ರಾಮನಗರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕನಕಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆರ್. ಅಶೋಕ್ ಸ್ಪರ್ಧೆ ಮಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಗೆಲುವು ಸಾಧಿಸಲಿದ್ದಾರೆ. ಕನಕಪುರದಲ್ಲಿ ಡಿಕೆಶಿ ವಿರುದ್ಧದ ಅಲೆ ಇದೆ. ಅಲ್ಲಿನ ಜನ ಕಾಂಗ್ರೆಸ್ಸೂ ಸಾಕು, ಶಿವಕುಮಾರೂ ಸಾಕು, ಬಿಜೆಪಿ ಬೇಕು ಎಂದು ಹೇಳುತ್ತಿದ್ದಾರೆಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.
ಅವರು ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆರ್. ಅಶೋಕ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ವರಿಷ್ಠರು ನಿರ್ಧಾರ ಮಾಡಿ ಅವರನ್ನು ಕನಕಪುರದಿಂದ ಕಣಕ್ಕೆ ಇಳಿಸಿದ್ದಾರೆ. ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಲೆ ಇದೆ. ಜನರಿಗೆ ಅವರ ಮೇಲೆ ಸಂಪೂರ್ಣ ಅತೃಪ್ತಿ ಇದೆ. ಹಾಗಾಗಿ ಅಲ್ಲಿ ಬಿಜೆಪಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ. ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Elections 2023 : ಬಿಎಸ್‌ವೈ ಕರೆಗೆ ಕರಗಿದ ರಘುಪತಿ ಭಟ್; ಯಶ್ಪಾಲ್ ಸುವರ್ಣ 60 ಸಾವಿರ ಮತದಲ್ಲಿ ಗೆಲ್ತಾರೆ ಅಂದ್ರು
ಎಲ್ಲ ಕಡೆಯಲ್ಲೂ ಸಂಘಟನೆ ಮಾಡಿ ಗೆಲುವು ಸಾಧಿಸುತ್ತೇವೆ. ಎಲ್ಲರೂ ಡಿ.ಕೆ. ಶಿವಕುಮಾರ್ ಬಗ್ಗೆ ಸಾಕಪ್ಪ ಸಾಕು ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷದವರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಲ್ಲ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.
ಬಿಜೆಪಿ ಅಭ್ಯರ್ಥಿಗೆ ಒಳ್ಳೇ ಆಥಿತ್ಯ ಕೊಡುತ್ತೇವೆ ಎಂಬ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆ ಆಥಿತ್ಯವನ್ನೂ ಸ್ವೀಕರಿಸುತ್ತೇವೆ. ಮಿಲ್ಟ್ರಿ ಹೋಟೆಲ್ ಊಟಾನೂ ಮಾಡುತ್ತೇವೆ. ವೋಟನ್ನೂ ಪಡೆಯುತ್ತೇವೆ. ಈ ಬಾರಿ ಜಯಭೇರಿ ನಮ್ಮದೇ ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡರ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ. ಆದರೆ, ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಹಾಗಾಗಿ ಏನೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇವೆ. ಜನರು ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಜನರ ಭಾವನೆಗಳನ್ನು ಗೌರವಿಸುವ ನಮ್ಮ ಪಕ್ಷ ಗೆಲ್ಲುವುದು ನಿಶ್ಚಿತ. ಹಾಗಾಗಿ ಎಲ್ಲ ಅಸಮಾಧಾನಗಳನ್ನು ಸರಿಪಡಿಸುವ ಶಕ್ತಿ ನಮಗಿದೆ ಎಂದು ಹೇಳಿದರು.