ಬೆಂಗಳೂರು: ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಲಕ್ಷಾಂತರ ಜನರ ಸಮ್ಮುಖದಲ್ಲಿ ನೀಡಲಾದ ಕರ್ನಾಟಕ ರತ್ನ ಪ್ರಶಸ್ತಿ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಯಿತು! ಹೌದು, ರಾಜ್ಯದ ಪರಮೋಚ್ಛ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ಪತಿಯ ಪರವಾಗಿ ಸ್ವೀಕರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನೇರವಾಗಿ ಮನೆಗೆ ತೆರಳಿ ಅಲ್ಲಿದ್ದ ಪುನೀತ್ ಅವರ ಭಾವಚಿತ್ರಕ್ಕೆ ತೊಡಿಸಿ ಗೌರವ ಸಲ್ಲಿಸಿದರು.
ಖ್ಯಾತ ಚಿತ್ರನಟರಾದ ರಜನಿಕಾಂತ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ೫೦ ಗ್ರಾಂ ಚಿನ್ನವಿರುವ ಪದಕ, ಶಾಲು ಮತ್ತು ಸ್ಮರಣಿಕೆ ನೀಡುವ ಮೂಲಕ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಮಾರಂಭದ ಬಳಿಕ ಮನೆಗೆ ತೆರಳಿದ ಅಶ್ವಿನಿ ಮತ್ತು ಪುತ್ರಿ ವಂದಿತಾ ಅವರು ಪ್ರಶಸ್ತಿಯ ದ್ಯೋತಕವಾಗಿ ನೀಡಿದ ಚಿನ್ನದ ಪದಕವನ್ನು ಪುನೀತ್ ಭಾವಚಿತ್ರದ ಮುಂದೆ ಹಿಡಿದು ಖುಷಿಪಟ್ಟರು. ಮನೆಯಲ್ಲಿ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಬೃಹತ್ ಚಿತ್ರ ಚೌಕಟ್ಟಿನ ಕೆಳಗೆ ಪುನೀತ್ ಅವರ ಭಾವಚಿತ್ರವನ್ನು ಇಟ್ಟು ಪ್ರಶಸ್ತಿಯನ್ನು ಸಮರ್ಪಿಸಲಾಯಿತು. ಇಬ್ಬರೂ ತುಂಬ ಖುಷಿಯಿಂದ, ಪ್ರೀತಿಯಿಂದ ಅಪ್ಪುವಿನ ಮುಂದೆ ನಿಂತಿದ್ದು ಕಂಡುಬಂತು.
ಡಾ. ರಾಜ್ ಕುಮಾರ್ ಅವರಿಗೂ ಸಂದಿತ್ತು ಪ್ರಶಸ್ತಿ
ಇದು ರಾಜ್ ಕುಟುಂಬಕ್ಕೆ ಸಂದಿರುವ ಎರಡನೇ ಕರ್ನಾಟಕ ರತ್ನ ಪ್ರಶಸ್ತಿ. ೧೯೯೨ರಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಚಲನಚಿತ್ರ ರಂಗದ ಶ್ರೇಷ್ಠ ಸಾಧನೆಗಾಗಿ ಈ ವಿಶೇಷ ಪ್ರಶಸ್ತಿ ನೀಡಲಾಗಿತ್ತು. ೧೯೯೨ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗಿದ್ದು, ಕುವೆಂಪು ಮತ್ತು ಡಾ. ರಾಜ್ ಕುಮಾರ್ ಅವರಿಗೆ ಇದನ್ನು ನೀಡಲಾಗಿತ್ತು.
೧೯೯೯ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ೨೦೦೦ರಲ್ಲಿ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಪ್ರೊ. ಸಿ.ಎನ್. ಆರ್. ರಾವ್, ೨೦೦೪ರಲ್ಲಿ ಸಂಗೀತ ಸಾಧಕ ಪಂಡಿತ್ ಭೀಮಸೇನ ಜೋಶಿ, ೨೦೦೬ರಲ್ಲಿ ಸಮಾಜ ಸೇವಾ ವಿಭಾಗದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ೨೦೦೮ರಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ. ದೇ. ಜವರೇ ಗೌಡರು ಮತ್ತು ೨೦೦೯ರಲ್ಲಿ ಸಮಾಜಸೇವೆ, ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಕೊಡುಗೆಗಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅದಾಗಿ ೧೩ ವರ್ಷಗಳ ಬಳಿಕ ಕರ್ನಾಟಕ ರತ್ನ ಪ್ರಶಸ್ತಿ ಸಂದಿದೆ.
ಇದನ್ನೂ ಓದಿ Appu Namana | ʼಕಲಿಯುಗದ ಮಾರ್ಕಂಡೇಯ, ಪ್ರಹ್ಲಾದ, ನಚಿಕೇತʼ: ಅಪ್ಪು ಕುರಿತು ರಜನಿ ಭಾವುಕ ನುಡಿ