Site icon Vistara News

Ram Mandir: ಅಯೋಧ್ಯೆ ಯಾತ್ರಿಕರಿಗೆ ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಿ: ಪ್ರಲ್ಹಾದ್‌ ಜೋಶಿ ಆಗ್ರಹ

pralhad joshi

ಹುಬ್ಬಳ್ಳಿ: ಅಯೋಧ್ಯೆಗೆ (Ram Mandir) ತೆರಳುವ ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದಿರುವ ಕಿಡಿಗೇಡಿಗಳನ್ನು ರಾಜ್ಯ ಸರ್ಕಾರ ಒದ್ದು ಒಳಗೆ ಹಾಕಬೇಕು. ಕಾಂಗ್ರೆಸ್ ಸರ್ಕಾರ ಇರುವಲ್ಲಿ ಇಂಥ ಬೆದರಿಕೆ ಹಾಕಲಾಗುತ್ತಿದೆ. ಸರ್ಕಾರದ ಸಡಿಲ ನೀತಿಯಿಂದಲೇ ಈ ರೀತಿಯ ಘಟನೆಗಳಾಗುತ್ತಿವೆ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲೆಲ್ಲಾ ಹಿಂದುಗಳ ಮೇಲೆ, ಯಾತ್ರಾರ್ಥಿಗಳ ಮೇಲೆ ಹಲ್ಲೆ, ಬೆದರಿಕೆ ಪ್ರಕರಣಗಳು ನಡೆಯುತ್ತವೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂಥದ್ದಕ್ಕೆ ಉತ್ತೇಜನ ನೀಡುತ್ತದೆ ಎಂದು ಖಂಡಿಸಿದರು.

ಹೊಸಪೇಟೆಯಲ್ಲಿ ಅಯೋಧ್ಯೆ ಯಾತ್ರಿಗಳಿಗೆ ಬೆದರಿಕೆ ಹಾಕಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಸಚಿವರು, ಕಾಂಗ್ರೆಸ್ ಸರ್ಕಾರ ಇಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | Ram Devotees Insult: ರೈಲಿನಲ್ಲಿ ಶ್ರೀರಾಮಭಕ್ತರಿಗೆ ಅವಹೇಳನ; ಒಬ್ಬ ಆರೋಪಿ ವಶಕ್ಕೆ, ಇತರರ ಹುಡುಕಾಟ; ವಿಧಾನ ಪರಿಷತ್ತಿನಲ್ಲೂ ಗದ್ದಲ

ಯಾತ್ರಾರ್ಥಿಗಳು ಅಯೋಧ್ಯೆ ಮಾತ್ರವಲ್ಲ, ಮೆಕ್ಕಾ- ಮದೀನಕ್ಕೂ ತೆರಳುತ್ತಿರುತ್ತಾರೆ. ಯಾರು ಎಲ್ಲಿಗೆ ಬೇಕಾದರೂ ಹೋಗಿ ಬರುತ್ತಾರೆ. ಆದರೆ, ಅಪರಾಧ ಮನಸ್ಥಿತಿಯುಳ್ಳವರು ಯಾತ್ರಾರ್ಥಿಗಳಿಗೆ ಬೆದರಿಕೆ ಹಾಕುತ್ತಾರೆ ಎಂದರೆ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣವೇ ಕಾರಣ ಎಂದು ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅಂತಹವರು ತುಷ್ಟೀಕರಣಕ್ಕಾಗಿ, ಮತ ಬ್ಯಾಂಕ್‌ಗಾಗಿ ಇಂಥದ್ದಕ್ಕೆಲ್ಲ ಉತ್ತೇಜನ ಕೊಡುತ್ತಾರೆ. ಇದಾಗಬಾರದು. ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಬೇಕು ಎಂದು ಆಗ್ರಹಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದೆ, ನಾವು ಏನು ಮಾಡಿದರೂ ನಡೆಯುತ್ತದೆ ಎಂಬುದು ಅಪರಾಧಿಗಳ ಮನಸ್ಥಿತಿ. ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು. ಕಿಡಿಗೇಡಿಗಳು ಯಾರೇ ಇರಲಿ ಕಟ್ಟುನಿಟ್ಟಿನ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಕೇಂದ್ರದ ವಿರುದ್ಧ ನಿರ್ಣಯ ದುರ್ದೈವ

ವಿಧಾನ ಮಂಡಲದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿರುವುದು ಅತ್ಯಂತ ದುರ್ದೈವದ ಸಂಗತಿ. ಸಚಿವ ಎಚ್.ಕೆ. ಪಾಟೀಲ್‌ರಂತಹ ಹಿರಿಯರು ಸಿಎಂ ಒತ್ತಡದಿಂದ ಹೀಗೆ ಮಾಡಿದ್ದು ಘೋರ ದುರಂತ ಎಂದು ಜೋಶಿ ಹೇಳಿದರು.

15ನೇ ಹಣಕಾಸು ಆಯೋಗದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರವೇ ಇತ್ತು. ಮೊದಲು 60000 ಕೋಟಿ ತೆರಿಗೆ ಹಂಚಿಕೆ ಹಣ ಬರುತ್ತಿತ್ತು. ಈಗ 2.85 ಲಕ್ಷ ಕೋಟಿ ದಾಟಿದೆ. ಇದನ್ನೇಕೆ ಗಣನೆಗೆ ತೆಗೆದು ಕೊಳ್ಳುವುದಿಲ್ಲ? ಎಂದು ಪ್ರಶ್ನಿಸಿದ ಸಚಿವ ಜೋಶಿ, ತಮ್ಮ ವಿಫಲತೆಗಾಗಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ | Sumalatha Ambareesh: ಸ್ಪರ್ಧೆ ಖಚಿತ ಎಂದ ಸುಮಲತಾ; ‌ಅವರು ಬಿಜೆಪಿಯೊಳಗೆ ಇರ್ತಾರೆ ಎಂದ ಜೋಶಿ

ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ವಿಜಯನಗರ: ಹೊಸಪೇಟೆಯಲ್ಲಿ ರಾಮ ಭಕ್ತರ ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಪರ ಕಾರ್ಯಕರ್ತ ಆನಂದ್ ಕೃಷ್ಣ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಸೆಕ್ಷನ್ 504-506-295(a) ಅಡಿ ಪ್ರಕರಣ ದಾಖಲಾಗಿದೆ. ರಾಮ ಭಕ್ತರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈಗಾಗಲೇ ಅನ್ಯ ಕೋಮಿನ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Exit mobile version