ ನಡೆಸಿದ್ದರು. ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಪೂರಕವಾಗಿ ಸಲಹೆಗಳನ್ನು ಸ್ವೀಕರಿಸಿದ್ದರು. ಈಗ ತಜ್ಞರ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ.
ಬೆಂಗಳೂರನ್ನು ಜಾಗತಿಕ ನಗರವಾಗಿಸೋ ಗುರಿ ಹೊಂದಿರುವ “ಬ್ರ್ಯಾಂಡ್ ಬೆಂಗಳೂರು” ಕನಸಿಗೆ ಈ ಮೂಲಕ ವೇಗ ನೀಡಲು ಮುಂದಾಗಲಾಗಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ನಾಲ್ವರನ್ನು ಒಳಗೊಂಡು ಸಮಿತಿಯನ್ನು ರಚನೆ ಮಾಡಲಾಗಿದೆ.
ಸಮಿತಿ ಸದಸ್ಯರ ವಿವರ
ಬಿ.ಎಸ್. ಪಾಟೀಲ್, ಬ್ರ್ಯಾಂಡ್ ಬೆಂಗಳೂರು ಯೋಜನೆ ಅಧ್ಯಕ್ಷ, ನಿವೃತ್ತ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರ್ಕಾರ, ಸಿದ್ದಯ್ಯ, ನಿವೃತ್ತ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸರ್ಕಾರ, ಪ್ರೊ. ಎಂ.ವಿ. ರಾಜೀವ್ ಗೌಡ, ರಾಜ್ಯ ಸಭೆ ಮಾಜಿ ಸಂಸದ, ರವಿಚಂದರ್, ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಿರ್ದೇಶಕ.
ಇದನ್ನೂ ಓದಿ: Liquor Price : ಕುಡುಕರ ಕಿಕ್ಕಿಳಿಸಿತು ಎಣ್ಣೆ ರೇಟು; 18 ಸ್ಲ್ಯಾಬ್‌ಗಳಿಗೆ ಬಿತ್ತು ಸುಂಕದೇಟು!
ಸಮಿತಿಗೆ ಸರ್ಕಾರ ವಹಿಸಿರುವ ಕಾರ್ಯಗಳೇನು?
- ಬಿಬಿಎಂಪಿ (BBMP), ಬಿಡಿಎ (BDA), ಬಿಡಬ್ಲ್ಯೂ ಎಸ್ಎಸ್ಬಿ (BWSSB), ಬಿಎಂಆರ್ಡಿಎ (BMRDA), ಡಲ್ಟ್, ಬಿಎಂಆರ್ಸಿಎಲ್ ಸೇರಿ ಎಲ್ಲ ಸಂಸ್ಥೆಗಳ ವಿನೂತನ ರೀತಿಯಲ್ಲಿ ವರ್ಚಸ್ಸು ವೃದ್ಧಿ ಮಾಡುವುದು.
- ಬೆಂಗಳೂರು ಮಹಾನಗರ ಪೊಲೀಸ್ (Bangalore Police), ಅಗ್ನಿಶಾಮಕ ದಳ (Fire Brigade), ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿ (Slum Clearance Development Board), ಬಿಎಂಟಿಸಿ, ಬೆಸ್ಕಾಂ, ಸಬ್ ಅರ್ಬನ್ ರೈಲು, ಕಾರ್ಪೊರೇಷನ್ಗಳ ಸಮನ್ವಯ ಸಾಧಿಸುವುದು.
- ಬೆಂಗಳೂರು ಟ್ರಾಫಿಕ್ ನಿರ್ವಹಣೆ, ಪರಿಸರ , ಘನತ್ಯಾಜ್ಯ ನಿರ್ವಹಣೆ, ಆರೋಗ್ಯ, ಇ-ಆಡಳಿತ ಸ್ಥಾಪಿಸಿ ಜಾಗತಿಕ ನಗರವಾಗಿಸಲು ವೈಜ್ಞಾನಿಕ ಶಿಫಾರಸುಗಳನ್ನು ಮಾಡುವುದು.
- ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಕೈಗೊಳ್ಳಬೇಕಾದ ವೈಜ್ಞಾನಿಕ ಕ್ರಮದ ಬಗ್ಗೆ ತಿಳಿಸುವುದು.
- ಸಮಿತಿಗೆ ಬೆಂಗಳೂರು ಅಭಿವೃದ್ಧಿಗೆ ವೈಜ್ಞಾನಿಕವಾಗಿ ಸಲಹೆ ನೀಡುವಂತೆ ಸೂಚಿಸಿದ ಸರ್ಕಾರ