ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಟಿಪ್ಪು ಸುಲ್ತಾನ್ ಮಾದರಿಯಲ್ಲಿ ಹೊಡೆದು ಹಾಕಬೇಕು ಎಂದು ನೀಡಿರುವ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ (Ashwathnarayan) ಅವರು ಸ್ಪಷ್ಟೀಕರಣ ನೀಡಿದ್ದು, ನಾನು ಹೇಳಿರುವುದು ರಾಜಕೀಯ ಅರ್ಥದಲ್ಲಿಯೇ ವಿನಃ ಬೇರೇನೂ ಅಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂಬರ್ಥದಲ್ಲಿ ನಾನು ಹೇಳಿದ್ದೇನೆ. ಅದಕ್ಕೆ ಸಿದ್ದರಾಮಯ್ಯ ಅವರು “ಕೋವಿ ಹಿಡಿದು ಬನ್ನಿ” ಎಂದು ಹೇಳಿದ್ದಾರೆ ಎಂದಿರುವ ಸಚಿವರು, ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದೂ ಹೇಳಿದ್ದಾರೆ. ಚುನಾವಣೆ (Karnataka Election) ಹೊಸ್ತಿಲಲ್ಲಿ ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಅಶ್ವತ್ಥನಾರಾಯಣ, “ಈ ಬಾರಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎಂಬರ್ಥದಲ್ಲಿ ನಾನು ಹೇಳಿದ ಮಾತಿಗೆ “ಕೋವಿ ಹಿಡಿದು ಬನ್ನಿ” ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ನಮಗೆ ಮತಯಂತ್ರವೇ ಕೋವಿ, ಮತದಾರರು ಕಾಂಗ್ರೆಸ್ ವಿರುದ್ಧ ಒತ್ತುವ ಒಂದೊಂದು ಮತಗಳೂ ಒಂದೊಂದು ಬುಲೆಟ್‌ಗಳೇ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅಂತಿಮ ಮೊಳೆ ಹೊಡೆಯಲು ಜನತೆಯೇ ತೀರ್ಮಾನಿಸಿದ್ದಾರೆ” ಎಂದು ಹೇಳಿದ್ದಾರೆ.
ಇತಿಹಾಸ ತಿರುಚಿ, ಮತಾಂಧ ಟಿಪ್ಪುವಂಥವರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಬಿಂಬಿಸಿದ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ನನ್ನ ಮಾತನ್ನು ತಿರುಚಿ ಬಿತ್ತರಿಸುವುದು ಐದು ನಿಮಿಷದ ಕೆಲಸ. ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಕ್ಷೇತ್ರ ಸಿಗದೇ, ಮಾನಸಿಕವಾಗಿ ಕುಗ್ಗಿರುವ ಸಿದ್ದರಾಮಯ್ಯ ಅವರಿಗೆ ಕ್ಷುಲ್ಲಕ ವಿಷಯಗಳೇ ಆಸರೆಯಾಗಿದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: Vegetarian politics : ಸಿದ್ದರಾಮಯ್ಯ ಬಳಿಕ ಡಿ.ಕೆ. ಶಿವಕುಮಾರ್ ಕೂಡಾ ಸಂಪೂರ್ಣ ಸಸ್ಯಾಹಾರಿ; ನಾನ್‌ವೆಜ್ ಬಿಟ್ಟಿದ್ದೇಕೆ?
