Site icon Vistara News

ಕಾಂಗ್ರೆಸ್ ಪಾದಯಾತ್ರೆಗೆ ಬಂದವರಿಗೆ ವಾಹನ ನಿಲುಗಡೆ, ಮೆಟ್ರೋದಲ್ಲಿ ಸಂಚಾರಕ್ಕೆ ವ್ಯವಸ್ಥೆ

Freedom March

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ವತಿಯಿಂದ ನಗರದಲ್ಲಿ ಆ.15ರಂದು ನಡೆಯಲಿರುವ ʼಸ್ವಾತಂತ್ರ್ಯ ನಡಿಗೆʼ ಪಾದಯಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ಕಾಂಗ್ರೆಸ್‌ ಕಾರ್ಯಕರ್ತರು ಬರುವ ನಿರೀಕ್ಷೆ ಇರುವುದರಿಂದ ಸುಗಮ ಸಂಚಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಮೆಜಿಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಪಾದಯಾತ್ರೆ ನಡೆಯುವುದರಿಂದ ಹೊರ ಜಿಲ್ಲೆಯ ಜನರ ಅನುಕೂಲಕ್ಕೆ ನಗರದ ಹೊರ ವಲಯದಲ್ಲಿ ವಾಹನ ನಿಲುಗಡೆ ಹಾಗೂ ಮೆಟ್ರೋ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

  1. ತುಮಕೂರು ರಸ್ತೆ ಮೂಲಕ ಬೆಂಗಳೂರಿಗೆ ಆಗಮಿಸುವ ಬೆಳಗಾವಿ, ಬಾಗಲಕೋಟೆ, ಹಾವೇರಿ, ಬೀದರ್, ಹುಬ್ಬಳ್ಳಿ ಧಾರವಾಡ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ವಿಜಯಪುರ, ರಾಯಚೂರು, ವಿಜಯನಗರ (ಹೊಸಪೇಟೆ) ಶಿವಮೊಗ್ಗ ಜಿಲ್ಲೆಗಳ ಜನರಿಗೆ ಅಂತಾರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ಬಳಿ ವಾಹನ ನಿಲುಗಡೆ ಮಾಡಲು, ನಾಗಸಂದ್ರ ಮೆಟ್ರೋ ಸ್ಟೇಷನ್‌ನಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
  2. ಮೈಸೂರು ರಸ್ತೆ ಮೂಲಕ ಬೆಂಗಳೂರು ಪ್ರವೇಶಿಸುವ ರಾಮನಗರ (ಕನಕಪುರ ಹೊರತುಪಡಿಸಿ), ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಯ ಜನರು ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಮೆಟ್ರೋ ಸ್ಟೇಷನ್‌ನಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
  3. ಕನಕಪುರ ರಸ್ತೆ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಕನಕಪುರ, ಮಳವಳ್ಳಿ, ಹನೂರು, ಕೊಳ್ಳೇಗಾಲ ಭಾಗದ ಜನರಿಗೆ ಕನಕಪುರ ರಸ್ತೆ ನೈಸ್ ಜಕ್ಷನ್ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಕೊಣನಕುಂಟೆ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬರುವ ವ್ಯವಸ್ಥೆ ಮಾಡಲಾಗಿದೆ.
  4. ಕೆ.ಆರ್ ಪುರಂ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಕೋಲಾರ, ಹೊಸಕೋಟೆ, ಚಿಂತಾಮಣಿ ಭಾಗದ ಜನರಿಗೆ ಐ.ಟಿ.ಐ. ಗೌಂಡ್ಸ್ ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಭೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
  5. ಇನ್ನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಜನರಿಗೆ ಯಶವಂತಪುರದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ.

ಹೀಗೆ ರಾಜ್ಯದ ವಿವಿಧ ಜಿಲ್ಲೆಗಳ ಜನರು ಆಯಾ ಮಾರ್ಗವಾಗಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಂದು ಸಮೀಪದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಾದಯಾತ್ರೆ ಸೇರಿಕೊಳ್ಳಲಿದ್ದಾರೆ. ಪಾದಯಾತ್ರೆ ಮೂಲಕ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಸಾಗಿದ ನಂತರ ಜನರು ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಿಂದ ವಾಪಸ್ ತೆರಳಲು ಉಚಿತ ಮೆಟ್ರೋ ಪಾಸ್ ವ್ಯವಸ್ಥೆ ಮಾಡಲಾಗಿದೆ.

ಸಂಚಾರ ದಟ್ಟನೆಯಾಗದಿರಲು ಸಹಕರಿಸಿ: ಡಿ.ಕೆ.ಶಿವಕುಮಾರ್
ನಗರದಲ್ಲಿ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಈ ವ್ಯವಸ್ಥೆ ಕಲ್ಪಿಸಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇನ್ನು ಬೆಂಗಳೂರಿನ ಜನರು ತಮ್ಮ ವಾಹನದ ಬದಲಿಗೆ ಆದಷ್ಟು ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆಯನ್ನೇ ಬಳಸಿ ಪಾದಯಾತ್ರೆಗೆ ಆಗಮಿಸಬೇಕು. ಪಾದಯಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ಬಳಿಕ ಅದೇ ರೀತಿ ತಮ್ಮ ಮನೆಗಳಿಗೆ ಹಿಂತಿರುಗಬೇಕು. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಆಗದಂತೆ ತಡೆಯಬಹುದು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Amrit Mahotsav | ಬ್ರಿಟಿಷರ ದಾಸ್ಯ ಬಯಸದೇ ಹುತಾತ್ಮನಾದ ಸುರಪುರದ ವೀರ ಚಿಕ್ಕವೆಂಕಟಪ್ಪ ನಾಯಕ

Exit mobile version