Site icon Vistara News

Karnataka Budget Session 2024: ಸವಳು-ಜವಳು ಭೂಮಿ ಸುಧಾರಣೆಗೆ ಕ್ರಮ: ಎನ್.ಚಲುವರಾಯಸ್ವಾಮಿ

Appropriate steps to be taken to improve marshy land sasy N Chaluvarayaswamy

ಬೆಂಗಳೂರು: ಜಲಾನಯನ ಅಭಿವೃದ್ಧಿ ಇಲಾಖೆಯಿಂದ (Watershed Development Department) ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (Rashtriya Krishi Vikas Yojana) ರಾಜ್ಯಾದ್ಯಂತ ಜಲಾನಯನ ಪ್ರದೇಶದಲ್ಲಿ (ಅಚ್ಚುಕಟ್ಟು ಹೊರತುಪಡಿಸಿ) ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಸಿ ಕಾಲುವೆಗಳ ನಿರ್ಮಾಣದ ಮೂಲಕ ಸವಳು-ಜವಳು ಮಣ್ಣಿನ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ತಿಳಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಈ ವಿಷಯ ಪ್ರಸ್ತಾಪವಾಗಿದ್ದು, ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ಕಾಗವಾಡ ಕ್ಷೇತ್ರದ ಶಾಸಕರಾದ ಬರಮಗೌಡ ಆಲಗೌಡ ಕಾಗೆ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿರವರು ಉತ್ತರಿಸಿ, ಈ ಕಾರ್ಯಕ್ರಮದಡಿ ಕಪ್ಪು ಮಣ್ಣಿನ ಪ್ರತಿ ಹೆಕ್ಟೇರ್‌ಗೆ 1.25 ಲಕ್ಷ ರೂ. ಹಾಗೂ ಕೆಂಪು ಮಣ್ಣಿನಲ್ಲಿ 65000 ರೂಪಾಯಿ ವೆಚ್ಚದಲ್ಲಿ ಅಂತರ ಬಸಿ ಕಾಲುವೆಯನ್ನು ನಿರ್ಮಾಣ ಮಾಡುವುದರ ಮೂಲಕ ಉಪಚರಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಸಮಸ್ಯೆಗೆ ಕಾರಣ ವಿವರಿಸಿದ ಕೃಷಿ ಸಚಿವ

ಒಣ ಭೂಮಿ/ಶುಷ್ಕ ಪ್ರದೇಶಗಳಲ್ಲಿ, ನೀರು ಆವಿಯಾಗುವಿಕೆಯು ಬೀಳುವ ಮಳೆಯ ಪ್ರಮಾಣವನ್ನು ಮೀರಿದ ಸಂದರ್ಭದಲ್ಲಿ ಮಣ್ಣಿನಲ್ಲಿರುವ ಲವಣಗಳು ಮಣ್ಣಿನ ಮೇಲ್ಮೈ/ಬೇರಿನ ಬಳಿ ಸಂಗ್ರಹವಾಗುವುದು, ನೀರಾವರಿಯ ಅತಿಯಾದ ಬಳಕೆ, ನೀರಿನ ಗುಣಮಟ್ಟ ಲವಣಯುಕ್ತವಾಗಿದ್ದರೆ, ಅಸಮರ್ಪಕ ಮತ್ತು ನೀರಿನ ದುರ್ಬಲ ಬಸಿಯುವಿಕೆಯಿಂದ ನಿರಂತರವಾಗಿ ಮಣ್ಣಿನ ಮೇಲ್ಭಾಗ ಮತ್ತು ಕೆಳಭಾಗದ ಮಣ್ಣಿನಲ್ಲಿ (sub surface) ಲವಣ ಶೇಖರಣೆ ಪ್ರಮಾಣವು ಹೆಚ್ಚು ವೇಗವಾಗಿರುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸವಳು-ಜವಳು ಮಣ್ಣಿನಲ್ಲಿ ಸೋಡಿಯಂ ಪ್ರಮಾಣ ಅಧಿಕವಾಗಿರುವುದರಿಂದ ಮಣ್ಣಿನ ಭೌತಿಕ ಗುಣಧರ್ಮಗಳು ಹಾಳಾಗಿರುವುದರಿಂದ ಮಣ್ಣಿನ ಭೌತಿಕ ಗುಣಧರ್ಮಗಳು ಹಾಳಾಗುವುದರ ಜೊತೆಗೆ ನಿಧಾನವಾಗಿ ನೀರಿನ ಬಸಿಯುವಿಕೆ, ಸಾವಯವ ಅಂಶದ ಕೊರತೆಯಿಂದ ಸೂಕ್ಷ್ಮ ಜೀವಿಗಳ ಕುಂಠಿತ ಚಟುವಟಿಕೆ, ಬೆಳೆಗೆ ದೊರೆಯುವ ಸಾರಜನಕದ/ಲಘು ಪೋಷಕಾಂಶಗಳ ಕೊರತೆಯಂತಹ ಸಮಸ್ಯೆಗಳಿಂದಾಗಿ ಸಸ್ಯಗಳ ಬೆಳವಣಿಗೆ ಕುಂಠಿತವಾಗುವುದು. ಇದರಿಂದಾಗಿ ಕಾಲಕ್ರಮೇಣ ಭೂಮಿಯು ವ್ಯವಸಾಯ/ಬೇಸಾಯ ಕೈಗೊಳ್ಳಲು ನಿರುಪಯುಕ್ತವಾಗುವುದು ಎಂದು ಎನ್.ಚಲುವರಾಯಸ್ವಾಮಿ ವಿವರಿಸಿದರು.

