Site icon Vistara News

HDK ಬಿಫಾರಂ ಋಣ 2023 ವರೆಗೆ ಇದೆ: ನಂತರ ಜನರ ನಿರ್ಧಾರ ಎಂದ ಶಾಸಕ ಶಿವಲಿಂಗೇಗೌಡ

arasikere MLA Shivalinge gowda

ಹಾಸನ: ಜೆಡಿಎಸ್‌ ಪಕ್ಷದಿಂದ ನೀಡಿರುವ ಬಿ ಫಾರಂ ಋಣ 2023ರ ಚುನಾವಣೆವರೆಗೆ ಇದೆ. ಆನಂತರ ಜನರ ನಿರ್ಧಾರದ ಆಧಾರದಲ್ಲಿ ನಡೆಯುತ್ತೇನೆ ಎಂದು ಹಾಸನ ಜಿಲ್ಲೆಯ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಂಗಳವಾರ ತಿಳಿಸಿದ್ದಾರೆ.

ಜೆಡಿಎಸ್‌ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎನ್ನುವುದು ಸೇರಿ ವಿರೋಧಿಗಳಿಂದ ವಿವಿಧ ಆರೋಪಗಳ ಕುರಿತು ಅರಸೀಕೆರೆ ತಾಲೂಕಿನ ಬಾಗೇಶಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದ್ದಾರೆ.

ರಾಜ್ಯಸಭೆ ಚುನಾವಣೆ ವೇಳೆ ದುಡ್ಡು ತೆಗೆದುಕೊಂಡು ಶಿವಲಿಂಗೇಗೌಡ ಬೇರೆ ಪಕ್ಷಕ್ಕೆ ಓಟು ಹಾಕುತ್ತಾನೆ ಎಂದು ಬಹಳ‌ ಜನ ಕಾದು ಕುಳಿತಿದ್ದರು. ದುಡ್ಡಿಗೋಸ್ಕರ ಶಿವಲಿಂಗೇಗೌಡ ಮಾರಾಟ ಆಗುತ್ತಾನೆ ಎಂದುಕೊಂಡಿದ್ದರು. ಅವನ ವಿರುಧ್ದ ಹೇಳಿಕೆ ಕೊಡೋಣ ಎಂದು ಕಾಯುತ್ತಿದ್ದರು. ನಿಮ್ಮೆಲ್ಲರ ಆಶೀರ್ವಾದದಿಂದ ಮೂರು ಭಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಅಂತಹ ದುಷ್ಕೃತ್ಯಕ್ಕೆ, ಹೇಯ ಕೃತ್ಯಕ್ಕೆ ಕೈ ಹಾಕುವುದಿಲ್ಲ ಎಂದರು.

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಜತೆಗೆ ಭಿನ್ನಾಭಿಪ್ರಾಯ ಇರುವುದು ನಿಜ ಎಂದು ಮತ್ತೆ ಹೇಳಿದ ಶಿವಲಿಂಗೇಗೌಡ, ಅವರು ಕೊಟ್ಟಿರುವ ಬಿ ಫಾರಂ ಋಣ 2023 ವರೆಗೆ ಇದೆ. ಅಲ್ಲಿಯವರೆಗೂ ಕಾಯುತ್ತೇನೆ, ಆನಂತರ ಮೂರು ಬಾರಿ ಶಾಸಕನನ್ನಾಗಿ ಮಾಡಿರುವ ಈ ನನ್ನ ಕ್ಷೇತ್ರದ ಜನರ ಬಳಿ ಬರುತ್ತೇನೆ. ಜನ ಏನು ಹೇಳುತ್ತಾರೆಯೋ ಆ ನಿರ್ಧಾರಕ್ಕೆ ಬದ್ದನಾಗಿರುತ್ತೇನೆಯೇ ಹೊರತು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿ ನನ್ನ ಜನತೆಗೆ ದ್ರೋಹ ಮಾಡುವ ಕೆಲಸ‌ ಮಾಡುವುದಿಲ್ಲ. ನಾನು ಪ್ರಾಮಾಣಿಕವಾದ ಹೋರಾಟ ಮಾಡುತ್ತೇನೆ ಎಂದರು.

