Site icon Vistara News

Murugha Seer: ಖಾಸಗಿ ಅಂಗಾಂಗ ಮುಟ್ಟಿ ದೌರ್ಜನ್ಯ; ಶ್ರೀಗಳ ರೂಮ್‌ಗೆ ಹೋಗಿ ಬಂದಾಗಿಂದ ಪೀರಿಯಡ್ಸ್ ಸರಿ ಆಗುತ್ತಿರಲಿಲ್ಲ; ಸಂತ್ರಸ್ತೆ ಹೇಳಿಕೆ

Murugha Seer

ಚಿತ್ರದುರ್ಗ: ಮುರುಘಾ ಶರಣರ (Murugha Seer) ವಿರುದ್ಧ ದಾಖಲಾಗಿರುವ ಎರಡನೇ ಪೋಕ್ಸೊ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಹಲವು ಸಂಗತಿಗಳು ಉಲ್ಲೇಖವಾಗಿದ್ದು, ಸಂತ್ರಸ್ತ ಬಾಲಕಿಯರು ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. ಶ್ರೀಗಳು ಭಾನುವಾರ ಕೊಠಡಿಗೆ ಕರೆಸಿಕೊಂಡು ಮತ್ತು ಬರುವ ಹಣ್ಣು ಇಲ್ಲವೇ ಚಾಕೋಲೆಟ್‌ ಕೊಡುತ್ತಿದ್ದರು. ಪ್ರಜ್ಞೆ ಬಂದಾಗ ಕಾಲು, ತೊಡೆ ಭಾಗದಲ್ಲಿ ನೋವಿತ್ತು. ಎರಡು ಬಾರಿ ಅವರ ರೂಮ್‌ಗೆ ಹೋಗಿಬಂದಾಗಿನಿಂದ ನನಗೆ ಸರಿಯಾಗಿ ಪೀರಿಯಡ್ಸ್‌ ಆಗುತ್ತಿರಲಿಲ್ಲ ಎಂದು 14 ವರ್ಷದ ಸಂತ್ರಸ್ತ ಬಾಲಕಿಯು ಸಿಆರ್‌ಪಿಸಿ 161 ರ ಅಡಿ ನೀಡಿದ್ದ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲು ಉಲ್ಲೇಖಿಸಲಾಗಿದೆ.

ಮುರುಘಾ ಮಠದ ಮುರುಘಾ ಶರಣರು ಮೊದಲ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದರು. ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಸಹ ವಜಾಗೊಂಡಿದೆ. ಈಗ ಮತ್ತೊಂದು ಕೇಸ್‌ನಲ್ಲಿ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಚಾರ್ಜ್‌ಶೀಟ್‌ ಒಟ್ಟು 761 ಪುಟಗಳನ್ನು ಹೊಂದಿದ್ದು, ಎರಡು ಭಾಗವಾಗಿ (ಎ ಮತ್ತು ಬಿ) ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತ ಬಾಲಕಿ ನೀಡಿರುವ ಹೇಳಿಕೆಯನ್ನು ದಾಖಲು ಮಾಡಲಾಗಿದ್ದು, ತಮ್ಮ ಮೇಲೆ ಶ್ರೀಗಳು ಯಾವ ರೀತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ? ಯಾರನ್ನೆಲ್ಲ ಬಳಸಿಕೊಂಡಿದ್ದಾರೆ ಎಂಬ ಬಗ್ಗೆ ಹೇಳಿಕೆಯನ್ನು ದಾಖಲಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲೇನಿದೆ?

