Site icon Vistara News

ಪಾಲಿಕೆ ಚುನಾವಣೆ | ವಿಜಯಪುರದಲ್ಲಿ ಅಸಾದುದ್ದೀನ್‌ ಓವೈಸಿ ಹವಾ; ಎಐಎಂಐಎಂ ಅಭ್ಯರ್ಥಿಗಳ ಪರ ಪ್ರಚಾರ

ಅಸಾದುದ್ದೀನ್‌ ಓವೈಸಿ

ವಿಜಯಪುರ: ನಗರದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 35 ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಹಿನ್ನೆಲೆಯಲ್ಲಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಗುಮ್ಮಟನಗರಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮಂಗಳವಾರ ಪ್ರಚಾರ ನಡೆಸಿದರು.

ಪಾಲಿಕೆ ಚುನಾವಣೆಗೆ ಎಐಎಂಐಎಂ ಪಕ್ಷದಿಂದ ಒಟ್ಟು ಐವರು ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು. ಆದರೆ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದರಿಂದ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಪರ ನಗರದ ಹಕೀಂ ಚೌಕ್, ಜುಮ್ಮಾ ಮಸೀದಿ ಪ್ರದೇಶ ಸೇರಿ ವಿವಿಧ ವಾರ್ಡ್‌ಗಳಲ್ಲಿ ಅಸಾದುದ್ದೀನ್‌ ಓವೈಸಿ ಪ್ರಚಾರ ನಡೆಸಿದರು.

ಇದನ್ನೂ ಓದಿ | ʼಯತ್ನಾಳ್‌ ಬಾಯಲ್ಲಿ ಬರುತ್ತಿರುವುದು B.L. ಸಂತೋಷ್‌ ಮಾತುʼ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಲೇವಡಿ

ಪ್ರಚಾರಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅಸಾದುದ್ದೀನ್‌ ಓವೈಸಿ, ನಮ್ಮ ಐದು ಅಭ್ಯರ್ಥಿಗಳನ್ನು ಪಾಲಿಕೆ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದೆವು. ಓರ್ವ ಅಭ್ಯರ್ಥಿ ಇನ್ನಿತರ ಪಕ್ಷದವರ ಪ್ರಭಾವಕ್ಕೊಳಗಾಗಿ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಹೀಗಾಗಿ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಜನರ ಬೆಂಬಲ ಇದೆ, ಗೆಲ್ಲುತ್ತೇವೆಂಬ ವಿಶ್ವಾಸವೂ ಇದೆ. ಈ ಕಾರಣಕ್ಕಾಗಿಯೇ ಪ್ರಚಾರ ಕೈಗೊಳ್ಳಲು ಆಗಮಿಸಿದ್ದೇನೆ ಎಂದರು.

ಪ್ರಚಾರದ ವೇಳೆ ಅಸಾದುದ್ದೀನ್ ಓವೈಸಿಯನ್ನು ನೋಡಲು ನೂರಾರು ಮಂದಿ ಜಮಾಯಿಸಿದ್ದರು. ಇದರಿಂದ ಅವರು ಭೇಟಿ ನೀಡಿದ ಕಾಮತ್ ಖಾಸಗಿ ಹೊಟೇಲ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಹಕೀಮ್ ಚೌಕ್‌ನಿಂದ ಅಸ್ಟಪೈಲ್ ಬಂಗ್ಲೆ ಸರ್ಕಲ್‌ವರೆಗೆ ಬೃಹತ್ ರ‍್ಯಾಲಿ ನಡೆಸುವ ಮೂಲಕ ಪಕ್ಷದ ಶಕ್ತಿ ಪ್ರದರ್ಶನ ಮಾಡಲಾಯಿತು. ಬಳಿಕ ಸಿಕ್ಯಾಬ್ ಕಾಲೇಜು ಆವರಣದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಲಾಯಿತು. ನಗರದಲ್ಲಿ ಅಸಾದುದ್ದೀನ್ ಓವೈಸಿ ಪ್ರಚಾರ ಸಭೆಗೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಲಾಗಿದೆ.

ಇದನ್ನೂ ಓದಿ | Statue of Prosperity | ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಸಲುವಾಗಿ ನ.8ಕ್ಕೆ ಎಲ್ಲೆಡೆಯಿಂದ ಬರಲಿದೆ ಪವಿತ್ರ ಮೃತ್ತಿಕೆ

Exit mobile version