ಚಿಕ್ಕಮಗಳೂರು: ವಿಪಕ್ಷ ನಾಯಕನ (Leader of opposition) ಆಯ್ಕೆಯಾಗದೇ ಇರೋದು ಕಾಂಗ್ರೆಸ್ಸಿಗರಿಗೇ ಆರಾಮಾಯ್ತಲ್ಲ. ಈಗ ಅವರಿಗೇಕೆ ಭಯ? ವಿಪಕ್ಷ ನಾಯಕ ಇದ್ದಿದ್ದರೆ ಅರ್ಕಾವತಿ ಹಗರಣವನ್ನು (Arkavathi scam) ಹೊರ ತೆಗೆಯುತ್ತಿದ್ದರು. ಈಗ ಕಾಂಗ್ರೆಸ್ಸಿಗರು ನಿಶ್ಚಿಂತೆಯಾಗಿ ಇರಬಹುದಲ್ವಾ? ಇಲ್ಲದಿದ್ದರೆ ಅರ್ಕಾವತಿ ಖದೀಮರು ಯಾರು ಎಂದು ಕೇಳಿದ್ದರೆ ತಡಬಡಿಸಬೇಕಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ. ರವಿ, ಅರ್ಕಾವತಿ ಪ್ರಕರಣದ ಬಗ್ಗೆ ನಾನು ಹತ್ತಾರು ಬಾರಿ ಕೇಳಿದ್ದೇನೆ. ಈವರೆಗೂ ಉತ್ತರ ಕೊಟ್ಟಿಲ್ಲ. ಅರ್ಕಾವತಿ ಹಗರಣದಲ್ಲಿ ಇದ್ದ ಮೂವರಲ್ಲಿ ಕದ್ದವರು ಯಾರು? 8000 ಕೋಟಿ ಲೂಟಿ ಹೊಡೆದವರು ಯಾರೆಂದು ಕೇಳುತ್ತಲೇ ಇದ್ದೇನೆ. ಉತ್ತರ ಕೊಡುವ ಧೈರ್ಯ ಅವರಿಗಿಲ್ಲ. ಏಕೆಂದರೆ ಇದ್ದವರು ಅವರೇ, ಮತ್ತೆ ಕದ್ದವರೂ ಅವರೇ ಎಂದು ಹೇಳಿದರು.
ಇದನ್ನೂ ಓದಿ: Electricity load shedding : ಈ ಮಳೆಗಾಲ ಮುಗಿಯುವುದರೊಳಗೇ ಲೋಡ್ ಶೆಡ್ಡಿಂಗ್?
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ವಿಪಕ್ಷ ನಾಯಕ ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ರಾಜಕಾರಣದಲ್ಲಿ ಇಂಥ ಚರ್ಚೆ ಸುಮ್ಮನೆ ನಡೆಯುವುದಿಲ್ಲ. ಅದಕ್ಕೆಲ್ಲ ಕಾರಣ ಇರುತ್ತದೆ. ಈಗ ಅದರ ವಿಶ್ಲೇಷಣೆ ಬೇಡ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟವರು. ನೇಷನ್ ಫಸ್ಟ್ ಎಂಬ ತತ್ವದ ಮೇಲೆ ಯಾರು ಬೇಕಾದರೂ ನಮ್ಮ ಜತೆ ಬರಬಹುದು. ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ. ರಾಷ್ಟ್ರದ ಹಿತಾಸಕ್ತಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರ ಹಿತ ಹಾಗೂ ಜನಪರ ಕೆಲಸ ಮೆಚ್ಚಿ ಯಾರು ಬೇಕಾದರೂ ಬರಬಹುದು. ಎನ್‌ಡಿಎ ಹಾಗೂ ಬಿಜೆಪಿ ಜತೆ ಯಾರು ಬೇಕಾದರೂ ಬರಬಹುದು. ಜೆಡಿಎಸ್ ಜೊತೆ ಮೈತ್ರಿ ಕುರಿತಂತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮೇಲ್ಮಟ್ಟದಲ್ಲಿ ಆಗಿದ್ದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರನ್ನೂ ದೂರ ಇಟ್ಟು ರಾಜಕಾರಣ ಮಾಡುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರಲ್ಲ ಎಂದು ಸಿ.ಟಿ. ರವಿ ಹೇಳಿದರು.
ದೇವೇಗೌಡರ ಜತೆ ಮಾತುಕತೆ ಆಗಿದೆ: ಬೊಮ್ಮಾಯಿ
ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ನಮ್ಮ ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಪಕ್ಷದ ವರಿಷ್ಠರು ಮತ್ತು ದೇವೇಗೌಡರ ನಡುವೆ ಮಾತುಕತೆ ನಡೆದಿದೆ. ಈಗಾಗಲೇ ಕುಮಾರಸ್ವಾಮಿಯವರು ಕೆಲವೊಂದಿಷ್ಟು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮಾತುಕತೆ ಫಲಶೃತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಹೇಳಿದರು.
ವಿಪಕ್ಷ ನಾಯಕನ ಸ್ಥಾನ ಜುಲೈ 18ರ ನಂತರ ಘೋಷಣೆ ಆಗಬಹುದು ಎಂಬ ಮಾಹಿತಿ ಇದೆ. ಮಾಜಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಆಗುವುದು ಕೇವಲ ಊಹಾಪೋಹ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: Doodh Sagar Ban : ಅರೆ ಇಸ್ಕಿ, ದೂಧ್ ಸಾಗರ್ ಹೋದೋರಿಗೆ ಹೊಡೆಸಿದರು ಬಸ್ಕಿ!
ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಬಿ.ವೈ. ವಿಜಯೇಂದ್ರ
ನಾವು ರೈತರು, ಬಡವರ ಪರ ಕೆಲಸ ಮಾಡುತ್ತೇವೆ. ವಿರೋಧ ಪಕ್ಷದ ನಾಯಕರು ಯಾರು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಹೇಳಿದರು.