ಕುಣಿಗಲ್: ರಸ್ತೆ ಅಪಘಾತದಲ್ಲಿ (Road Accident) ತೀವ್ರವಾಗಿ ಗಾಯಗೊಂಡಿದ್ದ ಕುಣಿಗಲ್ ಪೊಲೀಸ್ ಠಾಣೆಯ ಎಎಸ್‌ಐ ವೆಂಕಟೇಶ್ (50) ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆಯ ಎಎಸ್‌ಐ ವೆಂಕಟೇಶ್ ಕರ್ತವ್ಯ ನಿಮಿತ್ತ ಬುಧವಾರ ಸಂಜೆ ಯಡಿಯೂರಿಗೆ ಹೋಗಿ ಬೈಕ್‌ನಲ್ಲಿ ಕುಣಿಗಲ್‌ಗೆ ವಾಪಸ್ ಬರುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75ರ ಬಿ.ಎಂ. ರಸ್ತೆ ಆಲಪ್ಪನಗುಡ್ಡೆ ಸಮೀಪ ಯಡಿಯೂರು ಕಡೆಯಿಂದ ಬಂದ ಅಪರಿಚಿತ ವಾಹನ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಎಎಸ್‌ಐ ವೆಂಕಟೇಶ್ ಬೈಕ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಬೆಳ್ಳೂರು ಕ್ರಾಸ್‌ನ ಅಂದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!
ಶಿರಾ ತಾಲೂಕಿನ ಎಮ್ಮೆರಹಳ್ಳಿತಾಂಡ ನಿವಾಸಿಯಾದ ವೆಂಕಟೇಶ್, ಕಳೆದ ಇಪ್ಪತ್ತು ವರ್ಷಗಳಿಂದ ತಾಲೂಕಿನ ಹುಲಿಯೂರುದುರ್ಗ,ಅಮೃತೂರು ಹಾಗೂ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇತ್ತೀಚೆಗಷ್ಟೆ ಎಎಸ್‌ಐ ಆಗಿ ಬಡ್ತಿ ಹೊಂದಿ ಕುಣಿಗಲ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ವೆಂಕಟೇಶ್ ಅವರ ಮೃತದೇಹವನ್ನು ಗುರುವಾರ ಮಧ್ಯಾಹ್ನ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು ಈ ವೇಳೆ ಕುಣಿಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಗೂ ಪಟ್ಟಣದ ನಾಗರೀಕರು ಅಂತಿಮ ನಮನ ಸಲ್ಲಿಸಿದರು ಬಳಿಕ ಮೃತ ದೇಹವನ್ನು ಕುಟುಂಬಸ್ಥರು ಸ್ವ ಗ್ರಾಮಕ್ಕೆ ಕೊಂಡೊಯ್ದರು.