ವಿಜಯಪುರ: ಮುಸ್ಲಿಮರ ಗಡ್ಡ, ಟೋಪಿ, ಹಿಜಾಬ್, ಹಲಾಲ್ ಇವೆಲ್ಲವೂ ಬಿಜೆಪಿಗೆ ಆತಂಕ ತರುತ್ತಿವೆ. ಬಿಜೆಪಿ ಮುಸ್ಲಿಮರ ಪ್ರಾಥಮಿಕ ಗುರುತಿಸುವಿಕೆಯನ್ನು ದ್ವೇಷಿಸುತ್ತಿದೆ. ಪ್ರಧಾನಿ ದೆಹಲಿಯಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ, ವಾಸ್ತವವಾಗಿ ಮುಸ್ಲಿಮರ ಆಚಾರ, ವಿಚಾರ ಹಾಗೂ ಸಂಸ್ಕೃತಿ ಬಿಜೆಪಿಗೆ ಆತಂಕ ತರಿಸುತ್ತಿವೆ ಎಂದು ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು.
ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಎಐಎಂಐಎಂ ಅಭ್ಯರ್ಥಿಗಳ ಪರ ಮಂಗಳವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ನೂಪುರ ಶರ್ಮಾ ಹೇಳಿಕೆ ಗಮನಿಸಿ, ಹೈದ್ರಾಬಾದ್‌ನಲ್ಲಿ ಒಬ್ಬ ಎಂಎಲ್ಎ ಮುಸ್ಲಿಂ ವಿರೋಧಿ ಹೇಳಿಕೆ ನೀಡುತ್ತಾನೆ. ಒಬ್ಬ ಎಂಪಿ ಮುಸ್ಲಿಮರ ಜತೆಗೆ ವ್ಯಾಪಾರ ನಿಲ್ಲಿಸಿ ಎನ್ನುತ್ತಾರೆ. ಇದು ಬಿಜೆಪಿಯ ಅಸಲಿ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | Election 2023 | BJP ಸರ್ಕಾರ ಪತನ, ಕಾಂಗ್ರೆಸ್‌ಗೆ ಗದ್ದುಗೆ: ಜೆಡಿಎಸ್‌ಗೆ 18 ಸೀಟು ಎಂದ ʼಸಮೀಕ್ಷೆʼ !
ಹಲಾಲ್ ಬಗ್ಗೆ ಮಾತನಾಡುವ ಮೂಲಕ ಬಿಜೆಪಿಯವರು ತಮ್ಮ ಭ್ರಷ್ಟಾಚಾರವನ್ನು ಹಲಾಲ್ ಮಾಡುತ್ತಿದ್ದಾರೆ. ನಮ್ಮ ಮಾಂಸದಲ್ಲಿ ಬಿಜೆಪಿಗೆ ಹಲಾಲ್ ಕಾಣಿಸುತ್ತದೆ. ಆದರೆ, ಭ್ರಷ್ಟಾಚಾರವೇ ಅವರಿಗೆ ಹಲಾಲ್ ಆಗಿದೆ. ಅವರು ಏನು ಮಾಡಿದರೂ ಸರಿ ಎನ್ನಿಸುತ್ತದೆ, ಮುಸ್ಲಿಮರು ಏನೇ ಮಾಡಿದರೂ ತಪ್ಪಾಗಿ ಕಾಣಿಸುತ್ತದೆ ಎಂದು ಕಿಡಿಕಾರಿದರು.
ಮದರಸಾಗಳ ಸರ್ವೇ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರದಿಂದ ಮದರಸಾಗಳ ಸರ್ವೇಗೆ ನನ್ನ ವಿರೋಧವಿದೆ. ಈ ವಿರೋಧ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಸರ್ವೇ ಮಾಡುವುದಾದರೆ ಆರ್‌ಎಸ್‌ಎಸ್‌ನ ಶಿಶುಮಂದಿರ, ಮಿಷನರಿ ಶಾಲೆ, ಸರ್ಕಾರಿ ಶಾಲೆಗಳ ಸರ್ವೆ ನಡೆಯಲಿ. ಎಷ್ಟು ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಇಲ್ಲ ಎನ್ನುವ ಬಗ್ಗೆ ಸರ್ವೇಯಾಗಲಿ ಎಂದು ಕಿಡಿಕಾರಿದರು.
ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಒಬ್ಬ ನ್ಯಾಯಮೂರ್ತಿ ಹಿಜಾಬ್ ಪರ ತೀರ್ಪು ನೀಡಿದ್ದಾರೆ. ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಅಗತ್ಯವಿರುವುದರಿಂದ ಒಂದು ರೀತಿಯಲ್ಲಿ ಸಕಾರಾತ್ಮಕ ತೀರ್ಪು ನೀಡಿದ್ದು, ಹಿಜಾಬ್ ಹಾಕುವುದು ಒಳ್ಳೆಯದು, ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಭಿನ್ನ ತೀರ್ಪು ಬಂದ ಹಿನ್ನೆಲೆಯಲ್ಲಿ ಪ್ರಕರಣ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಕಚೇರಿ ಮೇಲೆ ಭಗವಾಧ್ವಜ ಹಾರಿಸಲಾಗುವುದು ಎಂಬ ಬಿಜೆಪಿ ನಾಯಕ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಇಂತಹ ಹೇಳಿಕೆಗಳನ್ನು ನೀಡುವ ಬದಲು, ಭ್ರಷ್ಟಾಚಾರ ಏಕೆ ಹೆಚ್ಚಾಗಿದೆ? 40 ಪರ್ಸೆಂಟ್ ಕಮಿಷನ್ ಅನ್ನು ಏಕೆ ತೆಗೆದುಕೊಳ್ಳಲಾಗಿದೆ? ಬೆಲೆ ಏರಿಕೆ ಯಾಕಾಯಿತು? ನಿರುದ್ಯೋಗ ಸಮಸ್ಯೆ ಏನು? ಎಂಬ ಕುರಿತು ಮಾತನಾಡಲಿ. ಆಗ ಪ್ರತಿಕ್ರಿಯೆ ನೀಡೋಣ ಎಂದು ಓವೈಸಿ ಹೇಳಿದರು.
ಜೆಡಿಎಸ್ ಜತೆಗೆ ಮೈತ್ರಿ ಇಲ್ಲ
ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಬಗ್ಗೆ ಓವೈಸಿ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಸಾಧ್ಯವೇ ಇಲ್ಲ. ಅವರು ಅವರ ಕೆಲಸ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಕಳೆದ ಬಾರಿ ಎಚ್.ಡಿ. ಕುಮಾರಸ್ವಾಮಿ ನಮ್ಮ ಸಿಎಂ ಜತೆಗೆ ಮಾತನಾಡಿದ್ದರು. ಹೀಗಾಗಿ ಪ್ರಚಾರ ಮಾಡಿದ್ದೆವು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿಯ ಮಾತಿಲ್ಲ, ಎಐಎಂಐಎಂ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | ʼBharat Jodoಗೆ ಯಾರು ಕೆಲಸ ಮಾಡಿದ್ದಾರೆ ಎಂಬ ದಾಖಲೆ ಇದೆʼ: ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ ಡಿಕೆಶಿ ಮಾತು
ಕಾಂಗ್ರೆಸ್‌ನ ಸದ್ಯದ ಸ್ಥಿತಿಗೆ ಅವರ ನಾಯಕರೇ ಕಾರಣ
ನಾವು ಬಿಜೆಪಿ ಟೀಂ ಅಲ್ಲವೇ ಅಲ್ಲ, ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿಗೆ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಕಾರಣ. ನಮಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ, ನಾವು ಬಿಜೆಪಿ ಬಿ ಟೀಂ ಅಲ್ಲ. ಕರ್ನಾಟಕ, ಗುಜರಾತ್, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ಓಡಿ ಹೋಗಿದ್ದಾರೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತರೇ ನಾನು ಜವಾಬ್ದಾರಿಯಾ? ರಾಜಸ್ಥಾನದ ಕಾಂಗ್ರೆಸ್‌ನಲ್ಲಿ ಈಗಲೂ ತಿಕ್ಕಾಟ ನಡೆಯುತ್ತಿದೆ. ಇದಕ್ಕೆಲ್ಲ ನಾವು ಕಾರಣರಲ್ಲ. ಕಾಂಗ್ರೆಸ್‌ನ ಕಳಪೆ ನಾಯಕತ್ವದಿಂದಲೇ ಮೋದಿ ಎರಡು ಬಾರಿ ಪ್ರಧಾನಿಯಾಗಿದ್ದು ಎಂದರು.
