Site icon Vistara News

Power Point with HPK : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 1 ಸ್ಥಾನ ಗೆಲ್ಲಲಿ: ಅಶ್ವತ್ಥನಾರಾಯಣ ಸವಾಲು!

Ashwath Narayana in Power point with HPK

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ ಕಳೆದ ಬಾರಿಯಂತೆ ಒಂದು ಸೀಟು ಗೆದ್ದರೆ ಆಶ್ಚರ್ಯ ಪಡಬೇಕು. ಅದೇ ಅವರ ದೊಡ್ಡ ಸಾಧನೆಯಾಗಲಿದೆ. ರಾಜ್ಯದಲ್ಲಿ ಈಗಲೂ ಅದೇ ಪರಿಸ್ಥಿತಿ ಇದೆ. ದೇಶದ ಹಾಗೂ ಕರ್ನಾಟಕದ ಎಲ್ಲ ನಾಗರಿಕರಿಗೂ ಮತ್ತೊಮ್ಮೆ ನರೇಂದ್ರ ಮೋದಿ (PM Narendra Modi) ಅವರನ್ನು ಅಧಿಕಾರಕ್ಕೆ ತರಬೇಕು ಎಂಬ ಮನಸ್ಥಿತಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ 28ಕ್ಕೆ 28 ಕ್ಷೇತ್ರವನ್ನೂ ಬಿಜೆಪಿ ಗೆಲ್ಲಲಿದೆ ಎಂದು ಬೆಂಗಳೂರಿನ ಮಲ್ಲೇಶ್ವರ ಶಾಸಕ, ಮಾಜಿ ಡಿಸಿಎಂ ಡಾ. ಸಿ.ಎನ್.‌ ಅಶ್ವತ್ಥನಾರಾಯಣ (Dr CN Ashwathnarayan) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಡಾ. ಸಿ.ಎನ್.‌ ಅಶ್ವತ್ಥನಾರಾಯಣ, ರಾಹುಲ್‌ ಗಾಂಧಿ (Rahul Gandhi) ಅವರಿಗೆ ಮತ ಹಾಕಲು ಆಗುತ್ತದೆಯೇ? ಅವರನ್ನು ಪ್ರಧಾನ ಮಂತ್ರಿ ಮಾಡಲು ಆಗುತ್ತದೆಯೇ? ಅಥವಾ ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು ಪ್ರಧಾನಿ ಮಾಡಲು ಆಗುತ್ತದೆಯೇ? ಇವರನ್ನು ಮಾಡಿದರೆ ಏನಾಗುತ್ತದೆ ಎಂಬ ಅರಿವು ಜನರಿಗೆ ಇದೆ. ಅವರು ಪ್ರಬುದ್ಧರಿದ್ದಾರೆ. ಹಾಗಾಗಿ ರಾಹುಲ್‌ ಗಾಂಧಿ ಅವರು ಪ್ರಧಾನಿಯಾಗಲು ಯಾರೂ ಒಪ್ಪಲಾರರು. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಜನರ ಆಯ್ಕೆಯಾಗಿದ್ದು, ನರೇಂದ್ರ ಮೋದಿ ಅವರನ್ನೇ ಜನ ಆಯ್ಕೆ ಮಾಡುತ್ತಾರೆ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ, ಹೇಳಿದರು.

ರೈತ ವಿರೋಧಿ ಸರ್ಕಾರ

ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಸರ್ಕಾರ (Congress Government) ರೈತ ವಿರೋಧಿಯಾಗಿದೆ. ಕಾವೇರಿ ನದಿ ನೀರನ್ನು (Cauvery River Water) ತಮಿಳುನಾಡಿಗೆ ಬಿಟ್ಟಿದ್ದಾರೆ. ಆದರೆ, ತಮಿಳುನಾಡಿನವರು ಮಳೆ ಕೊರತೆ ಇದ್ದರೂ ನಮ್ಮ ಕಾವೇರಿ ನೀರನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರಿಗೆ ಸಮಯ ಇಲ್ಲ. ತಮಿಳುನಾಡಿಗೆ ನೀರು ಬಿಟ್ಟ ಮೇಲೆ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಎಷ್ಟರ ಮಟ್ಟಿಗೆ ಇವರ ಪ್ರಯತ್ನ ನಡೆದಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಸುಪ್ರೀಂ ಕೋರ್ಟ್‌ (Supreme Court) ಮುಂದೆ, ಕಾವೇರಿ ಪ್ರಾಧಿಕಾರದ ಮುಂದೆ ಕರ್ನಾಟಕ ರಾಜ್ಯದ ಹಕ್ಕನ್ನು ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲಿ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ನಮ್ಮಲ್ಲಿ ಒಂದು ಬೆಳೆ ಬೆಳೆಯಲೂ ನೀರಿಲ್ಲ. ಕುಡಿಯಲೂ ಸಮಸ್ಯೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಟ್ಟರೆ ಹೇಗೆ? ಹೀಗಾಗಿ ಈ ಭಾಗದ ಜನರು ಆಕ್ರೋಶಗೊಂಡಿದ್ದಾರೆ. ಬಿಜೆಪಿ ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಎಲ್ಲ ಕಾರಣಗಳಿಂದ ಹಳೇ ಮೈಸೂರು ಭಾಗದ ಜನರು ಲೋಕಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ಇದನ್ನೂ ಓದಿ: Power Point with HPK : ಭ್ರಷ್ಟ, ಕೀಳುಮಟ್ಟದ, ಅಸಮರ್ಥ ಸರ್ಕಾರ ಅಧಿಕಾರಕ್ಕೆ ಬಂದಿದೆ: ಅಶ್ವತ್ಥನಾರಾಯಣ

ಪಕ್ಷಕ್ಕೆ ಹೊಸ ಆಯಾಮ ಕೊಡುವ ಪ್ರಯತ್ನದಲ್ಲಿ ವರಿಷ್ಠರು

ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಹಲವು ನಾಯಕರಿಗೆ ಇದೆ. ಇದಕ್ಕೊಂದು ಕಾರ್ಯತಂತ್ರವನ್ನು ಹೆಣೆಯಲು ವರಿಷ್ಠರು ಬಹುಶಃ ಮುಂದಾಗಿದ್ದಾರೆ. ಕಳೆದ ಬಾರಿ ಸೋಲನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ರೂಪ, ಆಯಾಮವನ್ನು ಕೊಡುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ನನ್ನ ಪ್ರಕಾರ ಸ್ವಲ್ಪ ಸಮಯವನ್ನು ವರಿಷ್ಠರು ತೆಗೆದುಕೊಂಡಿದ್ದಾರೆ. ಕಾರಣ ಇಲ್ಲದೆ ವಿಳಂಬ ಆಗುವುದಿಲ್ಲ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

Exit mobile version