ರಾಮನಗರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ಪ್ರತಿ ಕಾರ್ಯಕ್ರಮಗಳು ಪಕ್ಷಗಳ ಪ್ರಚಾರದ ವೇದಿಕೆಯಾಗಿ ಪರಿವರ್ತನೆಯಾಗುತ್ತಿದೆ. ಈಗ ಹಾರೋಹಳ್ಳಿ ಹೊಸ ತಾಲೂಕು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರು ತಮ್ಮ ಸರ್ಕಾರದ ಸಾಧನೆ ಬಗ್ಗೆ ಆಡಿದ ಮಾತಿಗೆ ವೇದಿಕೆಯಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಹಾರೋಹಳ್ಳಿ ಹೊಸ ತಾಲೂಕು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಹಾರೋಹಳ್ಳಿ ತಾಲೂಕಿನ ರಚನೆಗೆ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಾತ್ವಿಕ ಅನುಮೋದನೆ ಕೊಟ್ಟಿದ್ದರು. ನಮ್ಮ ಸರ್ಕಾರದಲ್ಲಿ 12 ತಾಲೂಕು ಘೋಷಣೆ ಆಗಿವೆ. ಆದರೆ, ಅಂತಿಮ ಅಧಿಸೂಚನೆ ಮೂಲಕ ರಾಜ್ಯದಲ್ಲಿ ಎರಡು ತಾಲೂಕು ಅಸ್ತಿತ್ವಕ್ಕೆ ಬಂತು. ಬಂತು, ಅದರಲ್ಲಿ ಹಾರೋಹಳ್ಳಿಯೂ ಒಂದು. ಎಂಜಿನಿಯರಿಂಗ್ ಕಾಲೇಜು, ಕೈಗಾರಿಕಾ ಅಭಿವೃದ್ಧಿಯನ್ನು ನಾವು ಮಾಡಿದ್ದೇವೆ ಎಂದು ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹೇಳುತ್ತಿದ್ದಂತೆ ವೇದಿಕೆಯಲ್ಲಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ರಾಮನಗರದಲ್ಲಿ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ತೆರೆಯುವ ಬಗ್ಗೆ ಹಲವು ವರ್ಷಗಳ ಬೇಡಿಕೆ ಇತ್ತು. ಇಂದು ಕಾಲೇಜಿನ ಜತೆಗೆ ಆಸ್ಪತ್ರೆ ಸಹ ಆಗುತ್ತಿದೆ. ಅತಿ ಶೀಘ್ರದಲ್ಲಿ ನಮ್ಮ ಮುಖ್ಯಮಂತ್ರಿ ಇವುಗಳ ಕಾರ್ಯರೂಪಕ್ಕೆ ಚಾಲನೆ ನೀಡಲಿದ್ದಾರೆ. ಕೈಗಾರಿಕೆಗಳನ್ನು ಸಹ ಅಭಿವೃದ್ಧಿಪಡಿಸುತ್ತಿದ್ದೇವೆ. ಕೇವಲ ಭರವಸೆ, ಘೋಷಣೆಗಳನ್ನು ಮಾತ್ರವೇ ನಾವು ಮಾಡಲಿಲ್ಲ ಎಂದು ಹೇಳುತ್ತಿದ್ದಂತೆ, ಸಿಡಿಮಿಡಿಗೊಂಡ ಅನಿತಾ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಮಧ್ಯವೇ ವೇದಿಕೆಯಲ್ಲಿ ನಿಂತು ಮಾತನಾಡಿದ ಅವರು, “ಅವೆಲ್ಲವೂ ಕುಮಾರಸ್ವಾಮಿ ಅವರ ಕಾಲದಲ್ಲಿಯೇ ಆಗಿತ್ತು” ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ಆಯ್ತು ಮೇಡಂ ನೀವು ನಿಮ್ಮ ಭಾಷಣದಲ್ಲಿ ಅದರ ಬಗ್ಗೆ ಮಾತನಾಡಿ ಎಂದು ಹೇಳಿದರು.