ಪ್ರಧಾನಿ ನರೇಂದ್ರ ಮೋದಿ ಚೀನಾ ಬಗ್ಗೆ ಮಾತನಾಡಲ್ಲ
ಪ್ರಧಾನಿ ನರೇಂದ್ರ ಮೋದಿ ಗಡಿ ಭಾಗದಲ್ಲಿ ಯೋಧರ ಜತೆ ದೀಪಾವಳಿ ಆಚರಣೆ ಮಾಡಿದ್ದಕ್ಕೆ ಸಂತಸ ಪಡುತ್ತೇನೆ. ಆದರೆ, ಚೀನಾ ಗಡಿಯಲ್ಲಿ ನುಸುಳಿ 10 ಕಿ.ಮೀ. ನಷ್ಟು ಭಾರತದ ನೆಲವನ್ನು ಆಕ್ರಮಿಸಿಕೊಂಡಿದೆ. ಈ ಬಗ್ಗೆ ಪ್ರಧಾನಿ ಏನೂ ಮಾತನಾಡಿಲ್ಲ. ನಮ್ಮ ನೆಲ ಆಕ್ರಮಿಸಿಕೊಂಡಿದ್ದಕ್ಕೆ ಚೀನಾಗೆ ಎಚ್ಚರಿಕೆ ನೀಡಬೇಕಿತ್ತು. ಆದರೆ, ಬೇರೆ ದೇಶಗಳ ಹೆಸರನ್ನು ಬಳಸಿಕೊಳ್ಳುವ ಪ್ರಧಾನಿ, ಚೀನಾದ ಬಗ್ಗೆ ಮಾತನಾಡುತ್ತಿಲ್ಲ. ದೇಶದಲ್ಲಿ ನಿರುದ್ಯೋಗ ಕಡಿಮೆ ಮಾಡಲು ಹಾಗೂ ಬೆಲೆ ಏರಿಕೆ ನಿಯಂತ್ರಣಕ್ಕೆ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಎಂದು ಹರಿಹಾಯ್ದರು.
ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿ
ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಪಾಕಿಸ್ತಾನ ಹೆಸರು ಉಲ್ಲೇಖ ಮಾಡುತ್ತಾರೆ. ಪಾಕಿಸ್ತಾನದ ಮೇಲೆ ಅವರಿಗೆ ಪ್ರೀತಿ ಇದೆ. ಯಾಕೆ ಇದೇ ಎಂಬುವುದು ಅವರಿಗೆ ಗೊತ್ತು, ಆದರೆ ನನಗೆ ಗೊತ್ತಿಲ್ಲ. ಯತ್ನಾಳ್‌ಗೆ ಪ್ರಧಾನಿ ಮೋದಿ ಹೇಳಿಕೊಟ್ಟಿರಬಹುದು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | SCST ಮೀಸಲಾತಿ | ಕಾಕಾ ಕಾಲೇಲ್ಕರ್ ಸಮಿತಿಯಿಂದ ಮಂಡಲ್‌ವರೆಗೆ BJP ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