Site icon Vistara News

Araga jnanendra : ಮಲ್ಲಿಕಾರ್ಜುನ ಖರ್ಗೆ ಅವಹೇಳನ; ಕಪ್ಪು ಎಂದಿದ್ದು ತಪ್ಪು ಎಂದು ವಿಷಾದಿಸಿದ ಆರಗ ಜ್ಞಾನೇಂದ್ರ

Mallikarjuna Kharge Araga Jnanendra

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಅವರ ಮೈಬಣ್ಣದ ಬಗ್ಗೆ ವಿವಾದಾತ್ಮಕ ಮಾತು ಆಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಇದೀಗ ಪ್ರತಿಭಟನೆಗಳು ಎದುರಾಗುತ್ತಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಮರಗಿಡಗಳ ನೆರಳನ್ನೇ ಕಾಣದ ಕಲಬುರಗಿ ಜನರು (Kalaburagi people) ಬಿಸಿಲಿನ ಝಳಕ್ಕೆ ಸುಟ್ಟು ಕರಕಲಾಗಿರುತ್ತಾರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೇ ಕಾಣುವುದಿಲ್ಲವೇ ಎಂದು ಕಾರ್ಯಕ್ರಮವೊಂದರಲ್ಲಿ ಆರಗ ಜ್ಞಾನೇಂದ್ರ ಹೇಳಿದ್ದರು. ಇದನ್ನು ಕಾಂಗ್ರೆಸ್‌ ಹಲವು ನಾಯಕರು ಖಂಡಿಸಿದ್ದರು, ಕಾರ್ಯಕರ್ತರು ಪ್ರತಿಭಟನೆಗೆ (Congress Protest) ಇಳಿದಿದ್ದರು. ಇದರ ನಡುವೆಯೇ ಆರಗ ಜ್ಞಾನೇಂದ್ರ ಅವರು ವಿವಾದವನ್ನು ತಿಳಿಗೊಳಿಸುವ ಪ್ರಯತ್ನವಾಗಿ ʻಕಪ್ಪುʼ ಎಂದಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ, ವಿಷಾದ ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ? ಆರಗ ಜ್ಞಾನೇಂದ್ರ ಹೇಳಿದ್ದೇನು?

ಕಸ್ತೂರಿ ರಂಗನ್ ವರದಿ (Kasturirangan Report) ಜಾರಿಯ ಕುರಿತಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಯನ್ನು ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಆರಗ ಜ್ಞಾನೇಂದ್ರ, ಆ ಭಾಗದವರು ಸುಟ್ಟು ಕರಕಲಾಗಿದ್ದಾರೆ. ಖರ್ಗೆ ಅವರನ್ನು ನೋಡಿದರೆ ಅಲ್ಲಿಯವರ ಪರಿಸ್ಥಿತಿ ಗೊತ್ತಾಗುತ್ತದೆ. ಪಾಪ ಅವರ ತಲೆ ಕೂದಲು ಮುಚ್ಚಿಕೊಂಡಿದ್ದರಿಂದ ಸ್ವಲ್ಪ ಉಳ್ಕೊಂಡಿದ್ದಾರೆ. ಅದೇ ಅವರ ನೆರಳು. ಅದನ್ನು ಸಿಎಂ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

ಆರಗ ಜ್ಞಾನೇಂದ್ರ ಅವರು ಬೀದರ್ ಮೂಲದ ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿರುವುದನ್ನು ಟೀಕಿಸುವ ಭರದಲ್ಲಿ ಖರ್ಗೆ ಅವರ ಮೈಬಣ್ಣವನ್ನು ಉಲ್ಲೇಖಿಸಿದ್ದಾರೆ. ಬೀದರ್‌ ಭಾಗದ ಜನರಿಗೆ ಮರ-ಗಿಡ ಅಥವಾ ನೆರಳಿನ ಬಗ್ಗೆ ತಿಳಿದಿರುವುದಿಲ್ಲ. ಅಲ್ಲಿನವರಿಗೆ ಮಲೆನಾಡಿನ ಜನರ ಜೀವನ ಹಾಗೂ ಪಶ್ಚಿಮ ಘಟ್ಟಗಳಿಗೆ ಸಮೀಪ ಇರುವ ನಾಗರಿಕರ ಸಮಸ್ಯೆಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಅಲ್ಲಿನ ಮಂದಿ ಬಿಸಿಲಿನ ಝಳಕ್ಕೆ ಸುಟ್ಟು ಕರಕಲಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಇದು ಗೊತ್ತಾಗುವುದಿಲ್ಲವೇ? ಅವರು ಕೂದಲನ್ನೇ ನೆರಳೆಂದು ಭಾವಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅದು ವಿವಾದಕ್ಕೆ ಕಾರಣವಾಯಿತು.

ಅತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಆರಗ ಜ್ಞಾನೇಂದ್ರ ಒಬ್ಬ ನಿಮ್ಹಾನ್ಸ್‌ ಗಿರಾಕಿ ಎಂದು ಹೇಳಿದರೆ ಕಾಂಗ್ರೆಸ್‌ ಕಾರ್ಯಕರ್ತರು ರೇಸ್ ಕೋರ್ಸ್ ಬಳಿ ಆರಗ ಜ್ಞಾನೇಂದ್ರ ವಿರುದ್ಧ ಪ್ರತಿಭಟನೆ ನಡೆಸಿದರು.

ಯುವ ಮುಖಂಡ ಮನೋಹರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಿಮ್ಹಾನ್ಸ್ ಗಿರಾಕಿ ಆರಗ ಜ್ಞಾನೇಂದ್ರ ಎಂದು ಘೋಷಣೆ ಕೂಗಲಾಯಿತು. ಕೀಳು ಮಟ್ಟದ ರಾಜಕಾರಣಿ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಇದನ್ನೂ ಓದಿ: Karnataka Politics : ಡಿಕೆಶಿ ದಶಾಸ್ತ್ರಕ್ಕೆ ಸಿದ್ದರಾಮಯ್ಯ ಟೀಮ್ ಸಚಿವರು ಗಲಿಬಿಲಿ‌!

ವಿಷಾದ ವ್ಯಕ್ತಪಡಿಸಿದ ಆರಗ ಜ್ಞಾನೇಂದ್ರ

ತಮ್ಮ ಮಾತು ವಿವಾದವಾಗುವುದನ್ನು ಅರಿತ ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ಟ್ವೀಟ್‌ ಮತ್ತು ಆರಗ ಜ್ಞಾನೇಂದ್ರ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.

ʻʻರಾಜ್ಯದ ಮಲೆನಾಡು ಪ್ರದೇಶದ ನಿವಾಸಿಗಳಿಗೆ ಮರಣ ಶಾಸನ ವಾಗಲಿರುವ ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತು, ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಯವರ ಹೇಳಿಕೆ ವಿರುದ್ಧ ನನ್ನ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ, ಪಕ್ಷದ ಕಾರ್ಯಕರ್ತರು, ನಿನ್ನೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡುತ್ತಾ, ಅರಣ್ಯ ಸಚಿವ ಶ್ರೀ ಪ್ರಕಾಶ್‌ ಖಂಡ್ರೆ ಯವರನ್ನು ಟೀಕಿಸುವ ಭರದಲ್ಲಿ, ಬೇರೆಯವರ ಹೆಸರು ತಪ್ಪಾಗಿ ಉಚ್ಚರಿಸಿದ್ದು, ಇದಕ್ಕಾಗಿ ವಿಷಾದಿಸುತ್ತೇನೆ. ರಾಷ್ಟ್ರ ರಾಜಕಾರಣದಲ್ಲಿ ಉಲ್ಲೇಖಾರ್ಹ ಸಾಧನೆ ಮಾಡಿರುವ, ಮಲ್ಲಿಕಾರ್ಜುನ್ ಖರ್ಗೆ ಯವರ ಬಗ್ಗೆ, ಅಪಾರ ಗೌರವ ಇಟ್ಟುಕೊಂಡಿದ್ದೇನೆ. ನನ್ನ ಬಗ್ಗೆ ಅನ್ಯಥಾ ಭಾವಿಸಬಾರದುʼʼ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

Exit mobile version