ಬೆಂಗಳೂರು: ಉಡುಪಿ ಕಾಲೇಜೊಂದರಲ್ಲಿ ಹೆಣ್ಣು ಮಕ್ಕಳ ಟಾಯ್ಲೆಟ್ (Udupi Toilet case) ದೃಶ್ಯವನ್ನು ಚಿತ್ರೀಕರಣ ಮಾಡಿದ ಸಣ್ಣ ಪ್ರಕರಣವನ್ನು ಬಿಜೆಪಿ ದೊಡ್ಡದು ಮಾಡುತ್ತಿದೆ ಎಂದು ಹೇಳಿರುವುದು ಇಡೀ ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಹಾಗಾದರೆ ಇವರ ಮನೆಯ ಮಕ್ಕಳು, ಮೊಮ್ಮಕ್ಕಳ ಟಾಯ್ಲೆಟ್ ದೃಶ್ಯವನ್ನು ಸೆರೆ ಹಿಡಿದರೆ ಅದು ಸಣ್ಣ ವಿಷಯ ಆಗುತ್ತದೆಯೇ? ಆಗ ಇವರು ಏನು ಮಾಡುತ್ತಾರೆ? ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Former Home Minister Araga Jnanendra) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕಾಂಗ್ರೆಸ್‌ನವರಿಗೆ ಎಲ್ಲವೂ ನಗಣ್ಯ ಎಂದು ಅನ್ನಿಸಲು ಕಾರಣವೇನೆಂದರೆ ಆ ಮೂರೂ ಹೆಣ್ಣು ಮಕ್ಕಳು ಮುಸ್ಲಿಮರು ಎಂಬುದೇ ಕಾರಣವಾಗಿದೆ. ಆದರೆ, ಇಂತಹ ಕೃತ್ಯ ತಪ್ಪು ಎಂದು ಹೇಳಿದರು.
ಇದನ್ನೂ ಓದಿ: CT Ravi : ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ, ಕೇಳಿ ಪಡೆಯಲ್ಲ ಎಂದ ಸಿ.ಟಿ. ರವಿ; ದೆಹಲಿಗೆ ಬುಲಾವ್?
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಮಾತು ಕೇಳಿ ನನಗೆ ಆಶ್ಚರ್ಯ ಆಯಿತು. ಇದು ಇಡೀ ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಈ ಘಟನೆ ಹೇಗೆ ಸಣ್ಣದಾಗುತ್ತದೆ? ಸುಮ್ಮನೆ ಕಿಚಾಯಿಸಿದರೆ ಹಾಗೆ ಹೇಳಬಹುದು. ಆ ಹೆಣ್ಣು ಮಕ್ಕಳು ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ವಿಡಿಯೊ ಮಾಡಿದ್ದಾರೆ. ಈ ಪ್ರಕರಣ ಸಣ್ಣದು ಹೇಗಾಗುತ್ತದೆ? ಈ ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು. ಆ ಮೊಬೈಲ್ ಅನ್ನು ಸಮರ್ಪಕವಾಗಿ ತಪಾಸಣೆ ಮಾಡಬೇಕಿದೆ. ಎಫ್‌ಎಸ್‌ಎಲ್‌ಗೆ ಕಳುಹಿಸಿ ತನಿಖೆ ನಡೆಸಬೇಕು. ಆ ವಿಡಿಯೊವನ್ನು ಎಷ್ಟು ಜನರಿಗೆ ಶೇರ್ ಮಾಡಲಾಗಿದೆ? ಏನು ಮಾಡಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಬೇಕು ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಬಚಾವ್ ಮಾಡಲು ಮುಂದಾಗಿರುವ ಸರ್ಕಾರಿ ವಿಷನರಿಗಳು
ಈ ಪ್ರಕರಣದ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿರುವುದೇ ವಿಚಿತ್ರ, ನಮಗೆ ಯಾರೂ ದೂರನ್ನೇ ಕೊಟ್ಟಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳುತ್ತಾರೆ. ಸುಮೋಟೋ ದಾಖಲಿಸಲು ಇವರಿಗೆ ಬರುತ್ತಿರಲಿಲ್ಲವೇ? ಇಂತಹ ಘಟನೆಗಳು ಆದಾಗ ಎಚ್ಚೆತ್ತುಕೊಳ್ಳಬೇಕು. ದೊಡ್ಡ ಮಟ್ಟದಲ್ಲಿ ಗಲಭೆಯಾಗುವ ಸಾಧ್ಯತೆ ಇರುತ್ತದೆ. ಅದೇ ಈ ಪ್ರಕರಣದಲ್ಲಿ ಹಿಂದು ಯುವತಿಯರು ವಿಡಿಯೊ ಮಾಡಿದ್ದರೆ ಏನಾಗಿರುತ್ತಿತ್ತು? ಅಂತಾರಾಷ್ಟೀಯ ಮಟ್ಟದಲ್ಲಿ ಗಲಭೆ ಆಗುತ್ತಿತ್ತು. ಎಲ್ಲ ಕಡೆಯಿಂದಲೂ ಹೇಳಿಕೆಗಳು ಬರುತ್ತಿದ್ದವು. ಇಲ್ಲಿ ಅಲ್ಪಸಂಖ್ಯಾತ ಹೆಣ್ಣು ಮಕ್ಕಳು ಭಾಗವಹಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಬಚಾವ್ ಮಾಡಲು ಸರ್ಕಾರಿ ವಿಷನರಿಗಳು ಕೆಲಸ ಮಾಡುತ್ತಿವೆ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.
