Site icon Vistara News

Appu Namana | ಮಳೆಹನಿಗಳ ಮಂಗಳವೃಷ್ಟಿಯೊಂದಿಗೆ ಪುನೀತ್‌ ಮುಡಿಗೇರಿತು ಕರ್ನಾಟಕ ರತ್ನ ಪ್ರಶಸ್ತಿ

ಬೆಂಗಳೂರು: ರಾಜ್ಯದ ಶಕ್ತಿ ಸೌಧದ ಮುಂದೆ ನೆರೆದ ಲಕ್ಷಾಂತರ ಅಭಿಮಾನಿಗಳು, ಮಳೆ ಹನಿಗಳ ಮಂಗಳವೃಷ್ಟಿ, ದೇಶ ಕಂಡ ಶ್ರೇಷ್ಠ ಸಾಧಕರ ಸಮ್ಮುಖದಲ್ಲಿ ಕನ್ನಡ ನಾಡಿನ ಕಣ್ಮಣಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ರಾಜ್ಯದ ಶ್ರೇಷ್ಠ ಗೌರವವಾಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸಮರ್ಪಿಸಲಾಯಿತು. ಮಳೆಯನ್ನೂ ಲೆಕ್ಕಿಸದೆ ಸೇರಿದ ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಪ್ರೀತಿಯಿಂದ ಕಣ್ಣು ತುಂಬಿಕೊಂಡರು. ಸ್ವತಃ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶ್ರೇಷ್ಠ ನಟರಾದ ರಜನಿಕಾಂತ್‌, ಜ್ಯೂನಿಯರ್‌ ಎನ್‌ಟಿಆರ್‌ ಅವರು ಕೂಡಾ ಮಳೆಯ ನಡುವೆಯೂ ಅಭಿಮಾನದ ಮಾತಿನ ಸೇಸೆ ಇಟ್ಟು ಪುನೀತ್‌ ಎಂಬ ದೇವರ ಮಗುವನ್ನು (Appu namana) ಪ್ರೀತಿಯಿಂದ ನೆನಪಿಸಿಕೊಂಡರು.

ವಿಧಾನಸೌಧದ ಎದುರು ಹಾಕಿರುವ ಬೃಹತ್‌ ವೇದಿಕೆಯಲ್ಲಿ ನಡೆದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ಪ್ರಾರಂಭವಾಗುತ್ತಿದ್ದಂತೆ ಭಾರಿ ಮಳೆಯೂ ಆರಂಭವಾಯಿತು. ಈ ವೇಳೆ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಮೈಕ್‌ ಎತ್ತಿಕೊಂಡು ತಾವೇ ಕಾರ್ಯಕ್ರಮದ ನಿರೂಪಣೆಯನ್ನು ಪ್ರಾರಂಭಿಸಿದರು.

“ಈ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮ ಪ್ರಾರಂಭವಾಗುವಾಗ ಮಳೆ ಬರುತ್ತಿದೆ. ವರುಣ ದೇವನೇ ಪುನೀತ್‌ ಅವರಿಗೆ ಆಶೀರ್ವಾದ ಮಾಡುತ್ತಿದ್ದಾನೆ. ಆದಷ್ಟು ಬೇಗ ಈ ಕಾರ್ಯಕ್ರಮವನ್ನು ಮುಗಿಸುತ್ತೇವೆ. ದಯಮಾಡಿ ಅಭಿಮಾನಿಗಳು ಸಹಕಾರ ನೀಡಬೇಕು” ಎಂದು ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮೈಕ್‌ ಹಿಡಿದು ಸ್ವತಃ ತಾವೇ ತೆಲುಗು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಬಳಿಗೆ ಹೋಗಿ ಕೊಟ್ಟಿದ್ದಾರೆ. ರಜನಿಕಾಂತ್‌ ಮಾತು ಮುಗಿದ ಬಳಿಕ ತೆಲುಗು ಖ್ಯಾತ ನಟ ಜ್ಯೂ. ಎನ್‌ಟಿಆರ್‌ ಅವರಿಗೆ ಮೈಕ್‌ ಕೊಟ್ಟ ಸಿಎಂ ಬೊಮ್ಮಾಯಿ, ಮಾತನಾಡಲು ಅನುವು ಮಾಡಿಕೊಟ್ಟರು. ಅಲ್ಲದೆ, ಜ್ಯೂನಿಯರ್‌ ಎನ್‌ಟಿಆರ್‌ ಕನ್ನಡದವರೇ ಎಂದೂ ಸಹ ಪರಿಚಯಿಸಿದರು.

ಮಳೆಯ ನಡುವೆಯೇ ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಜನಿಕಾಂತ್‌, ಜ್ಯೂ. ಎನ್‌ಟಿಆರ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರದಾನ ಮಾಡಲಾಯಿತು.

ವೇದಿಕೆ ಮೇಲೆ ಹಾಗೂ ವೇದಿಕೆ ಮುಂಭಾಗದಲ್ಲಿ ಜೋರು ಮಳೆ ಬರುತ್ತಿತ್ತು. ಮಳೆಯಲ್ಲಿ ಎಲ್ಲರೂ ನೆನೆಯುತ್ತಿದ್ದರೂ ಕೊಡೆ ಹಿಡಿದು ಕಾರ್ಯಕ್ರಮ ಮುಗಿಯುವವರೆಗೂ ಎಲ್ಲರೂ ನಿಂತಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಲ್ಲೊಂದಾಗಿತ್ತು. ಅಲ್ಲದೆ, ಮುಖ್ಯಮಂತ್ರಿ ಬೊಮ್ಮಾಯಿ, ರಜನಿಕಾಂತ್‌ ಹಾಗೂ ಜ್ಯೂ.ಎನ್‌ಟಿಆರ್‌ ಸಹ ಮಳೆಯಲ್ಲಿ ನೆನೆಯುತ್ತಲೇ ಅಪ್ಪುವನ್ನು ನೆನೆದಿದ್ದಾರೆ.

ಇದನ್ನೂ ಓದಿ | Appu Namana | ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ಜನಸಾಗರ, ಮೋಡಿ ಮಾಡಿದ ವಿಜಯಪ್ರಕಾಶ್‌ ಗಾಯನ

Exit mobile version