Site icon Vistara News

Siddheshwar Swamiji : ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ, ನಾವೇ ವಿಸರ್ಜನೆ ಮಾಡುತ್ತೇವೆ: ಬಸವಲಿಂಗ ಶ್ರೀ

ವಿಜಯಪುರ: ನಾಡು ಕಂಡ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ (Siddheshwar Swamiji) ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಗುರುವಾರ (ಡಿ.೫) ಸರಳ ವಿಧಿ-ವಿಧಾನಗಳ ಮೂಲಕ ಚಿತಾಭಸ್ಮವನ್ನು ವಿಸರ್ಜನೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡಲಾಗುತ್ತಿದೆ. ಸ್ವಾಮೀಜಿಗಳ ಚಿತಾಭಸ್ಮವನ್ನು ಯಾರು ನದಿ ಹಾಗೂ ಸಾಗರದಲ್ಲಿ ವಿಸರ್ಜನೆ ಮಾಡಲು ಇಚ್ಛೆ ಪಡುತ್ತಾರೋ ಅವರು ಹೆಸರು ನೋಂದಾಯಿಸಿ ಎಂದು ಎಂದು ಮಂಗಳವಾರ (ಡಿ. ೩) ರಾತ್ರಿ ನಡೆದ ಅಂತ್ಯಕ್ರಿಯೆ ವೇಳೆ ಕನ್ಹೇರಿ ಮಠದ ಸ್ವಾಮೀಜಿಗಳು ಹೇಳಿಕೆ ನೀಡಿದ್ದರು.

ಆದರೆ, ಬುಧವಾರ (ಡಿ. ೪) ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಸವಲಿಂಗ ಸ್ವಾಮೀಜಿ, ಯಾವುದೇ ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ನೀಡಲಾಗುವುದಿಲ್ಲ. ಸಿದ್ದೇಶ್ವರ ಸ್ವಾಮೀಜಿಗಳ ಅಣತಿಯಂತೆ ನಾವು ನಡೆದುಕೊಳ್ಳಬೇಕಿದೆ. ಹೀಗಾಗಿ ನಾವು ಸ್ವಾಮೀಜಿಯವರ ಚಿತಾಭಸ್ಮವನ್ನು ನೀಡುವುದಿಲ್ಲ ಎಂದು ಹೇಳಿದರು.

ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿಯನ್ನು ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು, ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು. ಚಿತಾಭಸ್ಮವನ್ನು ಯಾವ ನದಿ, ಸಮುದ್ರದಲ್ಲಿ ವಿಸರ್ಜನೆ ಮಾಡಬೇಕೆಂಬುದರ ಕುರಿತು ಚರ್ಚೆ ಮಾಡುತ್ತೇವೆ. ಆಶ್ರಮದಲ್ಲಿರುವ ನಾವೆಲ್ಲ ಸ್ವಾಮೀಜಿಗಳು ಸೇರಿ ಚರ್ಚೆ ಮಾಡಿ ಮುಂದೇನು ಎಂಬ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಈ ಕುರಿತು ಕನ್ಹೇರಿ ಮಠದ ಶ್ರೀಗಳು ಹಾಗೂ ಸುತ್ತೂರು ಮಠದ ಶ್ರೀಗಳು ಸೇರಿದಂತೆ ಇತರ ಸ್ವಾಮೀಜಿಗಳ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಸಭೆಯ ಬಳಿಕ ಚಿತಾಭಸ್ಮ ವಿಸರ್ಜನೆಯ ಕುರಿತು ನಿರ್ಧಾರ ಮಾಡುತ್ತೇವೆ. ಮೂರು ದಿನಗಳ ನಂತರ ಅಂದರೆ ಗುರುವಾರ (ಡಿ.೫) ಸರಳ ವಿಧಿ-ವಿಧಾನಗಳ ಆಚರಣೆಯ ಮೂಲಕ ಚಿತಾಭಸ್ಮದ ವಿಸರ್ಜನೆಗೆ ಮುಂದಾಗುತ್ತೇವೆ ಎಂದು ಬಸವಲಿಂಗ ಸ್ವಾಮೀಜಿ ಹೇಳಿಕೆ ನೀಡಿದರು.

ಇದನ್ನೂ ಓದಿ | Murugha seer case | ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರವೇ ನಡೆದಿಲ್ಲ ಎನ್ನುತ್ತಿದೆ ವೈದ್ಯಕೀಯ ವರದಿ!

Exit mobile version