ಹಾವೇರಿ: ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗೆ ವಯೋಮಿತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಮನವಿ ಕೊಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸ್ ಹುದ್ದೆ ಆಕಾಂಕ್ಷಿಗಳು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಕಾರನ್ನು ಅಡ್ಡಗಟ್ಟಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ಮುಗಿದ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕಾರಿನಲ್ಲಿ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗೆ ವಯೋಮಿತಿ ಹೆಚ್ಚಳ ಮಾಡಲು ಉದ್ಯೋಗಾಕಾಂಕ್ಷಿಗಳು ಮನವಿ ನೀಡಲು ಮುಂದಾದಾಗ ಅವಕಾಶ ನೀಡಿಲ್ಲ. ಹೀಗಾಗಿ ಆಕ್ರೋಶಗೊಂಡ ಉದ್ಯೋಗಾಕಾಂಕ್ಷಿಗಳು ಗುಂಪು, ಕಾರನ್ನು ಅಡ್ಡಗಟ್ಟಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿತು.
ಇದನ್ನೂ ಓದಿ | KPSC Recruitment 2022 | ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರತಿಭಟನೆ ಮಾಡುತ್ತಿದ್ದ ಯುವಕ, ಯುವತಿಯರನ್ನು ಮನವೊಲಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ಸಚಿವ ಬಿ.ಸಿ.ಪಾಟೀಲ್, ಶಾಸಕ ಓಲೇಕಾರ ಹೇಳಿದರೂ ಯುವಕರು ಮಾತು ಕೇಳದಿದ್ದಾಗ, ಕಾರಿನಿಂದ ಅರುಣ್ ಸಿಂಗ್ ಇಳಿದು ಉದ್ಯೋಗಾಕಾಂಕ್ಷಿಗಳ ಬೇಡಿಕೆ ಆಲಿಸಿದರು.
ಈ ವೇಳೆ ಬೇರೆ ರಾಜ್ಯಗಳಲ್ಲಿ ವಯೋಮಿತಿ ಹೆಚ್ಚಳ ಆಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಈ ಹುದ್ದೆಗೆ ವಯೋಮಿತಿ ಹೆಚ್ಚಳ ಮಾಡುವಂತೆ ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಅರುಣ್ ಸಿಂಗ್, ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವರಿಕೆ ಮಾಡುತ್ತೇನೆ ಎಂದು ಹೇಳಿದಾಗ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ಕೈ ಬಿಟ್ಟರು.
ಇದನ್ನೂ ಓದಿ | ಅಲ್ಪಸಂಖ್ಯಾತರ ಪರ ಕಾಂಗ್ರೆಸ್; ರೈತರು, ಬಡವರ ಪರ ಬಿಜೆಪಿ: ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್