ಬೆಂಗಳೂರು: ಖ್ಯಾತ ನಟ, ಸರಳ ವ್ಯಕ್ತಿತ್ವದ ನಟ ಪುನೀತ್ ರಾಜಕುಮಾರ್ ಅವರಿಗೆ ಕೊಡಮಾಡುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಜನಸಾಗರ ಹರಿದುಬಂದಿದೆ. ಖ್ಯಾತ ಗಾಯಕ ವಿಜಯಪ್ರಕಾಶ್ ಅವರ ಗಾಯನವು ಜನಮೆಚ್ಚುಗೆ ಗಳಿಸಿದ್ದು, ವಿಧಾನಸೌಧದ ಮುಂಭಾಗ ಹಾಕಲಾದ ವೇದಿಕೆ ಎದುರು ಸೇರಿದ್ದ ಜನಸ್ತೋಮ ಹೆಜ್ಜೆ ಹಾಕುವ ಮೂಲಕ ಸಾಥ್ ನೀಡಿದೆ.
ಮಂಗಳವಾರ (ನವೆಂಬರ್ ೧) ಸಂಜೆ ೪ ಗಂಟೆಗೆ ಕಾರ್ಯಕ್ರಮವು ಆರಂಭವಾಗಿದ್ದು, ಅಶ್ವಿನಿ ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಡಾ. ರಾಜಕುಮಾರ್ ಕುಟುಂಬದವರು ಭಾಗಿಯಾಗಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗು ಚಿತ್ರರಂಗ ಮೇರು ನಟ ಜ್ಯೂ. ಎನ್‌ಟಿಆರ್ ಆಗಮಿಸಿದ್ದಾರೆ. ಇವರನ್ನು ಸಚಿವರಾದ ಡಾ. ಸುಧಾಕರ್ ಹಾಗೂ ಮುನಿರತ್ನ ಬರಮಾಡಿಕೊಂಡರು. ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಭಾಗವಹಿಸಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಸಮಾರಂಭದ ಮೇಲುಸ್ತುವಾರಿ ವಹಿಸಿದ್ದಾರೆ.
ರಾರಾಜಿಸುತ್ತಿರುವ ಅಪ್ಪು ಫೋಟೊ, ಕನ್ನಡ ಬಾವುಟ
ಸುಮಾರು ೫೦ ಸಾವಿರಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದು, ಎಲ್ಲ ಕಡೆ ಕನ್ನಡ ಬಾವುಟ ಹಾಗೂ ಪುನೀತ್ ಫೋಟೊ ರಾರಾಜಿಸುತ್ತಿದೆ. ಸುಮಾರು ಎಂಟು ಸಾವಿರ ಮಂದಿ ವಿಧಾನಸೌಧದ ಮೆಟ್ಟಿಗಳುಗಳ ಆಸುಪಾಸಿನಲ್ಲಿ ನಿಂತುಕೊಂಡು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ಅಲ್ಲದೆ, ವೇದಿಕೆ ಮುಂಭಾಗ ಆಸನಗಳನ್ನು ಹಾಕಲಾಗಿದ್ದು, ಕಾಯ್ದಿರಿಸಿದ ಕೆಲವು ಆಸನಗಳ ಹೊರತಾಗಿ ಆಸನಗಳು ಬಹುತೇಕ ಭರ್ತಿಯಾಗಿವೆ.
ಗಮನಸೆಳೆದ ವಿಜಯಪ್ರಕಾಶ್ ಹಾಡುಗಳು
“ನೀನೇ ರಾಜಕುಮಾರ”, “ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನೋ…” ಆದಿ ಕವಿ ಪಂಪ ವಿರಚಿತ “ಛಲದೋಳ್ ಧುರ್ಯೋದನಮ್..” ಸೇರಿದಂತೆ ಇನ್ನಿತರ ಹಾಡುಗಳನ್ನು ವಿಜಯಪ್ರಕಾಶ್ ನೇತೃತ್ವದ ತಂಡ ಹಾಡಿ ಗಮನ ಸೆಳೆದಿದೆ.
ಇದನ್ನೂ ಓದಿ | Appu Namana | ಆಹ್ವಾನವಿಲ್ಲ, ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಸಿದ್ದು; ರಾಜ್ಯಪಾಲರನ್ನೂ ಕರೆದಿಲ್ಲ!