ಬೆಂಗಳೂರು: ಭಾರತೀಯ ಕಿಸಾನ್ ಯೂನಿಯನ್ ಮಾಜಿ ಅಧ್ಯಕ್ಷ ರಾಕೇಶ್ ಟಿಕಾಯತ್ ಮೇಲೆ ದಾಳಿ ಆರೋಪ ಎದುರಿಸುತ್ತಿರುವ ಶಿವಕುಮಾರ್‌ಗೆ ನೀಡಲಾಗಿದ್ದ ಸನ್ನಡತೆ ಆದೇಶ ರದ್ದುಪಡಿಸುವಂತೆ ರಾಜ್ಯ ಕಾರಾಗೃಹ ಇಲಾಖೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಸಕಲೇಶಪುರ ಮೂಲದ ಶಿವಕುಮಾರ್ 1989 ರಲ್ಲಿ ತನ್ನ ಭಾವನನ್ನು ( ತಂಗಿ ಗಂಡ ) ಕೌಟುಂಬಿಕ ಕಲಹದ ಕಾರಣ ಹತ್ಯೆ ಮಾಡಿದ್ದ.
ಮೇ 30ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ, ಸುದ್ದಿಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ, ಭಾರತೀಯ ಕಿಸಾನ್ ಯೂನಿಯನ್ ಮಾಜಿ ಮುಖಂಡ ರಾಕೇಶ್ ಟಿಕಾಯತ್ ಮುಖಕ್ಕೆ ಶಿವಕುಮಾರ್ ಹಾಗೂ ಮತ್ತಿಬ್ಬರು ಮಸಿ ಬಳಿದಿದ್ದರು. ಹಲ್ಲೆ ಮಾಡಿದ್ದು ಮತ್ತು ಮಸಿ ಬಳಿದ ಕಾರಣಕ್ಕೆ ಭಾರತ ರಕ್ಷಣಾ ವೇದಿಕೆ ಅಧ್ಯಕ್ಷ ಭರತ್ ಶೆಟ್ಟಿ, ಪ್ರಶಾಂತ್ ನಾಯ್ಕ ಮತ್ತು ಶಿವಕುಮಾರ್‌ನನ್ನು ಹೈಗೌಂಡ್ಸ್ ಪೋಲಿಸರು ಬಂಧಿಸಿದ್ದರು.
ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿದ್ದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. 1997 ರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಶಿವಕುಮಾರ್‌ಗೆ 2015ರಲ್ಲಿ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಂಧ ಮುಕ್ತ ಮಾಡಲಾಗಿತ್ತು. ಜೈಲಿನಿಂದ ಹೊರಬಂದು ಮತ್ತೆ ಕಾನೂನುಬಾಹಿರ ಕೃತ್ಯಗಳಲ್ಲಿ ಸಕ್ರಿಯವಾಗಿದ್ದಾನೆ. ರೈತ ಮುಖಂಡನ ಮೇಲೆ ಹಲ್ಲೆ ನಡೆಸಿ ಶಾಂತಿ ಭಂಗ ತಂದಿದ್ದಾನೆ. ಈತನಿಗೆ ನೀಡಿರುವ ಸನ್ನಡತೆ ಆಧಾರದ ಕ್ಷಮೆಯನ್ನು ರದ್ದುಪಡಿಸಬೇಕು ಎಂದು ಪೊಲೀಸರು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತೀಯ ಕಿಸಾನ್ ಯೂನಿಯನ್‌ನಿಂದ್ಲೇ ರಾಕೇಶ್ ಟಿಕಾಯತ್ ಉಚ್ಚಾಟನೆ