14 ವರ್ಷದ ಸಂತ್ರಸ್ತ ಬಾಲಕಿಯು ಸಿಆರ್‌ಪಿಸಿ 161 ರ ಅಡಿ ಹೇಳಿಕೆ ನೀಡಿದ್ದು, ವಾರ್ಡನ್ ರಶ್ಮಿ ಮುರುಘಾಶ್ರೀ ಬಳಿ ಹೋಗಲು ಟೈಂ ಟೇಬಲ್ ಹಾಕಿದ್ದರು. ಪ್ರತಿ ದಿನ ಹಾಸ್ಟೆಲ್‌ನ ಇಬ್ಬರು ಮಕ್ಕಳು ಮುರುಘಾಶ್ರೀ ಬಳಿ ಹೋಗಬೇಕಿತ್ತು. ದತ್ತು ಕೇಂದ್ರದ ಮಕ್ಕಳನ್ನೂ ಕರೆದುಕೊಂಡು ಹೋಗಬೇಕಿತ್ತು ಎಂದು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: KPSC Departmental Examination : ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ

ಲಾಕ್‌ಡೌನ್ ವೇಳೆ ಮಕ್ಕಳೊಂದಿಗೆ ಕಾಲ ಕಳೆಯುವುದು ಮುರುಘಾಶ್ರೀಗೆ ರೂಢಿ ಆಗಿತ್ತು. ಮೊದಲ ಭಾನುವಾರ ಮುರುಘಾಶ್ರೀ ಬಳಿಗೆ ಹೋದಾಗ ಚಾಕೋಲೆಟ್ ನೀಡಿದ್ದರು. ಮಧ್ಯಾಹ್ನದವರೆಗೆ ಮುರುಘಾಶ್ರೀ ರೂಮ್‌ನಲ್ಲಿದ್ದು ಬಂದಿದ್ದೆ. ಪ್ರತಿ ಭಾನುವಾರ‌ ನಾನು ಮುರುಘಾಶ್ರೀ ರೂಮ್‌ಗೆ ಹೋಗಬೇಕಿತ್ತು. ಸ್ವಾಮೀಜಿ ನೀಡಿದ ಚಾಕೋಲೆಟ್‌ ತಿಂದ ಬಳಿಕ ನಿದ್ದೆ ಬಂದು ಮಲಗಿದ್ದೆ. ಎಚ್ಚರವಾದಾಗ ಸುಸ್ತು ಹಾಗೂ ಕಾಲು, ತೊಡೆ ಭಾಗದಲ್ಲಿ ನೋವಿತ್ತು. ಮತ್ತೊಂದು ಭಾನುವಾರ ಹೋದಾಗ ಮತ್ತೆ ಚಾಕೋಲೆಟ್ ನೀಡಿದರು. ಎಚ್ಚರವಾದಾಗ ಮುರುಘಾಶ್ರೀ ಏನೋ ಮಾಡಿದ್ದಾರೆ ಎಂದು ತಿಳಿಯಿತು. ಟೈಂ ಟೇಬಲ್ ಬದಲಾದ ಕಾರಣ ಸೋಮವಾರ ಹೋಗಬೇಕಾಯಿತು. ಕುರ್ಚಿ ಮೇಲೆ ಕುಳಿತಿದ್ದ ಮುರುಘಾಶ್ರೀ ತೊಡೆ ಮೇಲೆ ಕೂರಿಸಿಕೊಂಡರು. ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದರು. ಮುರುಘಾಶ್ರೀ ರೂಮಿನಲ್ಲಿ 2 ಸಲ ಮಲಗಿದ್ದಾಗ ಬಳಸಿಕೊಂಡಿದ್ದಾರೆ ಅನ್ನಿಸುತ್ತಿದೆ. ಮುರುಘಾಶ್ರೀ ರೂಮ್‌ಗೆ ಹೋಗಿ ಬಂದಾಗಿಂದ ಸರಿಯಾಗಿ ಪೀರಿಯಡ್ಸ್ ಆಗುತ್ತಿಲ್ಲ. ವಾರ್ಡನ್ ರಶ್ಮಿ ಟೈಂ ಟೇಬಲ್‌ನಂತೆ ಹೋಗದಿದ್ದರೆ ಹೊಡೆಯುತ್ತಿದ್ದರು ಎಂದು ಬಾಲಕಿ ನೀಡಿರುವ ಹೇಳಿಕೆಯನ್ನು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಶ್ರೀಗಳ ಸಂತ್ರಸ್ತ ಬಾಲಕಿಯ ಜತೆಗೆ ಮತ್ತೂ ನಾಲ್ವರನ್ನು ಕೊಠಡಿಗೆ ಕರೆಸಿಕೊಂಡಿದ್ದರು ಎಂಬ ಸಂಗತಿಯನ್ನೂ ಉಲ್ಲೇಖಿಸಲಾಗಿದೆ. ಇವರನ್ನು ಟೈಂ ಟೇಬಲ್‌ ಆಧಾರದಲ್ಲಿ ಕರೆಸಿಕೊಂಡು ಅವರ ಜತೆಗೆ ಪಾರ್ಕ್‌ನಲ್ಲಿ ವಾಕಿಂಗ್‌ ಸಹ ಮಾಡುತ್ತಿದ್ದರು ಎಂದೂ ಹೇಳಲಾಗಿದೆ. ಪಾರ್ಕ್‌ನಿಂದ ಬಂದ ಬಳಿಕ ಕಿಟ್‌ಕ್ಯಾಟ್‌ ಚಾಕೋಲೆಟ್‌ ನೀಡಿದ ಮೇಲೆ ಎಚ್ಚರವಿರಲಿಲ್ಲ. ಎಚ್ಚರವಾದಾಗ ಕಾಲು, ತೊಡೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು ಎಂದು ಬಾಲಕಿ ನೀಡಿರುವ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ಮತ್ತೆ ಟೈಂ ಟೇಬಲ್‌ ಪ್ರಕಾರ, ಭಾನುವಾರ ತನ್ನ ಜತೆ ಅದೇ ನಾಲ್ವರನ್ನು ಕರೆಸಿಕೊಂಡು ಚಾಕೋಲೆಟ್‌ ಕೊಟ್ಟರು. ಪುನಃ ಪ್ರಜ್ಞೆ ಹೋಗಿತ್ತು. ಪ್ರಜ್ಞೆ ಬಂದ ಮೇಲೆ ನನಗೆ ತುಂಬಾ ಸುಸ್ತಾಗಿತ್ತು. ಸ್ವಾಮೀಜಿ ನನಗೆ ಏನೋ ಮಾಡಿದ್ದಾರೆ ಎಂದು ಎನ್ನಿಸಿತು. ಬಳಿಕ ಹಾಸ್ಟೆಲ್‌ಗೆ ಹೋಗಿ ರೆಸ್ಟ್‌ ಮಾಡಿದೆ. ನಂತರ ನನ್ನ ಟೈಂ ಟೇಬಲ್‌ ಅನ್ನು ಬದಲಾಯಿಸಿ ಸೋಮವಾರಕ್ಕೆ ಕಳುಹಿಸಲಾಯಿತು. ಆದರೆ, ಜತೆಗಾರ್ತಿಯನ್ನು ಬದಲಾಯಿಸಲಾಗಿತ್ತು. ಆದರೆ, ದತ್ತು ಕೇಂದ್ರದ ಅದೇ ಮೂವರು ಮಕ್ಕಳನ್ನು ಕಳುಹಿಸಿದ್ದರು. ಅಂದು ತನ್ನನ್ನು ತೊಡೆ ಮೇಲೆ ಕೂರಿಸಿಕೊಂಡ ಸ್ವಾಮೀಜಿ ಎಷ್ಟನೇ ತರಗತಿ ಎಂದು ಕೇಳಿದರು. ಬಳಿಕ ನನ್ನ ಕುತ್ತಿಗೆ, ಎದೆ ಭಾಗವನ್ನು ಮುಟ್ಟಿದರು. ನಾನು ಭಯವಾಗಿ ಎದ್ದು ಬಂದೆ. ಆದರೆ, ಶ್ರೀಗಳು ಅದಕ್ಕೇನೂ ಹೇಳಲಿಲ್ಲ. ಆ ಬಳಿಕ ನಾನು ತಪ್ಪಿಸಿಕೊಳ್ಳುತ್ತಿದ್ದೆ. ಟೈಂ ಟೇಬಲ್‌ ಪ್ರಕಾರ ಪಾರ್ಕ್‌ಗೆ ವಾಕಿಂಗ್‌ ಹೋಗಿ ಬಳಿಕ ನನಗೆ ಹೋಂವರ್ಕ್‌ ಇದೆ ಎಂದು ಹೇಳಿ ಅಲ್ಲಿಂದ ಹಾಸ್ಟೆಲ್‌ಗೆ ಬಂದು ಬಿಡುತ್ತಿದ್ದೆ. ಆದರೆ, ಅಲ್ಲಿಗೆ ಹೋಗಿ ಬಂದಾಗಿನಿಂದ ನನಗೆ ಸರಿಯಾಗಿ ಪೀರಿಯಡ್ಸ್‌ ಆಗುತ್ತಿರಲಿಲ್ಲ. ಹೋಗದೇ ಇದ್ದರೆ ವಾರ್ಡನ್‌ ರಶ್ಮಿ ಅಕ್ಕ ಹೊಡೆಯುತ್ತಿದ್ದರು ಎಂದು ಬಾಲಕಿ ನೀಡಿರುವ ಹೇಳಿಕೆಯು ಜಾರ್ಜ್‌ಶೀಟ್‌ನಲ್ಲಿ ದಾಖಲಾಗಿದೆ.