ಅನಿತಾ ತಿರುಗೇಟು
ನಾನು ಈ ಕ್ಷೇತ್ರದ ಅಧ್ಯಕ್ಷತೆಯನ್ನು ವಹಿಸುವ ಸ್ಥಾನದಲ್ಲಿದ್ದೇನೆ. ಕಚೇರಿ ಉದ್ಘಾಟನೆ ಮಾಡಿ, ಟೇಪ್ ಕಟ್ ಮಾಡಿ ಆಗಿಹೋಗಿದೆ. ನನ್ನನ್ನು ಇಲ್ಲಿಗೆ ಕಾಟಾಚಾರಕ್ಕೆ ಕರೆದಿದ್ದಾರೆ ಎಂದು ಅನ್ನಿಸುತ್ತಿದೆ. ಈ ರೀತಿಯ ವರ್ತನೆ ಆಗಲಿದೆ ಎಂದು ನನಗೆ ಮೊದಲೇ ಗೊತ್ತಿತ್ತು. ಈ ತಾಲೂಕು ಆಗಬೇಕೆಂದರೆ ನನ್ನ ಶ್ರಮ ಹೆಚ್ಚಿದೆ. ಕುಮಾರಸ್ವಾಮಿ ಅವರ ಕಾಲದಲ್ಲಿ ಆದೇಶ ಆಗಿತ್ತು. ಆನಂತರ ನಾನು ಫಾಲೋಅಪ್ ಮಾಡಿ, ಅಶೋಕ್ ಅವರಿಗೆ ಸದನದಲ್ಲಿ ಪ್ರಶ್ನೆ ಮಾಡಿದೆ. ಅದಾದ ನಂತರ ಫೈನಲ್ ಆಗಿ ಅಧಿಸೂಚನೆಯನ್ನು ಹೊರಡಿಸಿದರು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರು ಇಲ್ಲಿ ಶಾಸಕರಾದ ಮೇಲೆ ಇಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ರಾಮನಗರ ಸಿಟಿಗೆ ಕುಡಿಯುವ ನೀರಿನ ಯೋಜನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಸ್ತಾಪ ಮಾಡಿದರು. ಆದರೆ, ಅಶ್ವತ್ಥನಾರಾಯಣ ಅವರ ಸರ್ಕಾರ ಬರುವ ಮೊದಲೇ ಮುಕ್ಕಾಲು ಭಾಗ ಕೆಲಸ ಆಗಿಯಾಗಿತ್ತು. ಇಂದು ಕುಮಾರಸ್ವಾಮಿ ಅವರು ಹಾರೋಹಳ್ಳಿ ತಾಲೂಕು ಕಚೇರಿ ಉದ್ಘಾಟನೆಗೆ ಬರಬೇಕಿತ್ತು. ನಾನು ಸಹ ಬರುವಂತೆ ಒತ್ತಾಯ ಮಾಡಿದ್ದೆ. ಆದರೆ, ಅವರು ಬರಲಿಲ್ಲ. ಒಂದು ವೇಳೆ ಬಂದಿದ್ದರೆ ಯಾರೂ ಇಲ್ಲಿ ಹೆಚ್ಚಿಗೆ ಮಾತನಾಡಲು ಆಗುತ್ತಿರಲಿಲ್ಲ ಎಂದು ಅನಿತಾ ಹೇಳಿದರು.