ಹರಿಪ್ರಕಾಶ್ ಕೋಣೆಮನೆ ಅವರೊಂದಿಗೆ ಆರಗ ಜ್ಞಾನೇಂದ್ರ ಅವರ ನೇರ ಮಾತು; ವಿಡಿಯೊ ಇಲ್ಲಿದೆ
ಹಿಜಾಬ್ ಪ್ರಕರಣ ನಡೆದಿರುವುದೂ ಇದೇ ಉಡುಪಿಯಲ್ಲಿ ಎಂಬುದು ಆತಂಕವನ್ನು ತಂದೊಡ್ಡುತ್ತದೆ. ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ಸಂಪೂರ್ಣ ತನಿಖೆ ಆಗಬೇಕಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
135 ಸ್ಥಾನವನ್ನು ನಾವು ಗೆದ್ದಿದ್ದೇ ಮುಸ್ಲಿಂ ಸಮುದಾಯದವರಿಂದ ಎಂಬ ಭಾವನೆ ಕಾಂಗ್ರೆಸ್ಸಿಗರಲ್ಲಿ ಇದೆ. ಹೀಗಾಗಿ ಅವರನ್ನು ಬಚಾವ್ ಮಾಡುವುದು ನಮ್ಮ ಕರ್ತವ್ಯ ಎಂದು ಈ ಸರ್ಕಾರದ ಮಂತ್ರಿಗಳಾದಿಯಾಗಿ ಎಲ್ಲರೂ ಭಾವಿಸಿದ್ದಾರೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Politics : ಸಚಿವರ ವಿರುದ್ಧದ ಪತ್ರಕ್ಕೆ ಕ್ಷಮೆ ಕೇಳಿಲ್ಲ, ಕೇಳೋದೂ ಇಲ್ಲ: ಬಿ.ಆರ್. ಪಾಟೀಲ್
ಇದು ಲವ್ ಜಿಹಾದ್ ಭಾಗ!
ಈ ಪ್ರಕರಣವು ಲವ್ ಜಿಹಾದ್‌ನ ಭಾಗವಾಗಿದೆ. ಕಾರಣ, ಇದರ ಹಿಂದೆ ಇರುವುದು ಮುಸ್ಲಿಂ ಹೆಣ್ಣು ಮಕ್ಕಳಾಗಿದ್ದಾರೆ. ಯಾರೋ ಹೇಳದೇ ಅವರು ಈ ಕೃತ್ಯಕ್ಕೆ ಇಳಿಯುವವರಲ್ಲ. ಏಕೆಂದರೆ ಪ್ರಪಂಚಕ್ಕೆ ಗೊತ್ತಾಗಬಾರದು ಎಂದು ಬುರ್ಖಾ ಧರಿಸುವ ಅಂಥವರು ಈ ಕೃತ್ಯ ನಡೆಸುತ್ತಾರೆ ಎಂದರೆ ಇವರ ಹಿಂದೆ ಯಾವುದೋ ಒಂದು ಶಕ್ತಿ ಇದೆ. ಇದು ಕಾಲೇಜಿನಲ್ಲಿ ನಡೆದ ಸಣ್ಣ ಕೃತ್ಯ ಅಲ್ಲ. ಇದನ್ನು ವ್ಯವಸ್ಥಿತವಾಗಿ ತನಿಖೆ ನಡೆಯಬೇಕಿದೆ. ಆದರೆ, ಈ ಪೊಲೀಸರಿಂದ ಈ ಕೆಲಸ ಆಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಹಾಗಂತ ಈ ಪೊಲೀಸರು ಅಸಮರ್ಥರು ಎಂದು ನಾನು ಹೇಳಲಾರೆ. ಇವರು ದೇಶದಲ್ಲೇ ನಂಬರ್ 1 ಇದ್ದಾರೆ. ಆದರೆ, ಇವರ ಹಿಂದೆ ಆಳುವ ಜನರು ಸೂಕ್ತವಾಗಿ ತನಿಖೆ ಮಾಡಲು ಬಿಡುವುದಿಲ್ಲ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.