ಹೇಳಿಕೆ ಆಧಾರದ ಮೇಲೆ ಕೇಸ್‌ ದಾಖಲು

ಒಟ್ಟು 761 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಮಕ್ಕಳು‌ ಮತ್ತು ಕುಟುಂಬಸ್ಥರ ಅನುಕಂಪ, ಗೌರವ ಗಳಿಸಿ ದೌರ್ಜನ್ಯ ಎಸೆಗಲಾಗಿದೆ. ಹಾಸ್ಟೆಲ್ ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ಕೊಠಡಿಗೆ ಕರೆಸಿಕೊಂಡಿದ್ದರು. ಅಮಲು ಭರಿಸುವ ಚಾಕೋಲೆಟ್ ನೀಡಿ ಲೈಂಗಿಕ ದೌರ್ಜನ್ಯ ಎಸೆಗಲಾಗಿದೆ. ಕಲಂ 376(C), 376(2)(n), 376(AB), 376(3), r/w 34, ಐಪಿಸಿ & u/s 5(L), 6,7 POCSO Act -2012 & sec: 3(f), 7 ಧಾರ್ಮಿಕ‌ ಕೇಂದ್ರ ದುರ್ಬಳಕೆ 1988
& sec 77 Juvenile Justice Act 2015 ಅಡಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಸಂತ್ರಸ್ತರು ನೀಡಿರುವ ಸಿಆರ್‌ಪಿಸಿ 161, 164 ಹೇಳಿಕೆ ಆಧಾರದ ಮೇಲೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಇದನ್ನೂ ಓದಿ: Suicide case : ಕೆಎಎಸ್‌ ಅಧಿಕಾರಿ ರೇಷ್ಮಾ ತಾಳಿಕೋಟಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಎ1 ಆರೋಪಿ ಮುರುಘಾಶ್ರೀ, ಎ2 ಆರೋಪಿ ವಾರ್ಡನ್ ರಶ್ಮಿ ವಿರುದ್ಧ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಕಲಂ 173 (8) ಸಿಆರ್‌ಪಿಸಿ ಅಡಿಯಲ್ಲಿ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಲಾಗಿದೆ. ದೂರಿನಲ್ಲಿ ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ದೃಢಪಟ್ಟಿಲ್ಲ. ಮುರುಘಾಶ್ರೀ ವಿರುದ್ಧ ಪಿತೂರಿ ಕೇಸ್, ಕೌಂಟರ್ ಬ್ಲಾಸ್ಟ್ ಕೇಸ್ ಎಂದು ಕಂಡು ಬರುತ್ತದೆ. ಬಾಕಿ ತನಿಖೆ ಪೂರ್ಣಗೊಳಿಸಿ ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

Exit mobile version