ಬೆಂಗಳೂರು: ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಇಂದು ಆಶಾ ಕಾರ್ಯಕರ್ತೆಯರು ಆಗಮಿಸುತ್ತಿದ್ದು, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ನಡೆಸಲಿದ್ದಾರೆ.
ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರೂ ಸೂಕ್ತವಾಗಿ ಸ್ಪಂದಿಸದ ಕಾರಣದಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘಟನೆ ತಿಳಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ಕೂಡ ಆಶಾ ಕಾರ್ಯಕರ್ತೆಯರು ರಾಜಧಾನಿಯಲ್ಲಿ ಜಮಾಯಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು.
ಬೇಡಿಕೆಗಳೇನು?
೧. ಸಮಯಕ್ಕೆ ಸರಿಯಾಗಿ ಒಟ್ಟಾಗಿ ಸೇರಿಸಿ ಮಾಸಿಕ 12 ಸಾವಿರ ರೂ. ನೀಡಬೇಕು.
೨. ನಗರ-ಪಟ್ಟಣ ಆಶಾ ಕಾರ್ಯಕರ್ತೆಯರ ಕಾರ್ಯವ್ಯಾಪ್ತಿ ಹೆಚ್ಚಿರುವ ಕಾರಣ ಗೌರವಧನ ಹೆಚ್ಚಿಸಬೇಕು.
೩. ಅನಾರೋಗ್ಯಕ್ಕೊಳಗಾದ ಕಾರ್ಯಕರ್ತೆಯರಿಗೆ ಚಿಕಿತ್ಸೆಗೆ ಸಹಾಯ ನೀಡಬೇಕು.
೪. ಸ್ವಯಂಸೇವಾ ನಿವೃತ್ತಿ ಹೊಂದಿದವರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ನೀಡಲಾಗುವ ಇಡಿಗಂಟನ್ನು 3 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.
೫. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಕೋವಿಡ್‌ನಲ್ಲಿ ಕಾರ್ಯನಿರ್ವಹಿಸಿದ ಕರ್ತವ್ಯಕ್ಕೆ ಇನ್ಸೆಂಟಿವ್ ಬಿಡುಗಡೆ ಮಾಡಬೇಕು.
೬. ಸುಗಮಗಾರ್ತಿಯರ ಗೌರವ ಧನ- ಭತ್ಯೆ ನೀಡಬೇಕು ಎಂಬುದು ಆಶಾ ಕಾರ್ಯಕರ್ತೆಯರ ಬೇಡಿಕೆಗಳಾಗಿವೆ.
ಸಾವಿರಾರು ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಸುತ್ತಮುತ್ತ ಜಮಾಯಿಸಲಿರುವುದರಿಂದ ಟ್ರಾಫಿಕ್ ವ್ಯವಸ್ಥೆಯಲ್ಲಿ ತುಸು ಅಸ್ತವ್ಯಸ್ತತೆ ಸೃಷ್ಟಿಯಾಗುವುದನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ | ರಾಜಧಾನಿಗೆ ಆಶಾ ಕಾರ್ಯಕರ್ತೆಯರ ಲಗ್ಗೆ, ಬೇಡಿಕೆ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