ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಗಲಿ ಒಂದು ವರ್ಷ ಘಟಿಸಿದ್ದರೂ ಅವರ ಮೇಲಿನ ಅಭಿಮಾನ ಮಾತ್ರ ಇನ್ನೂ ಹಸಿರಾಗಿಯೇ ಇದೆ. ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ (Appu Namana) ಅಂಗವಾಗಿ ರಾಜ್ಯದ ವಿವಿಧೆಡೆಯಿಂದ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಶನಿವಾರ (ಅ. ೨೯) ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪುನೀತ್ ಸಮಾಧಿ ದರ್ಶನ ಪಡೆದಿದ್ದಾರೆ.
ಶನಿವಾರ ಒಂದೇ ದಿನ ಬೆಳಗ್ಗೆಯಿಂದ ಸಂಜೆ ೫ ಗಂಟೆವರೆಗೆ 1.3೦ ಲಕ್ಷ ಜನರು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಮತ್ತೂ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಲೇ ಇದ್ದಾರೆ. ಈ ಮಧ್ಯೆ ಸರತಿ ಸಾಲಿನಲ್ಲಿ ಅಪ್ಪು ಪರವಾಗಿ ಘೋಷಣೆ ಕೂಗುವುದು, ಪುನೀತ್ ಅಭಿನಯದ ಸಿನಿಮಾಗಳ ಹಾಡುಗಳನ್ನು ಹಾಡುವುದು, ಗಂಧದ ಗುಡಿ ಸಿನಿಮಾದ ಪೋಸ್ಟರ್, ಪುನೀತ್ ಫೋಟೋಗಳನ್ನು ಹಿಡಿದು ಸಾಗುವ ಮೂಲಕ ಪುನೀತ್‌ರನ್ನು ಅಭಿಮಾನಿಗಳು ಸ್ಮರಿಸಿದ್ದಾರೆ.
ಭದ್ರತೆ ಪರಿಶೀಲನೆ
ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದು, ಇನ್ನೂ ಜನರು ಸರತಿ ಸಾಲುಗೆ ಸೇರ್ಪಡೆಯಾಗುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಭೇಟಿ ನೀಡಿದ್ದು, ಭದ್ರತೆಯನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜನರು ಸಾಲಿನಲ್ಲಿ ಬಂದು ಸಮಾಧಿ ದರ್ಶನ ಪಡೆದು ಹೋಗುತ್ತಿದ್ದಾರೆ. ಇನ್ನೂ ಸರತಿ ಸಾಲಿನಲ್ಲಿ ಆಗಮಿಸುತ್ತಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ | Puneeth Rajkumar | ಕನ್ನಡ ಪಠ್ಯದಲ್ಲಿ ಪುನೀತ್ ಜೀವನ ಸಾಧನೆ; ಮುಂದಿನ ವರ್ಷಕ್ಕೆ ತೀರ್ಮಾನ: ಅಶೋಕ್