ಇದನ್ನೂ ಓದಿ | JDS ಶಾಸಕ ಶಿವಲಿಂಗೇಗೌಡ Left: ಪಕ್ಷ ಬಿಡುವ ಮುನ್ನ ವಾಟ್ಸ್‌ಆ್ಯಪ್‌ನಿಂದ ಎಕ್ಸಿಟ್‌?

ತಾವು ಧರ್ಮಕ್ಕೆ ವಿರುದ್ಧ ನಡೆಯುತ್ತಿದ್ದಾರೆ ಎಂಬ ವದಂತಿಗಳ ಕುರಿತು ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಕೆಲವರು ಸೋಗಲಾಡಿತನದಲ್ಲಿ‌ ಬರುತ್ತಾರೆ. ನಾನು ಶಾಸಕನಾದ ಮೇಲೆ 530 ಹಳ್ಳಿಗಳಲ್ಲಿ ಸುಮಾರು 700 ರಿಂದ 800 ದೇವಾಲಯಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಹೊಂದಿದ್ದೇನೆ. ನನ್ನ ಸಹಕಾರದಿಂದ ನಿರ್ಮಾಣವಾಗಿರುವ ದೇವಾಲಯಗಳ ದೊಡ್ಡ ಬುಕ್‌ ಮುದ್ರಿಸಿ ಜನರ ಮುಂದೆ ಇಡುತ್ತೇನೆ. ಇನ್ಯಾರೋ ಏನೇನೋ‌ ಹೇಳಿಕೊಂಡು ಬರುತ್ತಾರೆ, ಅವರಿಗೆಲ್ಲ ಮರುಳಾಗಬೇಡಿ. ನಾವು ದೈವ ಭಕ್ತರು, ದೈವ ಸಂಸ್ಕೃತರು, ಭಾರತದ ಇತಿಹಾಸವನ್ನು ಹೊಂದಿರುವವರು. ನಾನೆಂದು ಆ ದೈವ ಭಕ್ತಿಗೆ, ಧರ್ಮ ಭಕ್ತಿಗೆ, ಧಾರ್ಮಿಕತೆಗೆ ದ್ರೋಹ ಮಾಡುವಂತಹ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಈ ಆರೋಪ ಮಾಡುವವರು ಅಂತಹ ಕೆಲಸ ಮಾಡಿಕೊಂಡು ಬೆಂಗಳೂರಿನಿಂದ ಇಲ್ಲಿಗೆ ಬರುತ್ತಾರೆ ಎಂದು ಇದೀಗ ಅರಸೀಕೆರೆ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿರುವ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಎನ್‌.ಆರ್‌. ಸಂತೋಷ್‌ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಾನೇನು ಮಾಡಿದ್ದೀನಿ ಎಂದು ನೀವು ಉತ್ತರ ಹೇಳಿ. ಅರಸೀಕೆರೆ ಪಿ.ಪಿ. ಸರ್ಕಲ್‌ನವರಿಗೆ ನೀವು ನಿಂತು ಉತ್ತರ ಹೇಳಬೇಕು. ಹೇಮಾವತಿ ನದಿಯಿಂದ ಕುಡಿಯುವ ನೀರು, ಎತ್ತಿನಹೊಳೆ ಯೋಜನೆಯನ್ನು ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ತಂದಿದ್ದೇನೆ. ಅದಕ್ಕಾಗಿ ನನಗೆ ರಾಜಕೀಯವಾಗಿ ಶಕ್ತಿ ತುಂಬಿ. ಅರಸೀಕೆರೆ ತಾಲ್ಲೂಕಿನ ಎಲ್ಲಾ ಕೆರೆಕಟ್ಟೆಗಳು ತುಂಬಿ ಕೋಡಿ ಬೀಳಬೇಕು ಎಂದು ನನಗೆ ಆಸೆ ಇದೆ. ಅದನ್ನು ನೆರವೇರಿಸಲು ಹೆಚ್ಚಿನ ಸಹಕಾರ ಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ | ಅಡ್ಡಮತದಾನದ ಮೂಲಕ ನಿಷ್ಠೆಯ ಪರೀಕ್ಷೆ: ಜೆಡಿಎಸ್‌ ಶಾಸಕರೇ ಟಾರ್ಗೆಟ್‌ ಏಕೆ?

Exit mobile version