ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಬಿಜೆಪಿಗೆ ಠಕ್ಕರ್ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Puttur Assembly Constituency) ಸ್ಪರ್ಧೆ ನಡೆಸಿ ವೀರೋಚಿತ ಸೋಲು ಕಂಡಿದ್ದ ಅರುಣ್ ಕುಮಾರ್ ಪುತ್ತಿಲ (arun kumar puthila) ಅವರ ರಾಜಕೀಯ ಆಟ ಮತ್ತೆ ಮುಂದುವರಿದಿದೆ. ತಮಗೆ ಟಿಕೆಟ್ ನೀಡದಿದ್ದರಿಂದ ಮುನಿಸಿಕೊಂಡು ಪಕ್ಷೇತರವಾಗಿ ಸ್ಪರ್ಧೆ ಮಾಡಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಲ್ಪಡಲು ಕಾರಣರಾಗಿದ್ದರು. ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ (Grama Panchayat Election) ಬಿಜೆಪಿಗೆ ಸೋಲುಣಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಪುತ್ತೂರು ತಾಲೂಕಿನ ಎರಡು ಗ್ರಾಮ ಪಂಚಾಯಿತಿಗಳ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಇದಕ್ಕೆ ಪುತ್ತಿಲ ಪರಿವಾರದವರೂ ಸ್ಪರ್ಧೆ ಮಾಡಿದ್ದರು. ಇದು ಪಕ್ಕಾ ಬಿಜೆಪಿ ಕ್ಷೇತ್ರವಾಗಿದ್ದರೂ ಮತದಾರರು ಪುತ್ತಿಲ ಅವರ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಈ ಮೂಲಕ ಬಿಜೆಪಿಯನ್ನು ಮತ್ತೆ ಮೂರನೇ ಸ್ಥಾನಕ್ಕೆ ಪುತ್ತಿಲ ಪರಿವಾರ ತಳ್ಳಿದಂತೆ ಆಗಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪುತ್ತೂರಿನ ನಿಡ್ಪಳ್ಳಿ ಹಾಗೂ ಆರ್ಯಪು ಗ್ರಾಮ ಪಂಚಾಯಿತಿ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆರ್ಯಪು ಗ್ರಾಮ ಪಂಚಾಯಿತಿಯಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ್ದಾರೆ. ಇವರು 499 ಮತಗಳನ್ನು ಪಡೆದು 146 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಇದನ್ನೂ ಓದಿ: Udupi Toilet Video : ಟಾಯ್ಲೆಟ್ಟಲ್ಲಿ ಹೆಣ್ಮಕ್ಕಳ ವಿಡಿಯೊ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ FIR
ನಿಡ್ಪಳ್ಳಿಯಲ್ಲಿ ಸೋಲಾದರೂ ಎರಡನೇ ಸ್ಥಾನ!
ಇನ್ನು ನಿಡ್ಪಳ್ಳಿ ಗ್ರಾಮ ಪಂಚಾಯಿತಿಯ ಉಪ ಚುನಾವಣೆ ಫಲಿತಾಂಶವೂ ಹೊರಬಿದ್ದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ 235 ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ. ಪುತ್ತಿಲ ಪರಿವಾರದ ಜಗನ್ನಾಥ ರೈ ವಿರುದ್ಧ 27 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಇಲ್ಲಿಯೂ ಸಹ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.