Site icon Vistara News

Araga Jnanendra : ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿಯೇ ಹೊರತು, ಜನರಲ್ಲ ; ಆರಗಗೆ ಪ್ರಿಯಾಂಕ್‌ ಖರ್ಗೆ ತರಾಟೆ

priyank Kharge, Araga jnanendra

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಅವರ ಮೈ ಬಣ್ಣದ ಕುರಿತು ವಿವಾದಾತ್ಮಕ ಮಾತು ಆಡಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರನ್ನು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮರಗಿಡಗಳ ನೆರಳನ್ನೇ ಕಾಣದ ಕಲಬುರಗಿ ಜನರು (Kalaburagi people) ಬಿಸಿಲಿನ ಝಳಕ್ಕೆ ಸುಟ್ಟು ಕರಕಲಾಗಿರುತ್ತಾರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೇ ಕಾಣುವುದಿಲ್ಲವೇ ಎಂದು ಕಾರ್ಯಕ್ರಮವೊಂದರಲ್ಲಿ ಆರಗ ಜ್ಞಾನೇಂದ್ರ ಹೇಳಿದ್ದರು. ಕಸ್ತೂರಿ ರಂಗನ್ ವರದಿ (Kasturirangan Report) ಜಾರಿಯ ಕುರಿತಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಯನ್ನು ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಆರಗ ಜ್ಞಾನೇಂದ್ರ, ಆ ಭಾಗದವರು ಸುಟ್ಟು ಕರಕಲಾಗಿದ್ದಾರೆ. ಖರ್ಗೆ ಅವರನ್ನು ನೋಡಿದರೆ ಅಲ್ಲಿಯವರ ಪರಿಸ್ಥಿತಿ ಗೊತ್ತಾಗುತ್ತದೆ. ಪಾಪ ಅವರ ತಲೆ ಕೂದಲು ಮುಚ್ಚಿಕೊಂಡಿದ್ದರಿಂದ ಸ್ವಲ್ಪ ಉಳ್ಕೊಂಡಿದ್ದಾರೆ. ಅದೇ ಅವರ ನೆರಳು. ಅದನ್ನು ಸಿಎಂ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

ಇದು ಕಾಂಗ್ರೆಸ್‌ ನಾಯಕರನ್ನು ತೀವ್ರವಾಗಿ ಕೆರಳಿಸಿತ್ತು. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಕೂಡಾ ನಡೆದವು. ಬೆಂಗಳೂರಿನಲ್ಲಿ ಆರಗ ಜ್ಞಾನೇಂದ್ರ ವಿರುದ್ಧ ದೂರು ಕೂಡಾ ದಾಖಲಾಗಿದೆ. ಇದರ ನಡುವೆ ಅರಗ ಜ್ಞಾನೇಂದ್ರ ಅವರು ವಿಷಾದ ವ್ಯಕ್ತಪಡಿಸಿದರೂ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಕಾಂಗ್ರೆಸ್‌ ನಾಯಕರು ಇದನ್ನು ಖಂಡಿಸುವುದಲ್ಲದೆ, ಆರಗ ಜ್ಞಾನೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಇದೀಗ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರು ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಕೇಶವ ಕೃಪಾ, ದಲಿತರ ಶೋಷಣೆ, ಮೇಲ್ವರ್ಗದ ದೌಲತ್ತುಗಳನ್ನು ಕನೆಕ್ಟ್‌ ಮಾಡಿ ಟ್ವೀಟ್‌ ಮಾಡಿದ್ದಾರೆ.

ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?

  1. ಆರಗ ಜ್ಞಾನೇಂದ್ರ ಅವರೇ, ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆಯ ಮಾತು.
  2. ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ.
  3. ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಿನಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು, ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈ ಬಿಸಿಲಲ್ಲಿ ಸುಟ್ಟಿರುತ್ತದೆ.
  4. ಆರಗ ಜ್ಞಾನೇಂದ್ರ ಅವರು ಒಂದೇ ಒಂದು ದಿನ ಮಣ್ಣು ಹೊತ್ತರೆ ಅವರ ಮೈಬಣ್ಣವೂ ಕಪ್ಪಗಾಗುತ್ತದೆ.
  5. ಮನುಸ್ಮೃತಿಯ ವರ್ಣಾಶ್ರಮವನ್ನು ಅಪ್ಪಿ ಒಪ್ಪಿ ಮುದ್ದಾಡುವ ಬಿಜೆಪಿಗೆ ದಲಿತರ ರಾಜಕೀಯ ಏಳಿಗೆಯ ಬಗ್ಗೆ ತೀವ್ರ ಅಸಹನೆ ಇರುವುದು ಇಂತಹ ಮಾತುಗಳಿಂದ ಹೊರಬರುತ್ತವೆ.
  6. ಕರ್ನಾಟಕ ಬಿಜೆಪಿಯ ಈ ಅಸಹನೆ ಬಿಜೆಪಿಯನ್ನೇ ಸುಟ್ಟು ಕರಕಲು ಮಾಡುತ್ತದೆ, ಏಕೆಂದರೆ ಇದು ಮನುಸ್ಮೃತಿಯ ಕಾಲವಲ್ಲ, ಬಾಬಾ ಸಾಹೇಬರ ಸಂವಿಧಾನದ ಕಾಲ.

ಇದನ್ನೂ ಓದಿ : Araga jnanendra : ಮಲ್ಲಿಕಾರ್ಜುನ ಖರ್ಗೆ ಅವಹೇಳನ; ಕಪ್ಪು ಎಂದಿದ್ದು ತಪ್ಪು ಎಂದು ವಿಷಾದಿಸಿದ ಆರಗ ಜ್ಞಾನೇಂದ್ರ

Exit mobile version