Site icon Vistara News

Appu Namana | 500 ಕಿ.ಮೀ. ದೂರದ ಮನಗುಂಡಿಯಿಂದ ಕಾಲ್ನಡಿಗೆಯಲ್ಲಿ ಬಂದು ತಲುಪಿದ ಅಥ್ಲೀಟ್‌ ದಾಕ್ಷಾಯಿಣಿ

puneet dakshayini

ಬೆಂಗಳೂರು: ಪುನೀತ್‌ ರಾಜ್‌ ಕುಮಾರ್‌ ಕೋಟ್ಯಂತರ ಮನಸುಗಳಲ್ಲಿ ಅದು ಹೇಗೆ ಪ್ರತಿಷ್ಠಾಪಿತರಾಗಿದ್ದಾರೆ ಎಂದರೆ ಅದೆಷ್ಟೋ ಜನರಿಗೆ ಅವರು ಮನಸಿಗೆ ತುಂಬ ಹತ್ತಿರ, ಕೆಲವೊಮ್ಮೆ ಮನೆಯವರಿಗಿಂತಲೂ ಹತ್ತಿರ. ಆವತ್ತು ಅಪ್ಪು ನಿಧನರಾದ ಸುದ್ದಿ ಕೇಳುತ್ತಲೇ ಕಣ್ಣೀರಾದವರು ಕೆಲವರಾದರೆ, ನೂರಾರು ಮೈಲು ದೂರದಲ್ಲಿದ್ದರೂ ಆ ಕ್ಷಣವೇ ನಿಂತ ನಿಲುವಿನಲ್ಲೇ ಹೊರಟುಬಂದವರು ಇನ್ನು ಕೆಲವರು. ಧಾರವಾಡದ ಮನಗುಂಡಿಯ ದಾಕ್ಷಾಯಿಣಿ ಅಂಥ ಅಪ್ಪಟ ಅಭಿಮಾನಿಗಳಲ್ಲಿ ಒಬ್ಬರು. ಅಂದು ಕಾಲ್ನಡಿಗೆಯಲ್ಲೇ ಬಂದು ಸಮಾಧಿಗೆ ನಮಿಸಿ ಹೋಗಿದ್ದ ದಾಕ್ಷಾಯಿಣಿ, ಅಪ್ಪು ಇಲ್ಲದ ಒಂದು ವರ್ಷದ ಬಳಿಕ ಮತ್ತೆ ನಡೆದುಕೊಂಡೇ ಬಂದು ತಲುಪಿದ್ದಾರೆ.

ಧಾರವಾಡ ಜಿಲ್ಲೆ ಮನಗುಂಡಿಯವರಾಗಿರುವ ದಾಕ್ಷಾಯಿಣಿ ಪಟೇಲ್‌ ಮೂಲತಃ ಅಥ್ಲೀಟ್‌. ಅದಕ್ಕಿಂತಲೂ ಹೆಚ್ಚಾಗಿ ಅಪ್ಪಟ ಅಪ್ಪು ಅಭಿಮಾನಿ. ಹೀಗಾಗಿಯೇ ಅವರಿಗೆ ೫೦೦ ಕಿ.ಮೀ. ದೂರದಿಂದ ಕಾಲ್ನಡಿಗೆಯಲ್ಲಿ ಬರುವುದು ಸಾಧ್ಯವಾಗಿದೆ. ʻʻಅಪ್ಪು ಅಂದ್ರೆ ನನಗೆ ತುಂಬಾ ಇಷ್ಟ. ಅಪ್ಪು ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತುʼʼ ಎಂದು ಹೇಳುತ್ತಲೇ ಕಣ್ಣೀರಾದರು ದಾಕ್ಷಾಯಿಣಿ. ಅವರು ಅಕ್ಟೋಬರ್‌ ೧೯ರಂದು ಕಾಲ್ನಡಿಗೆ ಆರಂಭ ಮಾಡಿದ್ದರು.

‘ಅಭಿ’ ಸಿನಿಮಾ ನೋಡಿದ ಬಳಿಕ ಅಪ್ಪು ಮೇಲೆ ಅಭಿಮಾನ ಬೆಳೆಸಿಕೊಂಡಿದ್ದ ದಾಕ್ಷಾಯಣಿ ಅಪ್ಪು ಅವರನ್ನು ಕಣ್ಣಾರೆ ನೋಡಬೇಕು ಎಂಬ ಆಸೆ ಹೊಂದಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಕಡೇ ಪಕ್ಷ ನಿಧನ ಹೊಂದಿದಾಗಲೂ ಆಗಿರಲಿಲ್ಲ. ಬಳಿಕ ಅವರು ಕಾಲ್ನಡಿಗೆಯಲ್ಲೇ ಬಂದು ಸಮಾಧಿಗೆ ನಮನ ಸಲ್ಲಿಸಿದ್ದರು. ಜತೆಗೆ ನೇತ್ರದಾನಕ್ಕೆ ಹೆಸರು ನೋಂದಾಯಿಸಿದ್ದರು.