ಮಂಡ್ಯದಲ್ಲಿ ಕಸಬಾ ಮಹಾಶಕ್ತಿ ಕೇಂದ್ರದ ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡುವಾಗ ಟಿಪ್ಪು ಕುರಿತಾದ ಹೇಳಿಕೆಯನ್ನು ನೀಡಿದೆ. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಮಾಡುತ್ತಿದೆ. ಅದನ್ನು ಖಂಡಿಸುವಂತೆ ಆಗಬೇಕು. ಬರುವ ಚುನಾವಣೆಯಲ್ಲಿ ಜನರ ಬೆಂಬಲವನ್ನು ನಮ್ಮ ಪರವಾಗಿ ಪಡೆದುಕೊಳ್ಳಬೇಕು. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ಯುದ್ಧದ ಕಾಲದಲ್ಲಿ ಇಲ್ಲ, ಪ್ರಜಾಪ್ರಭುತ್ವದಲ್ಲಿ ಗೆಲ್ಲಬೇಕಿದೆ. ಆ ವಿಚಾರವಾಗಿ ಹೇಳಿದ್ದೇನೆಯೇ ಹೊರತು ಬೇರೆಯ ರೀತಿ ಅಲ್ಲ. ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇನೆಯೇ ವಿನಃ ವೈಯಕ್ತಿಕವಾಗಿ ಅಲ್ಲ. ಓಲೈಕೆ ಮಾಡುವ ಪಕ್ಷವನ್ನು ಸೋಲಿಸಬೇಕು. ಬಿಜೆಪಿಯನ್ನು ಗೆಲ್ಲಿಸಬೇಕು ಅನ್ನೋದಷ್ಟೇ ನನ್ನ ಮಾತಿನ ಉದ್ದೇಶ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ. ಇವರ ಹಾಗೆ ಸಿಎಂಗೆ ನಾಯಿ, ಪ್ರಧಾನಿಗೆ ನರಹಂತಕ ಎಂದು ನಾನು ಕರೆದಿಲ್ಲ. ಜಾತಿ, ಧರ್ಮ ಆಧಾರಿತವಾಗಿ ಸಮಾಜ ಒಡೆಯುವ ಕೆಲಸವನ್ನೂ ನಾನು ಮಾಡಿಲ್ಲ. ಇವರ ಹಾಗೆ ವೈಯಕ್ತಿಕವಾಗಿ ವಿರೋಧ ಮಾಡಿಲ್ಲ. ಮತ ಗೆಲ್ಲಬೇಕೇ ವಿನಃ ಮತ್ತೆ ಬೇರೇನೂ ಅಲ್ಲ ಎಂದು ಅಶ್ವತ್ಥನಾರಾಯಣ ಸ್ಪಷ್ಟನೆ ನೀಡಿದರು.
ಅಶ್ವತ್ಥನಾರಾಯಣ ಹೇಳಿದ್ದೇನು?
ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯ ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ? ಇಲ್ಲವೇ ಟಿಪ್ಪು ಬೇಕಾ? ನೀವೇ ತೀರ್ಮಾನವನ್ನು ತೆಗೆದುಕೊಳ್ಳಿ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳುತ್ತಿದ್ದಂತೆ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರೆಲ್ಲರೂ, ನಮಗೆ ಸಾವರ್ಕರ್ ಬೇಕು ಎಂದು ಹೇಳಿದ್ದಾರೆ. ಮತ್ತೆ ಮತ್ತೆ ಇದನ್ನೇ ಕೇಳಿದಾಗಲೂ ಎಲ್ಲರೂ ಸಾವರ್ಕರ್ ಎಂದೇ ಉತ್ತರಿಸಿದ್ದಾರೆ.
