Site icon Vistara News

Araga Jnanendra | ನನ್ನ ಪೋಟೊ ಇಟ್ಕೊಂಡು ಕಥೆ ಕಟ್ಟಲು ಶುರು ಮಾಡಿದ್ರೆ ನಾನೇನ್ ಮಾಡ್ಲಿ: ಆರಗ ಜ್ಞಾನೇಂದ್ರ ಬೇಸರ

ಆರಗ ಜ್ಞಾನೇಂದ್ರ

ಬೆಂಗಳೂರು: ʻʻನಮ್ಮಂತಹ ಪ್ರಾಮಾಣಿಕರಿಗೆ ಮಸಿ ಎರಚುವ ಕೆಲಸ ಆಗುತ್ತಿದೆ. ನಾವು ಸುಲಭವಾಗಿ ಸಿಗ್ತೇವೆ. ನನ್ನದೊಂದು ಫೋಟೊ ಇಟ್ಕೊಂಡು ಕಥೆ ಕಟ್ಟಲು ಶುರು ಮಾಡಿದ್ರೆ ನಾನು ಏನ್ ಮಾಡ್ಲಿ? ಸಾರ್ವಜನಿಕ ಜೀವನದಲ್ಲಿ ಶುದ್ಧತೆ ಕಾಪಾಡಿಕೊಂಡು ಬಂದ ನಮ್ಮಂಥವರಿಗೆ ಈ ರೀತಿ ಆದರೆ ನೋವಾಗುತ್ತೆʼʼ- ಹೀಗೆ ನೋವು ಹಂಚಿಕೊಂಡರು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra).

ಮಲೆನಾಡಿನ ಮಿತ್ರರ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ ಅವರು, ರಾಜಕೀಯವನ್ನು ಉದ್ಯಮ ಮಾಡಿಕೊಂಡವರಿಗೆ ಇದೆಲ್ಲ ಏನೂ ಅನಿಸದೆ ಇರಬಹುದು. ಅವರಿಗೆ ಇದು ಹತ್ತರಲ್ಲಿ ಹನ್ನೊಂದು ಅಷ್ಟೆ. ಅವರಿಗೆ ಏನೂ ಅನಿಸಲ್ಲ. ನಮ್ಮಂಥವರಿಗೆ ನೋವಾಗುತ್ತದೆ. ನಾನು ಸಾರ್ವಜನಿಕ ಜೀವನದಲ್ಲಿ ನೈತಿಕತೆಯನ್ನು ಕಾಪಾಡಿಕೊಂಡು ಬಂದಿದ್ದೇನೆ ಎಂದು ಬೇಸರಿಸಿದರು.

ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಹಲವರು ಆರಗ ಜ್ಞಾನೇಂದ್ರ ಅವರ ನಡೆಯನ್ನು ಪ್ರಶ್ನೆ ಮಾಡಿದ್ದರು. ಆರಗ ಜ್ಞಾನೇಂದ್ರ ಅವರ ಪುತ್ರ ಮತ್ತು ಸ್ಯಾಂಟ್ರೋ ಜತೆಗಿರುವ ಚಿತ್ರ, ಕುಮಾರಕೃಪಾ ಗೆಸ್ಟ್‌ ಹೌಸ್‌ನಲ್ಲಿ ಸ್ಯಾಂಟ್ರೋ ರವಿ ದುಡ್ಡು ಎಣಿಸಿದ್ದು ಮತ್ತು ಗೃಹ ಸಚಿವರು ಗುಜರಾತ್‌ನಲ್ಲಿದ್ದಾಗ ಸ್ಯಾಂಟ್ರೋ ರವಿಯನ್ನು ಅಲ್ಲೇ ಬಂಧಿಸಿದ್ದನ್ನು ಮುಂದಿಟ್ಟುಕೊಂಡು ಹಲವು ಪ್ರಶ್ನೆಗಳನ್ನು ಎತ್ತಲಾಗಿತ್ತು. ಇದು ಆರಗ ಜ್ಞಾನೇಂದ್ರ ಅವರು ಬೇಸರಕ್ಕೆ ತಳ್ಳಿದೆ.

ಸಿಐಡಿಗೆ ವಹಿಸಿದ್ದು ಯಾಕೆ?
ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಯಾಂಟ್ರೋ ರವಿ ಪ್ರಕರಣದ ತನಿಖೆ ತನಿಖೆ ಪಾರದರ್ಶಕವಾಗಿ ನಡೆಯಬೇಕು, ಯಾವುದೇ ಒತ್ತಡ ಇರಬಾರದು ಎಂಬ ಕಾರಣಕ್ಕಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವ ನಿರ್ಣಯ ತೆಗೆದುಕೊಂಡಿದ್ದೇನೆ. ಸಿಐಡಿಯವರು ಪಿಎಸ್‌ಐ ಹಗರಣದ ಆಳ ಅಗಲಗಳನ್ನೆಲ್ಲ ಬಗೆದರು. ಆ ಕಾರಣಕ್ಕಾಗಿಯೂ ಇದನ್ನು ಅವರಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು. ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆ, ಹಲ್ಲೆ, ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆ ಆಗಲಿದೆ ಎಂದರು.