30 ವರ್ಷ ವಯಸ್ಸಿನ ದಾಕ್ಷಾಯಣಿ ಪಾಟೀಲ್ ಉತ್ತಮ ಓಟಗಾರ್ತಿ. ಪತಿ ಉಮೇಶ್ ಅವರ ಸಹಕಾರ ಹಾಗೂ ಕುಟುಂಬಸ್ಥರ ಬೆಂಬಲ ಅವರಿಗಿದೆ. ಈ ಬಾರಿ ಅವರು ಕೇವಲ ೧೦ ದಿನದಲ್ಲಿ ೫೦೦ ಕಿ.ಮೀ. ಕ್ರಮಿಸಿ ಬೆಂಗಳೂರಿಗೆ ಬಂದಿದ್ದಾರೆ. ಅಂದರೆ ದಿನಕ್ಕೆ ಸರಾಸರಿ ೫೦ ಕಿ.ಮೀ. ನಡೆದಿದ್ದಾರೆ. ಆದರೆ, ಅವರ ಮುಖದಲ್ಲಿ ಯಾವ ಆಯಾಸವೂ ಇಲ್ಲ. ಅಪ್ಪುವನ್ನು ನೋಡಿದ ಧನ್ಯತೆ ಮಾತ್ರ ಇದೆ.

ಜೋಳದ ರೊಟ್ಟಿ ತಂದ ಅಭಿಮಾನಿ
ಈ ನಡುವೆ ಜಮಖಂಡಿಯಿಂದ ಬಂದಿರುವ ಅಭಿಯಾನಿಯೊಬ್ಬರು ಹೋಳಿಗೆ ಮತ್ತು ಜೋಳದ ರೊಟ್ಟಿ ತಂದಿದ್ದಾರೆ. ಅಪ್ಪುವಿಗೆ ಅದನ್ನು ಅರ್ಪಿಸಿದ್ದಾರೆ.

ಸವದತ್ತಿಯಿಂದ ಬಂದ ಅಪ್ಪು ಅಭಿಮಾನಿ
ಪುನೀತ್‌ ಅಭಿಮಾನಿಯೊಬ್ಬರು ಬೆಳಗಾವಿಯ ಸವದತ್ತಿಯಿಂದ ಬಂದಿದ್ದಾರೆ. ಅವರು ದೇವಿಯ ವಿಗ್ರಹವನ್ನು ತಲೆ ಮೇಲೆ ಹೊತ್ತುಕೊಂಡು ಬಂದಿರುವುದು ವಿಶೇಷ.

ರೂಪಶ್ರೀ ಅವರು ತಾವು ಬಿಡಿಸಿದ ಚಿತ್ರದೊಂದಿಗೆ..

ಅಪ್ಪುಗೆ ಪೇಂಟಿಂಗ್‌ ಗಿಫ್ಟ್‌
ರೂಪಶ್ರೀ ಎಂಬ ಅಪ್ಪು ಅಭಿಮಾನಿ ರಾಜಕುಮಾರ ಚಿತ್ರದ ಅಪ್ಪು ಪಾತ್ರಕ್ಕೆ ಸೂಟ್‌ ಆಗುವಂತೆ ಪೇಂಟಿಂಗ್‌ ಮಾಡಿ ಅವರು ಗಿಫ್ಟ್‌ ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್‌ಗೆ ಪೇಂಟಿಂಗ್‌ನ್ನು ಒಪ್ಪಿಸಿದ್ದಾರೆ ರೂಪಶ್ರೀ. ಅಪ್ಪು ಭುಜದ ಮೇಲೆ ಪಾರಿವಾಳ ಕುಳಿತಿರುವ ಈ ಚಿತ್ರವನ್ನು ಬಿಡಿಸಲು ರೂಪಶ್ರೀ ಅವರು ಸುಮಾರು ೧೫ ದಿನ ತೆಗೆದುಕೊಂಡಿದ್ದಾರಂತೆ.

ಇದನ್ನೂ ಓದಿ | Appu Namana | ಅಪ್ಪು ಇಲ್ಲದೆ 1 ವರ್ಷ: ಅಂದು ಮುತ್ತಿಟ್ಟು ಕಳುಹಿಸಿಕೊಟ್ಟಿದ್ದ ಸಿಎಂ ಬೊಮ್ಮಾಯಿ ವರ್ಷದ ಬಳಿಕ ಹೇಳಿದ್ದೇನು?

Exit mobile version