ಹಾಸನ: ಕಳೆದ ಕೆಲವು ತಿಂಗಳುಗಳಿಂದ ಜೆಡಿಎಸ್ ನಾಯಕರ ಜತೆ ಅಂತರ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಪಕ್ಷದ ವರಿಷ್ಠರ ನಡುವೆ ಭಿನ್ನಾಭಿಪ್ರಾಯ ಬಗೆಹರಿದ ಹಾಗೆ ಕಾಣುತ್ತಿಲ್ಲ. ಈ ಹಿಂದೆ ಹಾಸನದಲ್ಲಿ ನಡೆದಿದ್ದ ಜೆಡಿಎಸ್ ಜಲಧಾರೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಶಾಸಕ, ಈಗ ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾಲೋಚನಾ ಸಭೆಯಲ್ಲೂ ಭಾಗವಹಿಸದಿರುವುದು ಕಂಡುಬಂದಿದೆ.
ಈ ಬಗ್ಗೆ ನಗರದಲ್ಲಿ ಬುಧವಾರ ಸ್ಪಷ್ಟನೆ ನೀಡಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, ಬೆಂಗಳೂರಿನಲ್ಲಿ ಗುರುವಾರ ಎಸ್ಟಿಮೇಟ್ ಕಮಿಟಿ ಮೀಟಿಂಗ್ ಇದೆ, ಅದು ಮುಗಿದ ಮೇಲೆ ಮೈಸೂರಿಗೆ ಹೋಗುತ್ತೇನೆ. ಕುಮಾರಣ್ಣ ನನಗೆ ಫೋನ್ ಮಾಡಿ ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾಲೋಚನಾ ಸಭೆಗೆ ಆಹ್ವಾನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಮಲ್ಲಿಕಾರ್ಜುನ ಖರ್ಗೆ ರಬ್ಬರ್ ಸ್ಟಾಂಪ್ ಆದರೆ ಜೆ.ಪಿ. ನಡ್ಡಾ ಏನು?: ಡಿ.ಕೆ. ಶಿವಕುಮಾರ್ ಪ್ರಶ್ನೆ
ಕ್ಷೇತ್ರದ ಜನ ಕರೆದು ಸಭೆ ನಡೆಸುವೆ
ಭಿನ್ನಾಭಿಪ್ರಾಯ ಬಗೆಹರಿಸಲು ಕ್ಷೇತ್ರದ ಜನರ ಜತೆ ಒಂದು ದೊಡ್ಡ ಸಭೆ ನಡೆಸುತ್ತೇನೆ. ಆ ಸಭೆಯಲ್ಲಿ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ. ನಮ್ಮ ಜನ ಏನು ಹೇಳುತ್ತಾರೆ, ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಅರಸೀಕೆರೆಗೆ ಜೆಡಿಎಸ್‌ನ ದೊಡ್ಡ ನಾಯಕರು ಬಂದಿಲ್ಲ, ಪ್ರಜ್ವಲ್ ರೇವಣ್ಣ ನಡೆಸಿದ ಸಭೆಗೆ ನನ್ನನ್ನು ಕರೆದಿರಲಿಲ್ಲ. ನನಗೆ ಮಾಹಿತಿ ಕೊಡದೆ ಒಂದೆರಡು ಬಾರಿ ಬಂದಿದ್ದು ನಿಜ. ಅರಸೀಕೆರೆ ಕ್ಷೇತ್ರದ ಜನ ಏನು ಹೇಳುತ್ತಾರೋ ಅದಕ್ಕೆ ಕಟಿಬದ್ಧವಾಗಿರುತ್ತೇನೆ. ಅವರು ಜೆಡಿಎಸ್‌ನಲ್ಲಿ ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ ಎಂದರು.
ಅರಸೀಕೆರೆ ನಗರಸಭೆ ಏಳು ವಾರ್ಡ್‌ಗಳಿಗೆ ಚುನಾವಣೆ ವಿಚಾರ ಪ್ರತಿಕ್ರಿಯಿಸಿ, ಚುನಾವಣೆಗೆ ನಾವು ಸಿದ್ಧರಿದ್ದೇವೆ. ಪಕ್ಷದಿಂದ ಅಭ್ಯರ್ಥಿ ಹಾಕಬೇಕೋ, ಏನು ಮಾಡಬೇಕು ಎಂದು ಸಭೆ ಕರೆಯುತ್ತೇನೆ. ಚುನಾವಣೆ ನಡೆಸುವ ವಿಚಾರ ಕೋರ್ಟ್‌ನಲ್ಲಿದೆ, ಏನಾಗುವುದೋ ಗೊತ್ತಿಲ್ಲ ಎಂದರು.
ಈಗ ಪಕ್ಷದ ಸಮಾಲೋಚನಾ ಸಭೆಗೂ ಗೈರಾಗುವ ಮೂಲಕ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಇದು ಮುಂದಿನ ರಾಜಕೀಯ ಬದಲಾವಣೆಯ ಮುನ್ಸೂಚನೆಯೇ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ | Election 2023 | ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶೇ.30 ಯುವಕರಿಗೆ ಜೆಡಿಎಸ್ ಟಿಕೆಟ್ ಬೇಕೆಂದಿದ್ದೇನೆ: ನಿಖಿಲ್ ಕುಮಾರಸ್ವಾಮಿ