ನಾವು ನಾವೇ ಮಾಡಿದ್ದು, ನಾವೇ ಮಾಡಿದ್ದು ಅಂತ ಹೇಳಿಕೊಳ್ಳುವವರಲ್ಲ. ಹೆಚ್ಚಿಗೆ ಪ್ರಚಾರದ ಅವಶ್ಯಕತೆ ನಮಗಿಲ್ಲ. ಎಲ್ಲವೂ ಜನರಿಗೆ ಗೊತ್ತಿದೆ. ಇಂಡಸ್ಟ್ರಿಯಲ್ ಏರಿಯಾ ಮಾಡಿಸಿದ್ದು ಕುಮಾರಸ್ವಾಮಿ ಅವರು. ಈಗ ಮಾತನಾಡಿ ಹೋದರಲ್ಲವೇ ಅವರೆಲ್ಲರೂ ಇದ್ದರಾ? ಈ ಹಿಂದೆ ರಾಮನಗರ ಹೇಗಿತ್ತು, ಈಗ ಹೇಗಿದೆ? ಸರ್ಕಾರಿ ಬಿಲ್ಡಿಂಗ್‌ಗಳು ಎಲ್ಲವೂ ಅವಾಗಿಯೇ ಎದ್ದುಬಿಟ್ಟವಾ? ಇದೆಲ್ಲವನ್ನೂ ಮಾಡಿದ್ದು ಕುಮಾರಸ್ವಾಮಿ ಅವರಲ್ಲವೇ? ಸಚಿವರ ಅಶ್ವತ್ಥ ನಾರಾಯಣ ಅವರು ಮೊದಲು ಮಲ್ಲೇಶ್ವರಕ್ಕೆ ಹೋಗಿ ಅಲ್ಲಿನ ಅಭಿವೃದ್ಧಿ ಮಾಡಲಿ. ಆದರೆ, ಅವರು ಈಗ ಕಾರ್ಯಕ್ರಮದ ಅರ್ಧಕ್ಕೇ ಹೋದರು. ನನ್ನ ಭಾಷಣದ ವೇಳೆ ಅವರು ಇರಬೇಕಿತ್ತು ಎಂದು ಅನಿತಾ ಕುಟುಕಿದರು.
ಅಶ್ವತ್ಥ ನಾರಾಯಣ-ಅನಿತಾ ಕುಮಾರಸ್ವಾಮಿ ನಡುವಿನ ವಾಕ್ಸಮರದ ವಿಡಿಯೊ ಇಲ್ಲಿದೆ
ಇದನ್ನೂ ಓದಿ: BJP Karnataka: 24ಕ್ಕೆ ಪ್ರಗತಿ ರಥ ಚಾಲನೆ, 27ಕ್ಕೆ ಬೆಳಗಾವಿಗೆ ನರೇಂದ್ರ ಮೋದಿ ಭೇಟಿ: ಬಿಜೆಪಿಯಿಂದ ಭರ್ಜರಿ ಕಾರ್ಯಕ್ರಮಗಳು
ಹೊಸ ತಾಲೂಕಿನ ಚಿತ್ರಣವೇನು?
ರಾಮನಗರ ಜಿಲ್ಲೆಯ ಐದನೇ ತಾಲೂಕಾಗಿ ಹಾರೋಹಳ್ಳಿ ರಚನೆಯಾದಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಹಾರೋಹಳ್ಳಿಯು ಕನಕಪುರ ತಾಲೂಕಿನಿಂದ ಬೇರ್ಪಟ್ಟಂತೆ ಆಗಿದೆ. ನೂತನ ತಾಲೂಕಿನಲ್ಲಿ ಒಟ್ಟು 94,613 ಜನಸಂಖ್ಯೆ ಇದೆ. ಒಂದು ಪಟ್ಟಣ ಪಂಚಾಯಿತಿ, ಹಾರೋಹಳ್ಳಿ ಮತ್ತು ಮರಳವಾಡಿ ಎಂಬ ಎರಡು ಹೋಬಳಿಯನ್ನು ರಚನೆ ಮಾಡಲಾಗಿದೆ. 82 ಕಂದಾಯ ಗ್ರಾಮ, 176 ದಾಖಲೆ ಗ್ರಾಮಗಳು, 11 ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗಿವೆ.