Site icon Vistara News

3ನೇ ಬಾರಿ ಅರುಣ್‌ ಶಹಾಪುರ ಕೈಹಿಡಿಯದ ಮತದಾರ: ವಾಯವ್ಯದಲ್ಲಿ ಹುಕ್ಕೇರಿಗೆ ಜಯ

Prakash hukkeri

ಪ್ರಕಾಶ್‌ ಹುಕ್ಕೇರಿ

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ಸಿ ಅಭ್ಯರ್ಥಿ ಮೀಸೆ ತಿರುವಿದ್ದಾರೆ. ಭಾರೀ ಪೈಪೋಟಿ ಮಧ್ಯೆ ಪ್ರಕಾಶ ಹುಕ್ಕೇರಿ ಗೆಲುವು ದಾಖಲಿಸಿದ್ದಾರೆ. ಎರಡು ಬಾರಿ ಸದಸ್ಯರಾಗಿದ್ದ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಹಿರಿಯ ರಾಜಕಾರಣಿಗೆ ಶರಣಾಗಿದ್ದಾರೆ. ಇದರೊಂದಿಗೆ ಶಿಕ್ಷಕರ ಕ್ಷೇತ್ರದಲ್ಲಿ ಎರಡು ಅವಧಿಗೆ ಇದ್ದ ಬಿಜೆಪಿಯ ಆಡಳಿತಕ್ಕೆ ಬ್ರೇಕ್ ಬಿದ್ದಿದೆ. ನಿರೀಕ್ಷೆಯಂತೆ ಬೆಳಗಾವಿಯ ಹೊಂದಾಣಿಕೆ ರಾಜಕಾರಣ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಬುಧವಾರ ಸಂಜೆ ವೇಳೆಗೆ ಹೊರಬಿತ್ತು. ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಕನಸು ಕಂಡಿದ್ದ ಅರುಣ್‌ ಶಹಾಪುರಗೆ ನಿರಾಸೆಯಾಗಿದೆ. ಶಿಕ್ಷಕನಲ್ಲದಿದ್ದರೂ ವಾಯವ್ಯ ಶಿಕ್ಷಕರ ಹೃದಯ ಗೆಲ್ಲುವಲ್ಲಿ ಪ್ರಕಾಶ ಹುಕ್ಕೇರಿ ಯಶಸ್ವಿಯಾಗಿದ್ದಾರೆ‌. ಆ ಮೂಲಕ ಪ್ರಕಾಶ ಹುಕ್ಕೇರಿ ಎರಡನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ‌. 11,452 ಮತ ಪಡೆದಿರುವ ಪ್ರಕಾಶ ಹುಕ್ಕೇರಿ, 5091 ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿಕೊಂಡಿದ್ದಾರೆ. ಬಿಜೆಪಿಯ ಅರುಣ ಶಹಾಪುರ 6361 ಮತ ಪಡೆದಿದ್ದಾರೆ.

ಬಿಜೆಪಿ ಭದ್ರಕೋಟೆಯಲ್ಲೇ ಶಹಾಪುರ ಸೋಲು ಕಮಲ ಪಾಳೆಯಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ಸೋಲು ಮೂರು ಜಿಲ್ಲೆಯ ಘಟಾನುಘಟಿ ಬಿಜೆಪಿ ನಾಯಕರನ್ನು ಮುಜುಗರಕ್ಕೆ ಸಿಲುಕಿಸಿದೆ. ಬೆಳಗಾವಿಯ ಹೊಂದಾಣಿಕೆ ರಾಜಕಾರಣಕ್ಕೆ ಬಿಜೆಪಿ ಮತ್ತೊಮ್ಮೆ ಪೆಟ್ಟು ತಿಂದಿದೆ. ರಾಜ್ಯಸಭೆ, ಪರಿಷತ್‌ಗೆ ಪರಿಗಣಿಸದ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಅಸಮಾಧಾನಗೊಂಡಿದ್ದರು. ಜತೆಗೆ ಬಿಜೆಪಿ ನಾಯಕರೂ ಕೈಕೊಟ್ಟಿದ್ದೇ ಅರುಣ್‌ ಶಹಾಪುರ ಸೋಲಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ಸಿನ ಹಣದ ಹೊಳೆಯೇ ನನ್ನ ಸೋಲಿಗೆ ಕಾರಣವಾಯ್ತು ಎಂದು ಪ್ರತಿಕ್ರಿಯಿಸಿರುವ ಅರುಣ್ ಶಹಾಪುರ, ತಮ್ಮನ್ನು ಬೆಂಬಲಿಸಿದ ಶಿಕ್ಷಕ ಸಮೂಹಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅರುಣ್ ಶಹಾಪುರ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಸಂಘಟನೆ, ಯಾರನ್ನು ‌ತಲೆತಂಡ ಮಾಡುತ್ತದೆಯೋ ಕಾದುನೋಡಬೇಕಿದೆ.

ಕೆಲಸಗಾರ ಎಂದೇ ಪ್ರಕಾಶ ಹುಕ್ಕೇರಿ ಕೀರ್ತಿ ಸಂಪಾದಿಸಿದವರು. ಪಕ್ಷದ ಜತೆಗೆ ಸ್ವಂತ ವರ್ಚಸ್ಸು ಪ್ರಕಾಶ ಗೆಲುವಿಗೆ ಮುಖ್ಯ ಕಾರಣ. ಪ್ರಕಾಶ ಹುಕ್ಕೇರಿ ಬಗ್ಗೆ ಬಳಸಿದ ಕೀಳುಮಟ್ಟದ ಭಾಷೆ ಬಿಜೆಪಿಗೆ ಮುಳುವಾಗಿದೆ. ಬಿಜೆಪಿ ನಾಯಕರ ಟೀಕೆಗೆ ಮೌನವಾಗಿಯೇ ಇದ್ದ ಪ್ರಕಾಶ ಫಲಿತಾಂಶದಿಂದಲೇ ಉತ್ತರಿಸಿದ್ದಾರೆ. ಸೋಲಿಗೆ ಕಾರಣಗಳನ್ನು ಆತ್ಮಾವಲೋಕನ ಸಭೆಯಲ್ಲಿ ಚರ್ಚಿಸುತ್ತೇವೆ. ಮತ್ತೇ ಫೀನಿಕ್ಸ್ ಪಕ್ಷಿಯಂತೆ ಎದ್ದೇಳುತ್ತೇನೆ. ಈ ಸೋಲು ನನ್ನ ರಾಜಕೀಯ ಜೀವನಕ್ಕೆ ದೊಡ್ಡ ಪಾಠ ಎಂದು ಶಹಾಪುರ ಪ್ರತಿಕ್ರಿಯಿಸಿದ್ದಾರೆ. ಮೂರು ಜಿಲ್ಲೆಯ 33 ವಿಧಾನಸಭೆ ಕ್ಷೇತ್ರದ ಪೈಕಿ ಬಿಜೆಪಿಯ 22 ಶಾಸಕರಿದ್ದಾರೆ. ಐವರು ಸಂಸದರಿದ್ದರೆ, ನಾಲ್ವರು ಸಚಿವರಿದ್ದಾರೆ. ಹೀಗಿದ್ದರೂ ಶಹಾಪುರ ಸೋಲು ಬಿಜೆಪಿಗೆ ಆಘಾತ ತರಿಸಿರುವುದಂತೂ ಸತ್ಯ.

ಇದನ್ನೂ ಓದಿ | ವಿಧಾನಪರಿಷತ್ತಿನ 4 ಕ್ಷೇತ್ರಗಳ ಚುನಾವಣಾ ಫಲಿತಾಂಶ ಇಂದು ಪ್ರಕಟ, 49 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Exit mobile version