ಬೆಂಗಳೂರು: ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸ್ಥಾನಕ್ಕೆ ಅರುಣ್ ಶ್ಯಾಮ್ ಎಂ. (Aruna Shyam M) ರಾಜೀನಾಮೆ ನೀಡಿದ್ದಾರೆ. ಇವರು ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರುಣ್ ಶ್ಯಾಮ್ ಎಂ. ಅವರು, ಕಳೆದ ಸುಮಾರು ಎರಡೂವರೆ ವರ್ಷ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ (Additional Advocate General) ಆಗಿ ಸರ್ಕಾರವನ್ನು ಪ್ರತಿನಿಧಿಸುವ ಭಾಗ್ಯ ನನ್ನದಾಗಿತ್ತು. ರೈತಾಪಿ ಸಾಮಾನ್ಯ ಕುಟುಂಬದಿಂದ ಮೊದಲ ತಲೆಮಾರಿನ ವಕೀಲನಾಗಿ ಕಾರ್ಯನಿವಹಿಸುತ್ತಿದ್ದ ನನಗೆ ಕಿರಿಯ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನೀಡಿದ್ದು ಅತ್ಯಂತ ವಿಶೇಷ ಸನ್ನಿವೇಶ ಮತ್ತು ಯುವಕರಿಗೆ ಸ್ಫೂರ್ತಿದಾಯಕ ಎಂದು ತಿಳಿಸಿದ್ದಾರೆ.
ನಿಷ್ಕಳಂಕ ಸೇವಾವಧಿಗೆ ಅನುವು ಮಾಡಿಕೊಟ್ಟ ಹಿರಿಯರಿಗೆ, ಆಡಳಿತ ಪಕ್ಷ ಮತ್ತು ಸಂಘಟನೆಗಳಿಗೆ ನನ್ನ ಪ್ರಣಾಮಗಳು. ವಿಶೇಷವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ, ಮಾಜಿ ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಧನ್ಯವಾದಗಳು ಎಂದಿರುವ ಅವರು, ಸೇವಾವಧಿಯಲ್ಲಿ ಅತ್ಯಂತ ಗೌರವ, ವಿಶ್ವಾಸ ಹಾಗೂ ಅಭಿಮಾನದಿಂದ ಕಂಡ ನ್ಯಾಯಮೂರ್ತಿಗಳು, ಅಧಿಕಾರಿ ವರ್ಗ, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಸ್ನೇಹಿತರಿಗೂ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ | Karnataka Election Results : ಸೋಲಿನ ಹೊಡೆತದಿಂದ ಕಂಗೆಟ್ಟ ಬಿಜೆಪಿಗೆ ಮೇಜರ್ ಸರ್ಜರಿ, ಆರ್‌ಎಸ್‌ಎಸ್ ಸೂಚನೆ
ಸರ್ಕಾರ ಬದಲಾದರೆ ಅಡ್ವೊಕೇಟ್ ಜನರಲ್ ಸ್ಥಾನ ತ್ಯಜಿಸಬೇಕಿಲ್ಲ ಎಂದಿದ್ದ ಪ್ರಭುಲಿಂಗ ನಾವದಗಿ ರಾಜೀನಾಮೆ!
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದ ಒಂದೇ ದಿನಕ್ಕೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ (Prabhuling Navadgi) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿಂದೆ ಅವರು ಬಾರ್ & ಬೆಂಚ್ ವೆಬ್‌ಸೈಟ್‌ಗೆ ನೀಡಿದ್ದ ಸಂದರ್ಶನದಲ್ಲಿ, ರಾಜಕೀಯ ಸ್ಥಾನ ಪಲ್ಲಟವಾದ ತಕ್ಷಣ ಅಡ್ವೊಕೇಟ್ ಜನರಲ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದರು. ಆದರೆ, ಸರ್ಕಾರ ಬದಲಾಗುತ್ತಿದ್ದಂತೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಭಾನುವಾರ ರಾಜಭವನಕ್ಕೆ ತೆರಳಿ ಪ್ರಭುಲಿಂಗ ನಾವದಗಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. 2018ರ ಮೇ 18ರಂದು ನಾವದಗಿ ಅವರು ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು.
ಇದನ್ನೂ ಓದಿ | Karnataka Election Results: ಸಿದ್ದರಾಮಯ್ಯ ಪರ ಅಹಿಂದ ಸಂಘಟನೆಗಳ ಲಾಬಿ: ಮತ್ತೊಮ್ಮೆ ಸಿದ್ದರಾಮಯ್ಯ ಎಂದ ನಾಯಕರು
2018ಕ್ಕೂ ಮುನ್ನ ಮಧುಸೂದನ್ ನಾಯಕ್ ಅವರು ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಣೆ ಮಾಡಿದ್ದರು. ಬಳಿಕ ಉದಯ್ ಹೊಳ್ಳ ಅವರು ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು (ಜೆಡಿಎಸ್ ಹಾಗೂ ಕಾಂಗ್ರೆಸ್) 2019ರಲ್ಲಿ ಪತನಗೊಂಡ ನಂತರ ಅವರೂ ರಾಜೀನಾಮೆ ನೀಡಿದ್ದರು.