ಹಂತ ಹಂತವಾಗಿ ಮಣ್ಣು ಸುಧಾರಣೆ ಕಾರ್ಯಕ್ರಮ ಜಾರಿ

ಬೆಳಗಾವಿ ಜಿಲ್ಲೆ ಅವಿಭಾಜ್ಯ ಅಥಣಿ (ಕಾಗವಾಡ) ತಾಲೂಕಿನಲ್ಲಿ 1151.54 ಹೆಕ್ಟೇರ್ ಸವಳು-ಜವಳು ಕೃಷಿ ಭೂಮಿ ಇದ್ದು, ಹಂತ ಹಂತವಾಗಿ ಮಣ್ಣು ಸುಧಾರಣೆ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಇದನ್ನೂ ಓದಿ: Karnataka Budget Session 2024: ಕುಕ್ಕರ್‌ ಬ್ಲಾಸ್ಟ್‌ ಮಾಡಿದ್ದ ಬ್ರದರ್‌ ಬಗ್ಗೆ ಹೇಳುತ್ತೀರಿ, ಹಾವೇರಿ ಸಿಸ್ಟರ್‌ ಬಗ್ಗೆಯೂ ಮಾತಾಡಿ: ಅಶೋಕ್!

ಗ್ರಾಮಗಳ ಆಯ್ಕೆ ಬಗ್ಗೆ ಸಚಿವರಿಂದ ಮಾಹಿತಿ

ಕಾಗವಾಡ ತಾಲೂಕಿನಲ್ಲಿ ಸವಳು-ಜವಳಾಗಿರುವ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು ಜಲಾನಯನ ಅಭಿವೃದ್ಧಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಕಾರಾತ್ಮಕ ಮಣ್ಣಿನ ಸುಧಾರಣೆ ಕಾರ್ಯಕ್ರಮದಡಿ 2016-17ನೇ ಸಾಲಿನಲ್ಲಿ ಕುಸನಾಳ ಗ್ರಾಮದಲ್ಲಿ 100 ಹೆಕ್ಟೇರ್ ಪ್ರದೇಶವನ್ನು ಹಾಗೂ 2020-21ನೇ ಸಾಲಿನಲ್ಲಿ ಜುಗಳ ಗ್ರಾಮದಲ್ಲಿ 154.08 ಹೆಕ್ಟೇರ್, 2022-23ನೇ ಸಾಲಿನಲ್ಲಿ ಕಾಗವಾಡ ಗ್ರಾಮದಲ್ಲಿ 46.94 ಹೆಕ್ಟೇರ್ ಪ್ರದೇಶ ಭೂಮಿಯನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಂಕಿ ಅಂಶ ಒದಗಿಸಿದರು.

Exit mobile version