ಸ್ಯಾಂಟ್ರೋ ರವಿ ಕೇಸು ಸಿಐಡಿಗೆ ಒಪ್ಪಿಸುವಷ್ಟು ಗಂಭೀರವಾಗಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻಯಾವುದು ಗಂಭೀರವಾದ ಕೇಸ್? ಯಾವುದು ಗಂಭೀರ ಕೇಸ್ ಇಲ್ಲ ಅಂತ ಅಲ್ಲ. ಸಾರ್ವಜನಿಕವಾಗಿ ಚರ್ಚೆ ಆಗಿರುವ ಪ್ರಕರಣ ಇದು. ಇದೊಂದು ಪಾರದರ್ಶಕವಾಗಿ ತನಿಖೆ ಮಾಡಿ ಮುಖವಾಡ ಕಳಚಿ ಹೊರಗೆ ತರಬೇಕು. ಕಳೆದ 20 ವರ್ಷಗಳಲ್ಲಿ ರವಿ ಯಾರೆಲ್ಲ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ? ಏನಾಗಿದೆ ಎಂಬುದು ಇದರ ಜೊತೆಗೆ ತನಿಖೆಯಿಂದ ಹೊರಬರಬೇಕು. ಹೀಗಾಗಿ ಸಿಐಡಿಗೆ ತನಿಖೆಗೆ ಒಪ್ಪಿಸಿದ್ದೇನೆʼʼ ಎಂದು ಹೇಳಿದರು. ʻʻತನಿಖೆ ಮಾಡಿಸಿದ್ರು‌ ಕಷ್ಟ, ತನಿಖೆ ಮಾಡಿಸದಿದ್ದರೂ ಕಷ್ಟ. ಹೀಗೆ ಹೇಳಿದ್ರೆ ಏನೂ ಮಾಡೋಕೆ ಆಗಲ್ಲʼʼ ಎಂದು ಬೇಸರದಿಂದ ಹೇಳಿದರು ಆರಗ ಜ್ಞಾನೇಂದ್ರ.

ಕಂಟ್ರಾಕ್ಟರ್‌ಗೆ ಎಚ್ಚರಿಕೆ ಕೊಟ್ಟ ಗೃಹ ಸಚಿವರು
ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿಗೆ ದುಡ್ಡು ಕೊಟ್ಟಿದ್ದೇನೆ ಎಂಬ ಕಂಟ್ರಾಕ್ಟರ್ ಮಂಜುನಾಥ್ ಅವರ ಹೇಳಿಕೆ ವಿಚಾರದ ಬಗ್ಗೆ ಗಮನ ಸೆಳೆದಾಗ, ʻಈಗಾಗಲೇ ಸುಳ್ಳು ಆರೋಪ ಮಾಡಿದ ಕೆಂಪಣ್ಣ ಮೇಲೆ ಕೇಸ್ ಆಗಿದೆ. ತಿಪ್ಪಾರೆಡ್ಡಿ ಅವರು ಗುತ್ತಿಗೆದಾರ ಮೇಲೆ ದೂರು ಕೊಡ್ತೀನಿ ಅಂತ ಹೇಳಿದ್ದಾರೆ. ಚುನಾವಣೆ ಬಂತು ಅಂತ ಸುಮ್ಮನೆ ಆರೋಪ ಮಾಡಬಹುದು. ಯಾರೇ ಬ್ಲ್ಯಾಕ್‌ಮೇಲ್ ಮಾಡಿದ್ರೂ ಅವರು ಮುಂದೆ ಅನುಭವಿಸಬೇಕಾಗುತ್ತದೆʼʼ ಎಂದು ಸುಳ್ಳು ಆರೋಪ ಮಾಡುವವರಿಗೆ ಎಚ್ಚರಿಕೆ ‌ಕೊಟ್ಟರು ಆರಗ ಜ್ಞಾನೇಂದ್ರ.

ಇದನ್ನೂ ಓದಿ | Santro Ravi case | ಅವಳು 2ನೇ ಪತ್ನಿಯಲ್ಲ, 10 ಲಕ್ಷ ರೂ. ಸಾಲ ಪಡೆದು ಮರಳಿಸದೆ ಸುಳ್ಳು ಆರೋಪ ಎಂದ ರವಿ ವಕೀಲರು

Exit mobile version