ಆಗ ಮತ್ತೆ ಮಾತನಾಡಿದ ಸಚಿವರು, ಹಾಗಾದರೆ ಟಿಪ್ಪು ಸುಲ್ತಾನನ್ನು ಎಲ್ಲಿಗೆ ಕಳುಹಿಸಬೇಕು? ಟಿಪ್ಪುವನ್ನು ಉರಿಗೌಡ, ನಂಜೇಗೌಡ ಏನ್ ಮಾಡಿದರು? ಎಂದು ಕೇಳಿದರು. ಆಗ ಅಲ್ಲಿನ ಕಾರ್ಯಕರ್ತರು ಹೊಡೆದು ಹಾಕಿದರು ಎಂದು ಉತ್ತರಿಸಿದರು. ಆಗ ಸಚಿವರು, “ಹೌದು. ಟಿಪ್ಪುವನ್ನು ಉರಿಗೌಡ, ನಂಜೇಗೌಡ ಹೊಡೆದು ಹಾಕಿದಂತೆ ಇವರನ್ನೂ ಹೊಡೆದು ಹಾಕಬೇಕು ಎಂದು ಹೇಳುತಾ, ನಮ್ಮತನವನ್ನು ನಾವು ಕಾಪಾಡಬೇಕೆಂದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಯತ್ನಾಳ್ ವಿರೋಧ
ರಾಜಕಾರಣದಲ್ಲಿ ಟೀಕೆಗಳು ಇರುತ್ತವೆ. ಆದರೆ ಹೊಡೆದು ಹಾಕುತ್ತೇನೆ, ಕೊಲೆ ಮಾಡುತ್ತೇನೆ ಎಂದು ಹೇಳುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ನನ್ನ ಮೇಲೂ ಒಬ್ಬ ಹೀಗೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದ. ಯಾವುದೇ ರಾಜಕಾರಣಿಗಳು ಸಹ ಈ ರೀತಿಯ ಹೇಳಿಕೆಯನ್ನು ಕೊಡಬಾರದು. ರಾಜಕೀಯದಲ್ಲಿ ಏನೇ ಇದ್ದರೂ ಸಿದ್ಧಾಂತದ ಮೇಲೆ ಟೀಕೆಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸದನದಲ್ಲಿ ಪ್ರಶ್ನೆ ಮಾಡ್ತೇವೆ- ಪ್ರಿಯಾಂಕ್ ಖರ್ಗೆ
ಸರ್ಕಾರದ ಬಳಿ ಹೇಳಿಕೊಳ್ಳಲು ಸಾಧನೆಗಳು ಏನಿಲ್ಲ. ಇತಿಹಾಸವನ್ನೂ ಓದುವುದಿಲ್ಲ. ಕೇಶವಕೃಪ ಬುಕ್‌ನಲ್ಲಿ ಇರುವುದನ್ನು ಹೇಳುತ್ತಾರೆ. ಈಗ ಎಲ್ಲರೂ ಹತಾಶರಾಗಿದ್ದಾರೆ. ನಾಳೆ ಸೋಲು ಕಂಡರೆ ಇವರ ಮೇಲೆ ಬರಬಾರದಲ್ಲವಾ? ಅದಕ್ಕೆ ರೀತಿ ಮಾತಾಡುತ್ತಾರೆ, ನೋಡಿ ಸರ್ ನಾನು ಹೊಡೆದುಹಾಕಿ ಎಂದು ಕರೆ ಕೊಟ್ಟಿದ್ದೇನೆ ಎಂದು ಹೇಳಬೇಕಲ್ಲವೇ? ಹಾಗಾಗಿ ಈ ರೀತಿಯ ಉತ್ತರ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Karnataka Election : ಭ್ರಷ್ಟಾಸುರ ಬೊಮ್ಮಾಯಿ; ಕಾಂಗ್ರೆಸ್ ನಾಯಕ ಸುರ್ಜೇವಾಲ ವಾಗ್ದಾಳಿ; ಸರ್ಕಾರಕ್ಕೆ ಪ್ರಶ್ನಾವಳಿ
ಅಶ್ವತ್ಥ ನಾರಾಯಣ ಅವರು ಮೊದಲು ಈ ರೀತಿಯ ಇರಲಿಲ್ಲ. ಈಗ ಬದಲಾಗಿದ್ದಾರೆ. ಇಡಿ ಸದನವನ್ನು ಕೇಶವಕೃಪ ಕಂಟ್ರೋಲ್ ಮಾಡುತ್ತದೆ. ನಾವು ಇದನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ. ವಿಪಕ್ಷ ನಾಯಕರಿಗೆ ಹಿಂದೆ ಮೊಟ್ಟೆ ಎಸೆದಿದ್ದರು. ಈಗ ಹೊಡೆದು ಹಾಕಿ ಎಂದು ಹೇಳಿದ್ದಾರೆ. ಒಬ್ಬ ಕ್ಯಾಬಿನೆಟ್ ಮಿನಿಸ್ಟರ್ ಈ ರೀತಿ ಹೇಳಿದರೆ ಹೇಗೆ? ಎಂದು ಪ್ರಶ್ನೆ ಮಾಡಿದರು.