Site icon Vistara News

Murder Case: ಸಿ.ಪಿ. ಯೋಗೇಶ್ವರ್ ಬಾವ ಕೊಲೆ ಕೇಸ್‌; ತೋಟದ ಕೆಲಸಗಾರರೇ ಹಂತಕರು?

Mahadevaiah

ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಬಾವ ಮಹದೇವಯ್ಯ ಕೊಲೆ ಪ್ರಕರಣದಲ್ಲಿ (Murder Case) ಈಗಾಗಲೇ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಆರೋಪಿಗಳು, ಸಿಪಿವೈ ಸಹೋದರನ ತೋಟ ನೋಡಿಕೊಳ್ಳುತ್ತಿದ್ದ ಕೆಲಸಗಾರರು ಎಂಬುವುದು ತಿಳಿದುಬಂದಿದೆ.

ಪ್ರಕರಣದಲ್ಲಿ ತಮಿಳುನಾಡು ಮೂಲದ ಮುರುಗನ್‌ ಹಾಗೂ ಮಹಿಳೆಯನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಮುರುಗನ್‌, ಸಿ.ಪಿ.ಯೋಗೇಶ್ವರ್‌ ಸಹೋದರ ಗಂಗಾಧರ್ ಅವರ ತೋಟ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಮಹದೇವಯ್ಯ ಅವರಿಗೆ ಪರಿಚಿತನಾಗಿದ್ದ ಆರೋಪಿಗೆ ಅವರ ಹಣದ ವಹಿವಾಟಿನ ಬಗ್ಗೆಯೂ ಮಾಹಿತಿ ಇತ್ತು. ಹಾಗಾಗೀ ತನ್ನ ಸಹಚರರೊಂದಿಗೆ ಕೃತ್ಯವೆಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮುರುಗೇಶ್ ಈ ಹಿಂದೆ ಕೆಲಸ ಮಾಡುವಾಗ ಮಹದೇವಯ್ಯನವರ ವಿಶ್ವಾಸ ಗಳಿಸಿದ್ದ. ಜಮೀನು ಮಾರಿರುವ ಹಿನ್ನೆಲೆಯಲ್ಲಿ ಮಹದೇವಯ್ಯ ನವರ ಬಳಿ ಅಪಾರವಾದ ಹಣವಿದೆ ಎಂಬ ಮಾಹಿತಿಯಿಂದ ತಮಿಳುನಾಡಿನ ಇಬ್ಬರು ಸ್ನೇಹಿತರ ಸಹಕಾರದಿಂದ ಹತ್ಯೆ ಎಸಗಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Anekal News : ನೇಣು ಬಿಗಿದುಕೊಂಡ ಪತಿ; ತುಂಬು ಗರ್ಭಿಣಿ ಅನಾಥೆ

ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ

ಪ್ರಕರಣದ ಬಗ್ಗೆ ಮುರುಗನ್ ಮಾವ ಶಿವರಾಮನ್ ಪ್ರತಿಕ್ರಿಯಿಸಿ, ಕಳೆದ ನಾಲ್ಕು ವರ್ಷಗಳಿಂದ ಸಿ.ಪಿ. ಗಂಗಾಧರ್ ಅವರ ತೋಟದ ಮನೆಯನ್ನು ನೋಡಿಕೊಳ್ಳುತ್ತಿದ್ದೆವು. ಮುರುಗನ್ ನನ್ನ ಅಳಿಯ, ಆತನಿಗೆ ನನ್ನ ಮಗಳನ್ನೇ ಕೊಟ್ಟಿದ್ದೇನೆ. ಇಲ್ಲಿಯೇ ಕೆರೆಯಲ್ಲಿ ಮೀನು ಹಿಡಿದುಕೊಂಡು ಸುತ್ತಮುತ್ತ ಮಾರಾಟ ಮಾಡುತ್ತಿದ್ದ. ಆತ ಬಹಳ ದೈತ್ಯ ಮನುಷ್ಯ, ಯಾವಾಗಲೂ ಮದ್ಯಪಾನ ಮಾಡುತ್ತಿದ್ದ. ಮಹದೇವಯ್ಯ ಕೊಲೆ ಕೇಸ್‌ನಲ್ಲಿ ಅವನನ್ನು ಅರೆಸ್ಟ್ ಮಾಡಿದ್ದಾರೆ. ಅವನು ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ನಮ್ಮ ಮಾನ ಮರ್ಯಾದೆ ಎಲ್ಲಾ ಹಾಳುಮಾಡಿಬಿಟ್ಟ ಎಂದು ಹೇಳಿದ್ದಾರೆ.

ನನ್ನ ಮಗಳು ಸಹ ಆತನ ಜತೆಗೆ ಊರಿಗೆ ಹೋದಳು. ನಾಗ್ಪುರದಲ್ಲಿ ಜಮೀನು ಕೆಲಸಕ್ಕೆ ಹೋಗುತ್ತಿದ್ದೇನೆ ಎಂದಿದ್ದರು. ಆಮೇಲೆ ನೋಡಿದರೆ ಈ ಎಲ್ಲಾ ಬೆಳವಣಿಗೆ ಆಗಿದೆ. ಪೊಲೀಸರು ಬಂದಿದ್ದು ನೋಡಿ ತುಂಬಾ ಗಾಬರಿಯಾಯಿತು. ಮಹದೇವಯ್ಯ ತೋಟ ಇರೋದು ದೂರದಲ್ಲಿ. ಪಕ್ಕದ ತೋಟದಲ್ಲಿ ನಾವು ಕೆಲಸ ಮಾಡುತ್ತೇವೆ. ಅಲ್ಲಿಗೂ ಇಲ್ಲಿಗೂ ಹೇಗೆ ಸಂಪರ್ಕ ಗೊತ್ತಿಲ್ಲ ಮುರುಗನ್ ಮಾವ ಶಿವರಾಮನ್ ತಿಳಿಸಿದ್ದಾರೆ.

ಇದನ್ನೂ ಓದಿ | Honey trap : ಹಣ ಸುಲಿಗೆಗಾಗಿ ಹೆಂಡ್ತಿಯನ್ನೇ ಹನಿಟ್ರ್ಯಾಪ್‌ಗೆ ಬಳಸಿಕೊಂಡ!

ಏನಿದು ಪ್ರಕರಣ?

ಡಿ.3 ರಂದು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಬಳಿಯ ವಡ್ಡರದೊಡ್ಡಿ ತೋಟದ ಮನೆಯಿಂದ ಕಾರು ಸಮೆತ ಮಹದೇವಯ್ಯ ನಾಪತ್ತೆಯಾಗಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಡಿ.4 ರಂದು ಚಾಮರಾಜನಗರ ಜಿಲ್ಲೆಯ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಮಹದೇವಯ್ಯ ಕಾರು ಪತ್ತೆಯಾಗಿತ್ತು. ನಂತರ ತನಿಖೆ ಚುರುಕುಗೊಳಿಸಿದಾಗ ಡಿ.5 ರಂದು ಮಧ್ಯಾಹ್ನ ರಾಮಪುರದಿಂದ ಕೌದಳ್ಳಿಗೆ ತೆರಳುವ ಅರಣ್ಯ ಪ್ರದೇಶದಲ್ಲಿ ಮಹದೇವಯ್ಯ ಶವ ಪತ್ತೆಯಾಗಿತ್ತು. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version